ನೆಲ, ಜಲದ ಮೇಲೆ ಅಭಿಮಾನವಿಟ್ಟು ಪ್ರತಿ ದಿನದ ಕೆಲಸ-ಕಾರ್ಯಗಳಲ್ಲಿ ಕನ್ನಡ ಬಳಸಿ, ಬೆಳೆಸಬೇಕು

ನೆಲ, ಜಲದ ಮೇಲೆ ಅಭಿಮಾನವಿಟ್ಟು ಪ್ರತಿ ದಿನದ ಕೆಲಸ-ಕಾರ್ಯಗಳಲ್ಲಿ ಕನ್ನಡ ಬಳಸಿ, ಬೆಳೆಸಬೇಕು

ಹರಪನಹಳ್ಳಿ : ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ವಕೀಲ ಕಣವಿಹಳ್ಳಿ ಮಂಜುನಾಥ್ ಕರೆ

ಹರಪನಹಳ್ಳಿ, ನ.3- ಕನ್ನಡ ನಾಡು, ನುಡಿಗಳ ಮೇಲಿರುವ ಅಭಿಮಾನ ಕೇವಲ ನವೆಂಬರ್ ತಿಂಗಳಿಗೆ ಸೀಮಿತವಾಗಬಾರದು ಎಂದು ಅಪರ ಸರ್ಕಾರಿ ವಕೀಲ ಕಣವಿಹಳ್ಳಿ ಮಂಜುನಾಥ ಹೇಳಿದರು.

ಪಟ್ಟಣದ ಆಚಾರ್ ಬಡಾವಣೆಯ ನ್ಯೂಟ್ರಿಷಿಯನ್ ತರಬೇತಿ ಕೇಂದ್ರದಲ್ಲಿ ಆಯೋಜಿಸಿದ್ದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ನವೆಂಬರ್ ತಿಂಗಳಲ್ಲಿ ಮಾತ್ರ ಕನ್ನಡದ ಬಗ್ಗೆ ಅಭಿಮಾನ ಇಟ್ಟುಕೊಳ್ಳದೇ ವರ್ಷ ಪೂರ್ತಿ ಕನ್ನಡ ಭಾಷೆ, ನೆಲ, ಜಲದ ಬಗ್ಗೆ ಅಭಿಮಾನ ಇಟ್ಟುಕೊಂಡು ತಮ್ಮ ಪ್ರತಿ ದಿನದ ಕೆಲಸ, ಕಾರ್ಯಗಳಲ್ಲಿ ಕನ್ನಡ ಬಳಸಿ, ಬೆಳೆಸಬೇಕು ಎಂದು ತಿಳಿಸಿದರು.

ನಿವೃತ್ತ ಮುಖ್ಯ ಶಿಕ್ಷಕ ಸಿ.ಎಂ.ಕೊಟ್ರಯ್ಯ ಮಾತನಾಡಿ, ಅಲ್ಲಲ್ಲಿ ಚದುರಿದ್ದ ಕನ್ನಡವನ್ನೆಲ್ಲ ಒಂದು ಗೂಡಿಸಿ ಅದಕ್ಕೆ ಕರ್ನಾಟಕ ಎಂದು ನಾಮಕರಣ ಮಾಡಿದ ದಿನ, ಪಟ್ಟಣದಲ್ಲಿ ಕನ್ನಡ ಮಿತ್ರ ಸಂಘ ಎಂದು ಸಂಘ ಕಟ್ಟಿಕೊಂಡು  ನಾವು ಅನೇಕ ವರ್ಷಗಳ ಕಾಲ ಕನ್ನಡ ನಾಡು, ನುಡಿಗೆ ಸಂಬಂಧಪಟ್ಟ ಕಾರ್ಯಕ್ರಮಗಳನ್ನು ಮಾಡುತ್ತಾ ಬಂದಿದ್ದೇವೆ, ಕನ್ನಡ ರಾಜ್ಯೋತ್ಸವ ನಿತ್ಯೋತ್ಸವವಾಗಬೇಕು ಎಂದು ಹೇಳಿದರು.

ತರಬೇತುದಾರೆ ಲಕ್ಷ್ಮೀ ಕಣವಿಹಳ್ಳಿ ಮಾತನಾಡಿ,  ಭಾಷಾವಾರು ಪ್ರಾಂತ ರಚನೆಯಾಗಿ  ಕನ್ನಡಿಗರೆಲ್ಲರೂ  ಒಂದು ಕಡೆ ಸೇರಿ 1956 ರಲ್ಲಿ ವಿಶಾಲ ಮೈಸೂರು ರಾಜ್ಯವಾಯಿತು. ನಂತರ 1973 ರಲ್ಲಿ ಕರ್ನಾಟಕ ಎಂದು ನಾಮಕರಣವಾಯಿತು. 

ಕನ್ನಡ ಧ್ವಜ ಕೆಂಪು ಹಾಗೂ ಹಳದಿ ಬಣ್ಣ ಹೊಂದಿದ್ದು, ಹಳದಿ ಬಣ್ಣವು ಶಾಂತಿ ಮತ್ತು ಸೌಹಾರ್ಧತೆ ಹಾಗೂ ಕೆಂಪು ಕ್ರಾಂತಿಯ ಸಂಕೇತ ಅಂದರೆ ಕನ್ನಡಿಗರು ಶಾಂತಿಗೂ ಬದ್ದ, ಯುದ್ದಕ್ಕೂ ಸಿದ್ದ ಎಂಬ ಸಂದೇಶ ನೀಡುತ್ತದೆ ಎಂದರು.

ತರಬೇತುದಾರ ಕಣವಿಹಳ್ಳಿ ಚಂದ್ರಶೇಖರ್, ಕಸಾಪ ನಿಕಟಪೂರ್ವ ಅಧ್ಯಕ್ಷ ಬಿ.ರಾಮಪ್ರಸಾದ್ ಗಾಂಧಿ, ಕಸಾಪ ತಾ. ಕಾರ್ಯದರ್ಶಿ ಹೇಮಣ್ಣ ಮೋರಿಗೇರಿ ಮಾತನಾಡಿದರು. ಪಿಕಾರ್ಡ್ ಬ್ಯಾಂಕ್ ನಿರ್ದೇಶಕ ಪಿ.ಬಿ.ಗೌಡ, ಪೂರ್ಣಿಮಾ, ಕೊಟ್ರಬಸಪ್ಪ, ಎ.ಎಂ.ಸುಮಾ, ಸಾತ್ವಿಕ್, ದೀಕ್ಷಾ  ಮತ್ತಿತರರು ಉಪಸ್ಥಿತರಿದ್ದರು.

Leave a Reply

Your email address will not be published.