ಕೋವಿಡ್ ಕೇರ್ ಸೆಂಟರ್‍ಗಳು ಸ್ಥಗಿತ

ಕೊರೊನಾ ಸೋಂಕಿತರ ಸಂಖ್ಯೆ ಇಳಿಕೆ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಸೂಚನೆ

ದಾವಣಗೆರೆ, ನ.4- ಕೋವಿಡ್ ಸೋಂಕಿಗೆ ಒಳಗಾದ ರೋಗಿಗಳಿಗೆ ವೈದ್ಯಕೀಯ ನೆರವು ನೀಡುವ ಸಲುವಾಗಿ ಜಿಲ್ಲೆಯಾದ್ಯಂತ ತೆರೆಯಲಾಗಿದ್ದ ಕೋವಿಡ್ ಕೇರ್‌ ಸೆಂಟರ್‍ಗಳನ್ನು ಸ್ಥಗಿತಗೊಳಿಸುವಂತೆ ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ಜಿಲ್ಲಾಡಳಿತ ಭವನದ ಕಚೇರಿ ಸಭಾಂಗಣದಲ್ಲಿ ಬುಧವಾರ ಏರ್ಪಡಿಸಿದ್ದ ಕೋವಿಡ್ ನಿರ್ವಹಣಾ ಸಮಿತಿ ಸಭೆಯಲ್ಲಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಸದ್ಯ 616 ಸಕ್ರಿಯ ಕೊರೊನಾ ಪಾಸಿಟಿವ್ ಪ್ರಕರಣಗಳಿದ್ದು, ಅವುಗಳಲ್ಲಿ 131 ಜನ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. 417 ಜನ ಹೋಂ ಐಸೋಲೇಷನ್‍ನಲ್ಲಿ ದ್ದಾರೆ.  ಸದ್ಯ ಯಾವುದೇ ಕೊರೊನಾ ಪೀಡಿತರು ಕೋವಿಡ್ ಕೇರ್ ಸೆಂಟರ್‍ಗಳಲ್ಲಿ ಇಲ್ಲದ ಕಾರಣ ಅವುಗಳನ್ನು ಸ್ಥಗಿತಗೊಳಿಸಬೇಕು. ಅಲ್ಲಿ ಕಾರ್ಯನಿರ್ವಹಿ ಸುತ್ತಿದ್ದ ವಿವಿಧ ಇಲಾಖಾ ಸಿಬ್ಬಂದಿಗಳನ್ನು ವಾಪಾಸ್ ಮಾತೃ ಇಲಾಖೆಗೆ ಕಳುಹಿಸಿಕೊಡುವಂತೆ ತಿಳಿಸಿದರು.

ಮುಂದಿನ ಚಳಿಗಾಲದ ದಿನಗಳಲ್ಲಿ ಕೊರೊನಾ ಪ್ರಕರಣಗಳು ಹೆಚ್ಚಾಗುವ ಸುಳಿವಿದ್ದುಸ ತಕ್ಷಣಕ್ಕೆ ಕೈಗೊಳ್ಳ ಬೇಕಾದ ಎಲ್ಲಾ ಸಿದ್ದತೆಗಳನ್ನು ಜಿಲ್ಲಾಡಳಿತ ಮಾಡಿ ಕೊಂಡಿದೆ. ಹಾಗಾಗಿ ಮತ್ತೆ ಅಗತ್ಯ ಬಿದ್ದರೆ ಕೋವಿಡ್ ಕೇರ್ ಸೆಂಟರ್ ಆರಂಭಿಸಲಾಗುವುದು ಎಂದರು.

ಎಲ್ಲಾ ಆಸ್ಪತ್ರೆ, ನರ್ಸಿಂಗ್ ಹೋಂಗಳು ತಮ್ಮಲ್ಲಿಗೆ ಬರುವ ರೋಗಿಗಳಿಗೆ ಕಡ್ಡಾಯವಾಗಿ ಕೋವಿಡ್ ಟೆಸ್ಟ್ ನಡೆಸಬೇಕು. ಒಂದು  ವೇಳೆ ಟೆಸ್ಟ್ ಮಾಡಿಸಿಕೊಳ್ಳಲು ನಿರಾಕರಿಸಿದವರಿಗೆ ವಿಪತ್ತು ನಿರ್ವಹಣಾ ಕಾಯ್ದೆ ಅಡಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದರು.

ಇ-ಸಂಜೀವಿನಿಗೆ ಒತ್ತು : ವಿವಿಧ ಕಾಯಿಲೆಗಳಿಂದ ಬಳಲುತ್ತಿರುವವರು ಇ-ಸಂಜೀವಿನಿ ಆಪ್ ಬಳಸುವ ಮೂಲಕ ಮನೆಯಿಂದಲೇ ವೈದ್ಯರನ್ನು ಸಂಪರ್ಕಿಸಿ ಚಿಕಿತ್ಸೆ ಪಡೆಯಬಹುದು.

ಆಸ್ಪತ್ರೆಗೆ ತೆರಳಬೇಕಾದ ಪ್ರಕರಣ ಹೊರತುಪಡಿಸಿ ಸಣ್ಣ ಪುಟ್ಟ ಕಾಯಿಲೆಯವರು ವಿಡಿಯೋ ಕಾಲ್ ಮುಖಾಂತರ ಇ-ಪ್ರಿಸ್ಕ್ರಿಪ್ಷನ್ ಪಡೆಯಬಹುದು. ಇದನ್ನೇ ಹೆಚ್ಚು ಹೆಚ್ಚು ಪ್ರಚುರಪಡಿಸಬೇಕು ಎಂದು ಆರೋಗ್ಯಾಧಿಕಾರಿಗಳಿಗೆ ಸೂಚಿಸಿದರು.

ಡಿಎಲ್‍ಓ ಡಾ.ಮುರುಳೀಧರ್ ಮಾತನಾಡಿ, ಈಗಾಗಲೇ ಇ-ಸಂಜೀವಿನಿಯಡಿ 282 ಜನ ಪ್ರಯೋಜನ ಪಡೆದಿದ್ದಾರೆ ಎಂದರು.

ಆತ್ಮನಿರ್ಭರ ಯೋಜನೆ ಚುರುಕುಗೊಳಿಸಿ: ಕೇಂದ್ರ ಸರ್ಕಾರದ ಆತ್ಮ ನಿರ್ಭರ ಯೋಜನೆಯಡಿ  ಹೆಚ್ಚು ಜನರಿಗೆ ಬ್ಯಾಂಕ್ ಮುಖಾಂತರ ಸಾಲ ಸೌಲಭ್ಯ ನೀಡಬೇಕು. ಬೀದಿ ಬದಿ ವ್ಯಾಪಾರಿಗಳ ಕಲ್ಯಾಣಕ್ಕಾಗಿ ಆರಂಭಿಸಿರುವ ಯೋಜನೆ ಜಿಲ್ಲೆಯಲ್ಲಿ ಹೆಚ್ಚು ಜನರನ್ನು ತಲುಪುತ್ತಿಲ್ಲ. ಬ್ಯಾಂಕ್ ಮ್ಯಾನೇಜರ್‍ಗಳು ಸಹಕರಿಸುತ್ತಿಲ್ಲವೆಂದು ಕೆಲವು ಅಧಿಕಾರಿಗಳು ಜಿಲ್ಲಾಧಿಕಾರಿಗಳ ಗಮನಕ್ಕೆ ತಂದರು.

ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ, ಬ್ಯಾಂಕ್ ಮ್ಯಾನೇಜರ್‍ಗಳಿಗೆ ಲೀಡ್ ಬ್ಯಾಂಕ್ ಮ್ಯಾನೇಜರ್ ರವರಿಂದ ಮಾಗದರ್ಶನ ಕೊಡಿಸಿ, ಒಂದು ವೇಳೆ ಯಾವುದೇ ಬ್ಯಾಂಕ್ ಮ್ಯಾನೇಜರ್ ಈ ವಿಚಾರದಲ್ಲಿ ಅಸಡ್ಡೆತನ ಪ್ರದರ್ಶಸಿದರೆ ಅಥವಾ ಸಾಲ ಮಂಜೂರಾತಿಗೆ ಅಸಹಕಾರ ತೋರಿದರೆ ಅವರ ವಿರುದ್ದ ಸರ್ಕಾರಕ್ಕೆ ನೇರವಾಗಿ ದೂರು ನೀಡಲಾಗುವುದೆಂದರು.

ಸಭೆಯಲ್ಲಿ ಎಡಿಸಿ ಪೂಜಾರ ವೀರಮಲ್ಲಪ್ಪ, ಉಪವಿಭಾಗಾಧಿಕಾರಿ ಮಮತ ಹೊಸಗೌಡರ್, ಜಿಲ್ಲಾ ಕೋವಿಡ್ ನೋಡಲ್ ಅಧಿಕಾರಿ ಪ್ರಮೋದ್ ನಾಯಕ್,  ಪಾಲಿಕೆ ಆಯುಕ್ತ ವಿಶ್ವನಾಥ್ ಮುದ್ದಜ್ಜಿ, ಡಿಹೆಚ್‍ಓ ನಾಗರಾಜು, ಡಿಎಸ್‍ಓ ಡಾ.ರಾಘವನ್, ನಗರಾಭಿವೃದ್ದಿ ಕೋಶದ ಅಧಿಕಾರಿ ನಜ್ಮಾ ವಿವಿಧ ಸ್ಥಳೀಯ ಸಂಸ್ಥೆಗಳ ಮುಖ್ಯಾಧಿಕಾರಿಗಳು ಇದ್ದರು.