ಕಾಂಗ್ರೆಸ್ ಅವಧಿಯಲ್ಲಿ ಸರ್ಕಾರಿ ಜಾಗ ಒತ್ತುವರಿ

ಕಾಂಗ್ರೆಸ್ ಅವಧಿಯಲ್ಲಿ ಸರ್ಕಾರಿ ಜಾಗ ಒತ್ತುವರಿ

ಕೆರೆ, ಪಾರ್ಕು, ರಸ್ತೆ ಒತ್ತುವರಿ ಮುಲಾಜಿಲ್ಲದೆ ತೆರವು – ರಾಜನಹಳ್ಳಿ ಶಿವಕುಮಾರ್, ದೂಡಾ ಅಧ್ಯಕ್ಷ

ದಾವಣಗೆರೆ, ನ. 20- ದಾವಣಗೆರೆ-ಹರಿಹರ ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ ಕಾಂಗ್ರೆಸ್ ಆಡಳಿತಾವಧಿಯಲ್ಲಿ ಸರ್ಕಾರಿ ಭೂಮಿ ಒತ್ತುವರಿಯಾಗಿದ್ದು,  ಖಾಸಗಿ ವ್ಯಕ್ತಿಗಳು ಸರ್ಕಾರಿ ಜಾಗವನ್ನು ತಮ್ಮ ಹೆಸರಿಗೆ ಮಾಡಿಕೊಂಡಿದ್ದಾರೆ. ಸರ್ವೇ ನಡೆಸಿ ತಪ್ಪಿತಸ್ಥರ ಮೇಲೆ ಮುಲಾಜಿಲ್ಲದೆ ಕ್ರಮ ಕೈಗೊಳ್ಳಲಾಗುವುದು ಎಂದು ಅಧ್ಯಕ್ಷ ರಾಜನಹಳ್ಳಿ ಶಿವಕುಮಾರ್ ಹೇಳಿದ್ದಾರೆ.

ತಮ್ಮ ಕಚೇರಿಯಲ್ಲಿಂದು ಪತ್ರಿಕಾಗೋಷ್ಠಿ ನಡೆಸಿ ದಾಖಲೆ ಸಹಿತ ಮಾಹಿತಿ ನೀಡಿದ ಅವರು, ಬಾತಿ ಕೆರೆ ಅಭಿವೃದ್ಧಿ ಪಡಿಸುವ ನಿಟ್ಟಿನಲ್ಲಿ ಸರ್ವೇ ಮಾಡಿಸಿದಾಗ ದೊಡ್ಡಬಾತಿ ಗ್ರಾಮದ ಸರ್ವೇ ನಂ.148 ಹಾಗೂ 149ರಲ್ಲಿನ ಸುಮಾರು 4 ಎಕರೆ 2 ಗುಂಟೆ ಭೂಮಿಯನ್ನು ಖಾಸಗಿ ವ್ಯಕ್ತಿಗಳು  ಒತ್ತುವರಿ ಮಾಡಿ ಬಡಾವಣೆ ನಿರ್ಮಿಸಿರುವುದು  ಗಮನಕ್ಕೆ ಬಂತು ಎಂದರು.

ಕೆರೆ ನೀರು ನಿಲ್ಲುವ ಸ್ಥಳ ರಿಸನಂ.150ರ ಪ್ರದೇಶದಲ್ಲಿ 73.11 ಎಕರೆ ಪ್ರದೇಶವಿದೆ. ಕೆರೆಯ ಪಕ್ಕದಲ್ಲಿ ಹೆಚ್ಚುವರಿಯಾಗಿ 44.4 ಎಕರೆ ಪ್ರದೇಶವನ್ನು 1972ರಲ್ಲಿ ಸರ್ಕಾರ ವಶಪಡಿಸಿಕೊಂಡಿತ್ತು. ಈ ಜಮೀನು ಇಲ್ಲಿಯವರೆಗೆ ಪಹಣಿಯಲ್ಲಿ ಇಂಡೀಕರಣಗೊಂಡಿರಲಿಲ್ಲ. ತಾವು ತಹಶೀಲ್ದಾರ್ ಅವರಿಗೆ ಪತ್ರ ಬರೆದು ಇಂಡೀಕರಣ ಮಾಡಿಸಿದ್ದಾಗಿ ಹೇಳಿದರು. ಸರ್ವೇ ನಂ.148 ಹಾಗೂ 149ರಲ್ಲಿ ಹಿಂದೆ ಭೂ ಪರಿವರ್ತನೆಯಾದ ಆದೇಶವನ್ನು ವಜಾ ಮಾಡಲು ಕೋರಿ ಜಿಲ್ಲಾಧಿಕಾರಿಗಳಿಗೆ ಪತ್ರ ಬರೆಯಲಾಗಿದೆ. ಜಿಲ್ಲಾಧಿಕಾರಿ ಆದೇಶ ಬಂದ ನಂತರ ಒತ್ತು ವರಿ ಬಡಾವಣೆ ತೆರವಿಗೆ ನಾವು ಮುಂದಿನ ಕ್ರಮ ಕೈಗೊಳ್ಳುತ್ತೇವೆ ಎಂದು ಹೇಳಿದರು.

ಈ ಎಲ್ಲಾ ಒತ್ತುವರಿಗಳು ಕಾಂಗ್ರೆಸ್‌ನ ರಾಮಚಂದ್ರಪ್ಪ ಅವರು ಅಧ್ಯಕ್ಷರಾಗಿದ್ದ ವೇಳೆ, ಆಯುಕ್ತರಾಗಿ ಆದಪ್ಪ ಅವರಿದ್ದ ವೇಳೆ ನಡೆದಿವೆ. ತಪ್ಪಿತಸ್ಥರು ಯಾರೇ ಆಗಿದ್ದರೂ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.

ನಗರದ ಲಕ್ಷ್ಮೀ ಫ್ಲೋರ್‌ಮಿಲ್‌ನಿಂದ ಕುಂದುವಾಡ ಕೆರೆಗೆ ಹೋಗುವ ಮಾರ್ಗದ ಎಡಬದಿ ಸರ್ವೇ ನಂ.39 ಹಾಗೂ 40 ರಲ್ಲಿ ಮಾಜಿ ಸಚಿವರ ಹತ್ತಿರ ಸಂಬಂಧಿ ಯೊಬ್ಬರು ಸರ್ಕಾರಿ ಜಾಗವನ್ನು ಒತ್ತುವರಿ ಮಾಡಿಕೊಂಡಿದ್ದರು. 120 ಅಡಿಯ ರಿಂಗ್ ರಸ್ತೆಯನ್ನು 110 ಅಡಿ ಎಂದು ದಾಖಲೆ ತೋರಿಸಿ, 10 ಅಡಿ ರಸ್ತೆ ಅತಿಕ್ರಮಿಸಿದ್ದರು. ಈಗಾಗಲೇ ಅವರಿಗೆ ಒತ್ತುವರಿ ತೆರವಿಗೆ ನೊಟೀಸ್ ನೀಡಲಾ ಗಿದೆ. ಅಲ್ಲದೇ ಅಲ್ಲಿನ ಸರ್ಕಾರಿ ಜಾಗದಲ್ಲಿ ಕೆರೆಗೆ ಬರುವ ವಾಯು ವಿಹಾರಿಗಳಿಗೆ ಪಾರ್ಕಿಂಗ್ ವ್ಯವಸ್ಥೆ ಕಲ್ಪಿ ಸಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದರು.

ಪಾಲಿಕೆ ವ್ಯಾಪ್ತಿಯ ಎಲ್ಲಾ ಪಾರ್ಕ್‌ ಗಳ ಸರ್ವೇ: ಮಹಾನಗರ ಪಾಲಿಕೆ ವ್ಯಾಪ್ತಿ ಯಲ್ಲಿ ಬರುವ ಎಲ್ಲಾ ಪಾರ್ಕುಗಳನ್ನು ಸರ್ವೇ ನಡೆಸುವಂತೆ ಆದೇಶಿಸಲಾಗಿದೆ. ಯಾವುದೇ ವ್ಯಕ್ತಿ ಸರ್ಕಾರಿ ಜಾಗ ಒತ್ತುವರಿ ಮಾಡಿದ್ದರೆ ತೆರವುಗೊಳಿಸಲಾಗುವುದು ಎಂದ ಶಿವಕುಮಾರ್, ಈಗಾಗಲೇ ನಗ ರದ ಪಾರ್ಕ್ ಜಾಗದಲ್ಲಿ ಖಾಸಗಿ ವ್ಯಕ್ತಿಯೊ ಬ್ಬರು 2 ಕೋಟಿ ವೆಚ್ಚದ 2 ಕಟ್ಟಡಗಳನ್ನು ನಿರ್ಮಿಸುತ್ತಿದ್ದಾರೆ. ದೂಡಾದಿಂದ ಕೆಲಸ ನಿಲ್ಲಿಸುವಂತೆ ಈಗಾಗಲೇ ಸೂಚಿಸ ಲಾಗಿದೆ. ಕಟ್ಟಿದ ಕಟ್ಟಡವನ್ನು ಶೀಘ್ರವೇ ತೆರವುಗೊಳಿಸಲಿದ್ದೇವೆ ಎಂದರು.

ಅಗಸನಕೆರೆ ಒತ್ತುವರಿ: ಹರಿಹರದ ಬಳಿ ಇರುವ ಅಗಸನಕೆರೆಯೂ ಒತ್ತುವರಿ ಯಾಗಿದ್ದು, ಶೀಘ್ರವೇ  ಒತ್ತುವರಿ ತೆರವು ಗೊಳಿಸಿ ಹರಿಹರ ಜನತೆಗೆ ಕುಡಿ ಯುವ ನೀರಿಗೆ ಅನುಕೂಲವಾಗುವಂತೆ ಕೆರೆ ಅಭಿವೃದ್ಧಿ ಪಡಿಸಲಾಗುವುದು ಎಂದರು.

ಪತ್ರಿಕಾಗೋಷ್ಠಿಯಲ್ಲಿ ದೂಡಾ ಸದಸ್ಯರಾದ ಜಯರುದ್ರೇಶ್, ದೇವಿರಮ್ಮ, ಸೌಭಾಗ್ಯ ಮುಕುಂದ್, ರಾಜು ರೋಖಡೆ ಉಪಸ್ಥಿತರಿದ್ದರು.

Leave a Reply

Your email address will not be published.