ಸಮಾಜಕ್ಕಾಗಿ ಹುತಾತ್ಮರಾಗಿ, ವೈರಸ್‌ಗಲ್ಲ

ಸಮಾಜಕ್ಕಾಗಿ ಹುತಾತ್ಮರಾಗಿ, ವೈರಸ್‌ಗಲ್ಲ

ದಾವಣಗೆರೆ, ಅ. 21 – ಸಮಾಜಕ್ಕಾಗಿ ಪೊಲೀಸರು ಹುತಾತ್ಮರಾಗಬೇಕೇ ಹೊರತು ವೈರಸ್‌ಗಾಗಿ ಅಲ್ಲ ಎಂದು ಹೇಳಿರುವ ಪೂರ್ವ ವಲಯ ಐ.ಜಿ.ಪಿ. ಎಸ್. ರವಿ, ಶಿಸ್ತಿನ ಇಲಾಖೆಯಲ್ಲಿರುವ ಪೊಲೀಸರು ಶಿಸ್ತಿನಿಂದಲೇ ತಮ್ಮನ್ನು ತಾವು ಕಾಪಾಡಿಕೊಳ್ಳಬೇಕಿದೆ ಎಂದಿದ್ದಾರೆ.

ಜಿಲ್ಲಾ ಪೊಲೀಸ್ ಕವಾಯತು ಮೈದಾನದಲ್ಲಿ ಏರ್ಪಡಿಸಿದ್ದ ಪೊಲೀಸ್ ಹುತಾತ್ಮರ ದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದ ಅವರು, ಪೂರ್ವ ವಲಯದ ನಾಲ್ಕು ಜಿಲ್ಲೆಗಳಲ್ಲಿ 978 ಪೊಲೀಸರಿಗೆ ಸೋಂಕು ಬಂದಿದ್ದು, ಒಂಭತ್ತು ಜನರು ಸಾವನ್ನಪ್ಪಿದ್ದಾರೆ ಎಂದು ತಿಳಿಸಿದರು.

ಕಳೆದ ಏಳೆಂಟು ತಿಂಗಳಿನಿಂದ ಪೊಲೀಸರು ಕೊರೊನಾದಿಂದಾಗಿಯೇ ಸಾವನ್ನಪ್ಪುತ್ತಿದ್ದಾರೆ. §ಧೈರ್ಯಂ ಸರ್ವಸ್ವಂ’ ಎಂಬಂತೆ ಪ್ರತಿನಿತ್ಯ ಕೊರೊನಾ ಎದುರಿಸುತ್ತಿದ್ದಾರೆ. ಜನರನ್ನು ಕಾಪಾಡುತ್ತಾಲೇ ನಮ್ಮನ್ನು ನಾವು ಕಾಪಾಡಿಕೊಳ್ಳುವ ಹೊಣೆ ಇದೆ ಎಂದವರು ತಿಳಿಸಿದರು.

ಸಾಮಾಜಿಕ ಅಂತರ, ಮಾಸ್ಕ್ ಧರಿಸುವುದು ಹಾಗೂ ಸ್ಯಾನಿಟೈಜ್ ಬಿಟ್ಟರೆ ಕೊರೊನಾ ಎದುರಿಸಲು ಬೇರೆ ದಾರಿ ಇಲ್ಲ. ಲಸಿಕೆ ಬಂದರೂ ಅದು ಶೇ.50ಕ್ಕಿಂತ ಪರಿಣಾಮಕಾರಿಯಾಗುವುದಿಲ್ಲ ಎಂದೂ ಹೇಳಲಾಗುತ್ತಿದೆ. ಚಿಟಿಕೆ ಹೊಡೆಯುವಷ್ಟರಲ್ಲಿ ಕೊರೊನಾ ಸೋಂಕು ಬರುವ ಸಾಧ್ಯತೆ ಇರುವುದರಿಂದ ಮುನ್ನೆಚ್ಚರಿಕೆಯಲ್ಲಿ ಯಾವುದೇ ನಿರ್ಲಕ್ಷ್ಯ ಸಲ್ಲದು ಎಂದು ಐ.ಜಿ.ಪಿ. ಹೇಳಿದರು.

ಲಡಾಖ್‌ನಲ್ಲಿ ಭಾರತ ಮತ್ತು ಚೀನಾ ಸೈನ್ಯಗಳು ಮುಖಾಮುಖಿಯಾಗಿದ್ದು, ಯುದ್ಧದ ಸಾಧ್ಯತೆಯೂ ಇದೆ. ನಾವು ಮುಕ್ತ ಸಮಾಜದಲ್ಲಿ ಇರಲಿ ಎಂದು ಅಲ್ಲಿ ಸೈನಿಕರು ದೇಶಭಕ್ತಿ ಪ್ರದರ್ಶಿಸಿ ರಕ್ಷಣೆ ಮಾಡುತ್ತಿದ್ದಾರೆ. ನಾವು ಮಾತ್ರ ಆ ಬಗ್ಗೆ ಯೋಚಿಸದೇ ವೈರಸ್ ಕುರಿತು ನಿರ್ಲಕ್ಷ್ಯ ತೋರುತ್ತಿದ್ದೇವೆ ಎಂದು ವಿಷಾದಿಸಿದರು.

ಈ ಸಂದರ್ಭದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಮೂರ್ತಿ ಕೆ.ಬಿ. ಗೀತ, ಪೊಲೀಸರು ಜೀವ ಪಣಕ್ಕಿಟ್ಟು ಒದಗಿಸುತ್ತಿರುವ ಆಂತರಿಕ ರಕ್ಷಣೆಯಿಂದಾಗಿ ಸಮಾಜ ನಿರಾಳ ಜೀವನ ನಡೆಸಲು ಸಾಧ್ಯವಾಗುತ್ತಿದೆ ಎಂದು ಹೇಳಿದರು.

ಸಮಾರಂಭದಲ್ಲಿ ಮಾತನಾಡಿದ ಎಸ್ಪಿ ಹನುಮಂತರಾಯ, ಈ ವರ್ಷ ದೇಶದಲ್ಲಿ 264 ಪೊಲೀಸರು ಹಾಗೂ ಕರ್ನಾಟಕದಲ್ಲಿ 17 ಪೊಲೀಸರು ಹುತಾತ್ಮರಾಗಿದ್ದಾರೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಕೊರೊನಾಗೆ ಸಿಲುಕಿ ಮೃತಪಟ್ಟ ಜಿಲ್ಲೆಯ ಪೊಲೀಸರಾದ ಪರಮೇಶ್ವರಪ್ಪ, ರವಿ, ಶಿವರಾಜ್ ಹಾಗೂ ಗೋಣಿಬಸಪ್ಪ ಅವರ ಕುಟುಂಬದವರನ್ನು ಸನ್ಮಾನಿಸಿ ಗೌರವಿಸಲಾಯಿತು.

ಸಮಾರಂಭದಲ್ಲಿ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಎಂ.ರಾಜೀವ್ ಮತ್ತಿತರರು ಉಪಸ್ಥಿತರಿದ್ದರು.

Leave a Reply

Your email address will not be published.