ಡಿ.5ರ ಕರ್ನಾಟಕ ಬಂದ್‍ಗೆ ಅಖಿಲ ಭಾರತ ಹಿಂದೂ ಮಹಾಸಭಾ ಬೆಂಬಲ

ದಾವಣಗೆರೆ, ನ.19- ಮತ ಬ್ಯಾಂಕ್ ರಾಜಕಾರಣಕ್ಕಾಗಿ ಮರಾಠ ಪ್ರಾಧಿಕಾರ, ವೀರಶೈವ-ಲಿಂಗಾಯತ ಅಭಿವೃದ್ಧಿ ನಿಗಮ ರಚನೆ ಮಾಡಿರುವ ಬಿಜೆಪಿ ನೇತೃತ್ವದ ರಾಜ್ಯ ಸರ್ಕಾರದ ವಿರುದ್ಧ ಡಿಸೆಂಬರ್ 5ರಂದು ಕನ್ನಡಪರ ಸಂಘಟನೆಗಳು ನೀಡಿರುವ ಕರ್ನಾಟಕ ಬಂದ್‍ಗೆ ಅಖಿಲ ಭಾರತ ಹಿಂದೂ ಮಹಾಸಭಾ ಬೆಂಬಲ ಸೂಚಿಸಿದೆ.

ಅಧಿಕಾರಕ್ಕೂ ಮುಂಚೆ ಭ್ರಷ್ಟಾಚಾರ ಮುಕ್ತ ಭಾರತ, ಹಿಂದೂ ರಾಷ್ಟ್ರದ ಸಂಕಲ್ಪ ಸೇರಿದಂತೆ ಇತರೆ ವಿಚಾರಗಳನ್ನು ಪ್ರತಿಪಾದಿಸುತ್ತಿದ್ದ ಬಿಜೆಪಿ ಅಧಿಕಾರಕ್ಕೆ ಬಂದಾದ ಮೇಲೆ ವಿವಿಧ ಜಾತಿಗಳ ಪ್ರಾಧಿಕಾರ, ನಿಗಮಗಳನ್ನು ರಚನೆ ಮಾಡುವ ಮೂಲಕ ಅಖಂಡ ಹಿಂದೂ ಸಮುದಾಯವನ್ನು ಒಡೆದು ಆಳುತ್ತಿರುವುದು ಅತ್ಯಂತ ಖಂಡನೀಯವಾಗಿದೆ ಎಂದು ಸುದ್ದಿಗೋಷ್ಠಿಯಲ್ಲಿ ಮಹಾಸಭಾದ ರಾಜ್ಯ ಕಾರ್ಯಾಧ್ಯಕ್ಷ ರಾಜೇಶ್ ಪವಿತ್ರನ್ ಅಸಮಾಧಾನ ವ್ಯಕ್ತಪಡಿಸಿದರು.

ಭಾರತೀಯ ಜನತಾ ಪಾರ್ಟಿಯು ಕಾಂಗ್ರೆಸ್ ಮಾಡಿದ ತಪ್ಪುಗಳನ್ನೇ ಮಾಡುವ ಮೂಲಕ ಆ ಪಕ್ಷದ ಹಾದಿಯನ್ನೇ ತುಳಿಯುತ್ತಿದ್ದು, ದೇಶದಲ್ಲಿ ಕಾಂಗ್ರೆಸ್‍ನಂತೆ ಬಿಜೆಪಿಯನ್ನು ಜನತೆ ತಿರಸ್ಕರಿಸುವ ಕಾಲ ದೂರವಿಲ್ಲ. ನಮ್ಮ ಅಖಿಲ ಭಾರತ ಹಿಂದೂ ಮಹಾಸಭಾವು ರಾಜಕಾರಣದಲ್ಲಿ ಹೊಸ ಹೆಜ್ಜೆ ಇಡಲಿದ್ದು, ರಾಜಕೀಯ ಧೃವೀಕರಣ ಆರಂಭವಾಗಲಿದೆ ಎಂದರು.

ಮಹಾಸಭಾದ ಮುಖಂಡ ಧರ್ಮೇಂದ್ರ ಮಾತನಾಡಿ, ದೇಶದ ವಿಭಜನೆಯನ್ನು ತಡೆದ ನಾಥುರಾಮ್ ಗೋಡ್ಸೆ ಪುತ್ಥಳಿಯನ್ನು ಎಲ್ಲಾ ಜಿಲ್ಲೆಗಳಲ್ಲಿಯೂ ಸ್ಥಾಪಿಸಬೇಕು. ಗಾಂಧಿ ಹತ್ಯೆಯ ಹಿಂದಿರುವ ಸತ್ಯವನ್ನು ತಿಳಿಯಬೇಕಾದರೆ ಪಠ್ಯ ಪುಸ್ತಕಗಳಲ್ಲಿ ಗೋಡ್ಸೆ ಕುರಿತ ಪಾಠಗಳನ್ನು ಪರಿಚಯಿಸಬೇಕು. ಗಾಂಧೀಜಿಗೆ ಯಾವುದೇ ಸರ್ಕಾರವೂ ರಾಷ್ಟ್ರಪಿತ ಬಿರುದು ನೀಡಿಲ್ಲ. ಆದ್ದರಿಂದ ಗಾಂಧಿಗೆ ನೀಡುತ್ತಿರುವ ರಾಷ್ಟ್ರಪಿತ ಗೌರವವನ್ನು ತೆಗೆದು ಹಾಕಿ 1857ರ ಪ್ರಥಮ ಸ್ವಾತಂತ್ರ್ಯ ಸಂಗ್ರಾಮದಿಂದ ಹಿಡಿದು ಭಾರತ ಸ್ವತಂತ್ರಗೊಂಡವರೆಗೂ ದೇಶಕ್ಕಾಗಿ ಪ್ರಾಣಾರ್ಪಣೆ, ತ್ಯಾಗ, ಬಲಿದಾನ ಮಾಡಿದ ಎಲ್ಲಾ ಹೋರಾಟಗಾರರಿಗೂ ರಾಷ್ಟ್ರಪಿತ ಗೌರವ ನೀಡಬೇಕೆಂದು ಆಗ್ರಹಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಮಹಾಸಭಾ ಜಿಲ್ಲಾಧ್ಯಕ್ಷ ಜಿ.ಅರುಣ್, ಮುಖಂಡರಾದ ಬಾಲರಾಜ್, ನವೀನ್‍ಕುಮಾರ್, ಎಸ್.ಅರುಣಕುಮಾರ್, ಶ್ರೀನಿವಾಸ್ ಮತ್ತಿತರರು ಹಾಜರಿದ್ದರು.

Leave a Reply

Your email address will not be published.