ಮಕ್ಕಳ ಸಂಸ್ಕೃತಿ ಲಾಕ್ ಮಾಡಿದ ಕೊರೊನಾ

ಮಕ್ಕಳ ಸಂಸ್ಕೃತಿ ಲಾಕ್ ಮಾಡಿದ ಕೊರೊನಾ

ಭಾರತವೆಂದರೆ ಹಬ್ಬಗಳ ತವರು ನೆಲೆ. ಇಲ್ಲಿ ಹಬ್ಬಗಳಿಲ್ಲದ ತಿಂಗಳುಗಳೇ ಇಲ್ಲ. ಸಾಂಸ್ಕೃತಿಕ ವೈವಿಧ್ಯತೆಗೆ ಮಿತಿಯೇ ಇಲ್ಲ. ವಿಪರ್ಯಾಸ ಎಂದರೆ ಇಂತಹ ಸಮೃದ್ಧ ಸಾಂಸ್ಕೃತಿಕ ನಾಡಿನ ಮಕ್ಕಳು ಕೊರೊನಾ ಕಾರಣದಿಂದಾಗಿ ನಿಧಾನವಾಗಿ ಜೀವಂತ ಸಂಸ್ಕೃತಿಯಿಂದ ದೂರವಾಗುತ್ತಿದ್ದಾರೆ.

ಶಾಲೆಗಳಿಗೆ ಮಕ್ಕಳು ನೇರವಾಗಿ ಹೋಗಲು ಆಗುತ್ತಿಲ್ಲ. ಮದುವೆ ಇತ್ಯಾದಿ ಸಮಾರಂಭಗಳಿಗೂ ಮಕ್ಕಳನ್ನು ಕರೆದೊಯ್ಯಲು ಪೋಷಕರಿಗೆ ಹಿಂಜರಿಕೆ. ಶ್ರೀಕೃಷ್ಣ ಜಯಂತಿಯಂತಹ ಹಬ್ಬಗಳಂದು ಶಾಲೆಗಳಲ್ಲಿ ಮಕ್ಕಳಿಗೆ ವೇಷಭೂಷಣ ಹಾಕಿ ಸಂಭ್ರಮಿಸುವ ಕನಿಷ್ಠ ಸಾಂಸ್ಕೃತಿಕ ಸೊಗಡೂ ಇಲ್ಲದಂತಾಗಿದೆ.

ಹೊಸ ಪೀಳಿಗೆಗೆ ಹಾಡು, ನೃತ್ಯ, ಸಂಗೀತ ಹೇಳಿ ಕೊಡುತ್ತಿದ್ದ ಪಾಠಶಾಲೆಗಳು ಮೌನವಾಗಿವೆ. ಶಾಲೆಗಳಲ್ಲಿ ನಡೆಯುತ್ತಿದ್ದ ಸಾಂಸ್ಕೃತಿಕ ಕಾರಂಜಿಯಿಂದ ಹಿಡಿದು ಹಲವಾರು ವೈವಿಧ್ಯಮಯ ಚಟುವಟಿಕೆಗಳು ಸಂಪೂರ್ಣ ಬಂದ್ ಆಗಿವೆ. 

ಶಾಲೆಗಳಲ್ಲಿ ವಾರ್ಷಿಕೋತ್ಸವದ ಸಂದರ್ಭ ದಲ್ಲಿ ಮಕ್ಕಳು ಸಾಮೂಹಿಕವಾಗಿ ಹಾಡು – ನೃತ್ಯಗಳಂತಹ ಚಟುವಟಿಕೆಗಳಲ್ಲಿ ತೊಡಗಿಕೊಳ್ಳುತ್ತಿ ದ್ದರು. ಅದೂ ಸಹ ಈ ವರ್ಷ ಅಸಾಧ್ಯವೆಂಬ ಪರಿಸ್ಥಿತಿ ಉಂಟಾಗಿದೆ. ಮಕ್ಕಳ ಸಮಗ್ರ ಬೆಳವಣಿಗೆಗೆ – ಸಾಂಘಿಕ ಚಟುವಟಿಕೆಗಳಿಗೆ ದಾರಿ ಮಾಡಿಕೊಡುತ್ತಿದ್ದ ಸಾಂಸ್ಕೃತಿಕ ಚಟುವಟಿಕೆಗಳು ಸಂಪೂರ್ಣ ನಿಲ್ಲುವ ಹಂತಕ್ಕೆ ಬಂದಿರುವುದು ವಿಷಾದಕರವಾಗಿದೆ.

ಮೊದಲು ಟಿವಿ, ಆನಂತರ ಮೊಬೈಲ್‌ಗಳು ಮಕ್ಕಳ ಚಟುವಟಿಕೆಗಳ ಮೇಲೆ ಈಗಾಗಲೇ ಕಡಿವಾಣ ಹಾಕಿವೆ. ಹೊರ ವಲಯದ ಬಹುತೇಕ ಚಟುವಟಿಕೆಗಳು ನಿಂತ ನಂತರವಂತೂ ಮಕ್ಕಳು ಮೊಬೈಲ್ – ಟಿವಿ ಬಿಟ್ಟು ಅಲ್ಲಾಡದ ಪರಿಸ್ಥಿತಿ ಉಂಟಾಗಿದೆ. ಕಲಿಯಲೂ ಸಹ ಮೊಬೈಲೇ ಬೇಕೆಂದ ಮೇಲೆ ಮುಂದೇನು ಹೇಳುವುದಿದೆ?

ಶಾಲಾರಂಭಕ್ಕೇ ಸರ್ಕಾರ ಮೀನಾಮೇಷ ಎಣಿಸುತ್ತಿದೆ. ಹೀಗಿರುವಾಗ ಸಾಂಸ್ಕೃತಿಕ ಚಟುವಟಿಕೆಗಳ ಬಗ್ಗೆ ಮಾತನಾಡುವುದು ಎಂದರೆ ಹೊಟ್ಟೆಗೆ ಹಿಟ್ಟಿಲ್ಲದಿದ್ದಾಗ ಜುಟ್ಟಿಗೆ ಮಲ್ಲಿಗೆ ಹೂವೇ? ಎಂಬ ವಿಚಾರ ಬರಬಹುದು. ಸಾಂಸ್ಕೃತಿಕ ಚಟುವಟಿಕೆಗಳೂ ಮಕ್ಕಳ ಸಮಗ್ರ ಕಲಿಕೆಯ ಭಾಗ ಎಂಬುದನ್ನು ಮರೆಯಲಾಗದು. ಇಂತಹ ಚಟುವಟಿಕೆಗಳಿಂದ ವಂಚಿತವಾದ ಮಕ್ಕಳ ಮಾನಸಿಕ ಬೆಳವಣಿಗೆ ಮೇಲೆ ಪರಿಣಾಮ ವಾಗುವುದನ್ನು ಕಡೆಗಣಿಸುವಂತಿಲ್ಲ.

ಆಧುನಿಕ ಕಾಲದ ಎಷ್ಟೋ ಮನೆಗಳಲ್ಲಿ ಮನೆಗೊಂದೇ ಮಗು ಇದೆ. ಇಂತಹ ಮಕ್ಕಳು ಮಾತು ಕಲಿಯುವುದೂ ತಡವಾಗಿ, ಬಾಲವಾಡಿ ಇಲ್ಲವೇ ಪ್ಲೇ ಹೋಮ್‌ಗಳಿಗೆ ಹೋದ ಮೇಲೆ ಮಾತುಗಳನ್ನು ಚೆನ್ನಾಗಿ ಕಲಿತ ಸಾಕಷ್ಟು ಉದಾಹರಣೆಗಳಿವೆ.

ಹೀಗಿರುವಾಗ ಹಾಡು ಹಸೆಗೆ ಹೆಜ್ಜೆ ಹಾಕದ, ಕುಣಿಯದ, ನಲಿಯದ ಮಗು ಜೀವನದ ಬಹು ದೊಡ್ಡ ಅವಕಾಶದಿಂದ ವಂಚಿತವಾದಂತೆ.

ಕೇಂದ್ರ ಸರ್ಕಾರದ ಸಂಸ್ಕೃತಿ ಇಲಾಖೆ ಇತ್ತೀಚೆಗೆ ಆದೇಶವೊಂದನ್ನು ಹೊರಡಿಸಿ ಆನ್‌ಲೈನ್‌ ಮೂಲಕ ಸಾಂಸ್ಕೃತಿಕ ಸಮಾರಂಭ ಗಳನ್ನು ನಡೆಸಿದರೂ ಅನುದಾನ ನೀಡುವುದಾಗಿ ತಿಳಿಸಿತ್ತು. ಆ ಮೂಲಕ ಕಲೆಗೆ ಹಾಗೂ ಕಲಾವಿದರಿಗೆ ಪ್ರೋತ್ಸಾಹ ನೀಡಲು ಮುಂದಾಗಿತ್ತು.

ಶಾಲಾರಂಭ ಇನ್ನೆಷ್ಟು ದಿನವಾಗಲಿದೆಯೋ ಗೊತ್ತಿಲ್ಲ. ನೇರ ಶಾಲೆ ಆರಂಭವಾದರೂ ಆನ್‌ಲೈನ್‌ ಕಲಿಕೆ ತಪ್ಪದ ಪರಿಸ್ಥಿತಿ ಇದೆ. ಹೀಗಿರುವಾಗ ಕೇಂದ್ರ ಸರ್ಕಾರ ಸಂಸ್ಕೃತಿಯನ್ನು ಆನ್‌ಲೈನ್‌ನಲ್ಲಿ ತೆರೆದಂತೆ ಮಕ್ಕಳಿಗೂ ಸಾಧ್ಯವಾದಷ್ಟು ಆನ್‌ಲೈನ್‌ ಮೂಲಕ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ತೊಡಗಿಸುವುದು ಸಾಧ್ಯವಾಗಲಿದೆಯೇ?  ಈ ಪ್ರಶ್ನೆಗೆ ಉತ್ತರ ಕಂಡುಕೊಳ್ಳುವ ಅನಿವಾರ್ಯತೆ ಎದುರಾಗಿದೆ.

2021ರಲ್ಲಿ ಕೊರೊನಾ ಲಸಿಕೆ ಕಂಡು ಹಿಡಿದರೂ, ಎಲ್ಲರಿಗೂ ಲಸಿಕೆ ಲಭ್ಯವಾಗುವಷ್ಟರಲ್ಲಿ 2022ರ ಅರ್ಧ ಭಾಗ ಮುಗಿದಿರುತ್ತದೆ ಎಂಬ ಲೆಕ್ಕಾಚಾರಗಳಿವೆ. ಹೀಗಾಗಿ ಮಕ್ಕಳ ಪಾಠದ ಜೊತೆಗೆ ಜೀವಂತ ಸಂಸ್ಕೃತಿಯ ಪಾಲ್ಗೊಳ್ಳುವಿಕೆಯ ಬಗ್ಗೆಯೂ ಈಗ ಯೋಚಿಸುವುದರಲ್ಲಿ ತಪ್ಪೇನೂ ಇಲ್ಲ.


ಅಸ್ಮಿತ ಎಸ್. ಶೆಟ್ಟರ್

Leave a Reply

Your email address will not be published.