ವೈದ್ಯರು

ವೈದ್ಯರು

ವೈದ್ಯನಾಗುವುದೆಂದರೆ
ಸುಲಭದ ಮಾತಲ್ಲ
ಛಲ ಬೇಕು ಮನದಲ್ಲಿ
ಮೂರು ದಶಕಕೂ ಮಿಕ್ಕಿ
ಓದುತ್ತಲಿರಬೇಕು ಅರ್ಧ
ಬದುಕು ಕಲಿಯುವುದಕ್ಕೇ ಮೀಸಲು..

ಬಲಬೇಕು ಮನೆಯಲ್ಲಿ
ಮನೆಯ ಮಂದಿ ಎಲ್ಲ
ಕಣ್ಣು ಕಿರಿದು ಮಾಡುತ
ಮನೆಯ ಮಗ ಬಂದು
ಮನೆಯ ಸೇರಲಿ ಎಂದು
ದಾರಿ ಕಾಯುವಲ್ಲಿ.

ರಾತ್ರಿಯೋ ಹಗಲೋ
ವಾರದ ಕೊನೆ ದಿನವೋ
ಮೊದಲದಿನದ ಮುಂಜಾನೆಯೋ
ಅರಿವಿಲ್ಲದ ಬದುಕು
ಕಾಲ ಸರಿದದ್ದು ಗೊತ್ತಾಗದ ಹಾಗೆ.

ಪತ್ನಿ ಮಕ್ಕಳ ಜೊತೆ
ಮತ್ತೆ ಹೆತ್ತವರ ಜೊತೆ
ಕಾಲ ಕಳೆದದ್ದಕ್ಕಿಂತ
ರೋಗಿಗಳ ಜೊತೆಗೆ
ಅವರ ನೆಂಟರ ಜೊತೆ
ಸೇರಿ ಬದುಕಿದ್ದೇ ಹೆಚ್ಚು
ನೂರೆಂಟು ಕಾನೂನು
ನಿತ್ಯ ಕಾಡುವ ತೊಡಕು
ವಾಸಿಯಾದರೆ ನಾರಾಯಣ
ಇಲ್ಲದಿರೆ ಗೋವಿಂದ…

ಎರಡು ಹೊತ್ತಿನ ಊಟಕ್ಕೆ
ಒಂದಿಷ್ಟು ಆಸರೆಗೆ ಜರೂರಿದೆಯೇ
ಇಷ್ಟೊಂದು ದುಡಿಯುವುದು
ಅನಿಸಿದಾಗಲೆಲ್ಲ
ಒಳದನಿಯು ನುಡಿದೀತು
“ಬದುಕಲೆನಿತೋ ದಾರಿ
ಬದುಕಿಸಲು ಇದೊಂದೇ ದಾರಿ”.

ಕಷ್ಟವೇನೋ ಉಂಟು
ಸಾರ್ಥಕತೆ ಇದೆಯಲ್ಲ
ಕಣ್ಣೀರೊರೆಸಿದ ತೃಪ್ತಿ
ಧನ್ಯತೆಯ ಸಂತೃಪ್ತಿ.


ಡಾ. ಶಿವಾನಂದ ಕುಬಸದ
ದಾವಣಗೆರೆ.