ಸಂತರು, ಶರಣರು ಇರುವ ಜಾಗವೇ ಅನುಭವ ಮಂಟಪ : ಮುರುಘಾ ಶರಣರು

ಸಂತರು, ಶರಣರು ಇರುವ ಜಾಗವೇ ಅನುಭವ ಮಂಟಪ : ಮುರುಘಾ ಶರಣರು

ಚಿತ್ರದುರ್ಗ, ಅ. 22 –  ಸಂತರು, ಶರಣರು ಇರುವ ಜಾಗವೇ ಅನುಭವ ಮಂಟಪ. ಅವರಲ್ಲಿ ಅನುಭವ ಮಂಟಪದ ಯೋಚನೆ ಸ್ಥಾಯಿಯಾಗಿ ನೆಲೆಗೊಂಡಿರುತ್ತದೆ ಎಂದು ಡಾ. ಶಿವಮೂರ್ತಿ ಮುರುಘಾ ಶರಣರು ನುಡಿದರು.

ನಗರದ ಶ್ರೀ ಮುರುಘರಾಜೇಂದ್ರ ಬೃಹನ್ಮಠದಲ್ಲಿ ಶರಣ ಸಂಸ್ಕೃತಿ ಉತ್ಸವಕ್ಕೂ ಮುನ್ನ ನಡೆದ ಏಳು ದಿನಗಳ ವಿಶೇಷ ಪ್ರವಚನ ಮಾಲೆಯ ಸಮಾರೋಪದ ಸಾನ್ನಿಧ್ಯ ವಹಿಸಿ ಶರಣರು ಆಶೀರ್ವಚನ ನೀಡಿದರು. 

ಧ್ಯಾನ ಮಾರ್ಗಿಗಳದು ಮೌನಯಾನ. ಧ್ಯಾನದ ಉದ್ದೇಶವೇ ಪರಮ ಮೌನ. ದಿವ್ಯಮೌನ. ಪ್ರತಿಯೊಬ್ಬರು ಮೌನವನ್ನು ಸಿದ್ಧಿಸಿಕೊಳ್ಳಬೇಕು. ಧ್ಯಾನ ಮಾರ್ಗದ ಮುಂದಿನ ಹಂತವೇ ಜ್ಞಾನ. ಸುಜ್ಞಾನಕ್ಕೆ ತಪಸ್ಸು ಮಾಡಬೇಕು. ನಮ್ಮಂತಹ ಶರಣರಿಗೆ ಅಧ್ಯಯನ ಬೇಕು. ಅದರ ಜೊತೆ ಅಧ್ಯಾತ್ಮ ಬಲ ಬೇಕು. ಇದು ಸಾಧನೆಯ ಮೂಲಕ ಪಡೆದುಕೊಳ್ಳಬೇಕು. ಜ್ಞಾನ + ಸುಜ್ಞಾನ = ಪರಿವರ್ತನ. ಅರಳಿದ ಜೀವನ ನಮ್ಮದಾಗಬೇಕು ಎಂದು ಹೇಳಿದರು.

ಪ್ರವಚನ ಮಾಲೆಯನ್ನು ನಡೆಸಿಕೊಟ್ಟ ಸಂಗಮೇಶ್ವರ ದೇವರು, ನುಡಿದ ಮಾತುಗಳು ವಚನಗಳಾಗಬೇಕು. ಅವು ಬೆಳಕಾಗಬೇಕು. ಮಾತಿಗೆ ಬಡತನವಿಲ್ಲ. ನಮ್ಮ ಸುತ್ತಮುತ್ತ ಸ್ವರ್ಗ ನಿರ್ಮಾಣವಾಗಬೇಕು. ಮಾತುಗಳು ಮಾನವನನ್ನು ಮಹಾತ್ಮನನ್ನಾಗಿ ಮಾಡುತ್ತವೆ ಎಂದರು.

ಕಾರ್ಯಕ್ರಮದಲ್ಲಿ ಭೋವಿ ಗುರುಪೀಠದ ಶ್ರೀ ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮಿಗಳು, ಹರಗುರು ಚರ ಮೂರ್ತಿಗಳು, ಎಸ್.ಜೆ.ಎಂ. ವಿದ್ಯಾಪೀಠದ ಕಾರ್ಯ ದರ್ಶಿ ಎ.ಜೆ. ಪರಮಶಿವಯ್ಯ  ಮುಂತಾದವರಿದ್ದರು.

Leave a Reply

Your email address will not be published.