ಮನೆ ಬೆಳಗುವಳವಳಲ್ಲವೇ…

ಮನೆ ಬೆಳಗುವಳವಳಲ್ಲವೇ…

ಹೆತ್ತವಳವಳಲ್ಲವೇ
ಹೊತ್ತವಳವಳಲ್ಲವೇ
ತುತ್ತಿಟ್ಟವಳವಳಲ್ಲವೇ
ಮುತ್ತಿಟ್ಟವಳವಳಲ್ಲವೇ.

ಹಾಲುಣಿಸಿದವಳವಳಲ್ಲವೇ
ಲಾಲಿ ಹಾಡಿದವಳವಳಲ್ಲವೇ
ಜೋಲಿ ತೂಗಿದವಳವಳಲ್ಲವೇ
ಲಾಲಿಸಿ ಪಾಲಿಸಿದವಳವಳಲ್ಲವೇ.

ಹಡೆದವಳವಳಲ್ಲವೇ
ಒಡಹುಟ್ಟಿದವಳವಳಲ್ಲವೇ
ಒಡನಾಡಿಯಾದವಳವಳಲ್ಲವೇ
ನಡೆನುಡಿ ಕಲಿಸಿದವಳವಳಲ್ಲವೇ.

ಮನೆಯ ದೀಪವಳಲ್ಲವೇ
ಮನೆಯ ಬೆಳಗುವಳವಳಲ್ಲವೇ
ಮನೆಗೆ ಮಹಾಲಕ್ಷ್ಮೀ ಅವಳಲ್ಲವೇ

ಮನೆತನ ವೃಕ್ಷಕ್ಕೆ ಬೇರವಳಲ್ಲವೇ.
ಪ್ರಕೃತಿಯ ಪ್ರತಿರೂಪ ಅವಳಲ್ಲವೇ
ಸಂಸ್ಕೃತಿಯ ಜ್ಯೋತಿ ಅವಳಲ್ಲವೇ
ಅವಳಿಲ್ಲದೇ ನಾವ್ಯಾರಿಲ್ಲ ಅಲ್ಲವೇ
ಅವಳ ರಕ್ಷಣೆ ಹೊಣೆ ನಮ್ಮದಲ್ಲವೇ..


ಶಿವಮೂರ್ತಿ.ಹೆಚ್., ಕನ್ನಡ ಶಿಕ್ಷಕರು
ಶ್ರೀ ತರಳಬಾಳು ಜಗದ್ಗುರು ರೆಸಿಡೆನ್ಸಿಯಲ್
ಸ್ಕೂಲ್, ಅನುಭವ ಮಂಟಪ, ದಾವಣಗೆರೆ.
shivamurthyh2012@gmail.com

Leave a Reply

Your email address will not be published.