ಪಕ್ಷಿ ಪಾಲನೆಯಲ್ಲಿ ಮಾತೃ ಹೃದಯಿ ಮಲ್ಲೇಶ್

ಪಕ್ಷಿ ಪಾಲನೆಯಲ್ಲಿ  ಮಾತೃ ಹೃದಯಿ ಮಲ್ಲೇಶ್

ಈ ಭೂಮಿಯ ಮೇಲೆ ಬದುಕುವ ಹಕ್ಕು ನಮ್ಮಂತೆಯೇ ಇತರೆ ಜೀವಿಗಳಿಗೂ ಇದೆ. ಇದು ಸಮತೆ-ಮಮತೆ. ಆದರೆ ನಾವು ಮರಗಿಡಗಳನ್ನು ಕಡಿದು, ನೀರು, ಆಹಾರ ಇಲ್ಲದ ವಾತಾವರಣ ನಿರ್ಮಾಣ ಮಾಡಿದ್ದರ ಫಲವಾಗಿ, ಈಗಾಗಲೇ ಹತ್ತಾರು ಪಕ್ಷಿ ಸಂಕುಲಗಳು ನಾಶವಾಗಿವೆ ಹಾಗೂ ಕೆಲವು ಅಳಿವಿನ ಅಂಚಿಗೆ ಬಂದಿವೆ. ನಾವು ಒಂದು ಕ್ಷಣ ನೀರು, ಆಹಾರವಿಲ್ಲದೆ ಬದುಕಲಾರೆವು. ಜೊತೆಗೆ ಹಸಿವು, ಬಾಯಾರಿಕೆಯಾದರೆ ನೀರು, ಆಹಾರ ಒದಗಿಸಿಕೊಳ್ಳುವ ಶಕ್ತಿ ನಮಗಿದೆ. 

ಆದರೆ ಮೂಕ ಪ್ರಾಣಿ, ಪಕ್ಷಿಗಳಿಗೆ ಹಸಿವು, ಬಾಯಾರಿಕೆಯಾದರೆ ತಮ್ಮ ನೋವನ್ನು ಯಾರೊಂದಿಗೂ ಹಂಚಿಕೊಳ್ಳಲಾಗುವುದಿಲ್ಲ. ಇದನ್ನು ಮನಗಂಡ ಮಾತೃ ಹೃದಯದ ಮಲ್ಲೇಶ್ ಮತ್ತು ಕುಟುಂಬದವರು ತಮ್ಮ ಮನೆಯ ಮುಂದೆ ಮಡಿಕೆಗಳು, ಪೈಪ್‍ಗಳನ್ನು ಕಟ್ಟಿ, ಪಕ್ಷಿಗಳು ಗೂಡು ಕಟ್ಟಲು, ವಾಸ ಮಾಡಲು ಸಹಕಾರಿಯಾಗುವಂತೆ ಮಾಡಿದ್ದಾರೆ. ಅಲ್ಲದೆ ಭತ್ತ, ಜೋಳದ ತೆನೆಗಳನ್ನು ಕಟ್ಟಿ ಪಕ್ಷಿಗಳಿಗೆ ಸತತವಾಗಿ ಆಹಾರ, ನೀರು ಒದಗಿಸುವಲ್ಲಿ ಇತರರಿಗೆ ಮಾದರಿಯಾಗಿದ್ದಾರೆ.

ಮೊದ ಮೊದಲು ಪಕ್ಷಿಗಳು ಅವರ ಮನೆಯ ಮುಂದೆ ಬರಲು ಹೆದರುತ್ತಿದ್ದವು. ಅವುಗಳಿಗೆ ಇಲ್ಲಿಗೆ ಬಂದು ನೆಲೆಸಲು ತಿಂಗಳುಗಳೇ ಆಯಿತು. ಆದರೆ ನಂತರ ನಾವು ಅವುಗಳಿಗೆ ಯಾವುದೇ ತೊಂದರೆ ಮಾಡದಿದ್ದರಿಂದ ಇಂದು ಮನೆಯ ಒಳಗೂ ಸಹ ಬರುತ್ತಿವೆ. ಗೂಡು ಕಟ್ಟಿ, ಮರಿ ಮಾಡಿ ಇಡೀ ಸಂಸಾರವೇ ಈ ಮನೆಯಲ್ಲಿ ವಾಸ ಮಾಡುವಂತಾಗಿದೆ. ನಮಗೆ ಈ ಪಕ್ಷಿಗಳ ಕಲರವವೇ ಬೆಳಗಿನ ಅಲರಾಮ್ ಆಗಿದೆ. ಇದು ನಮಗೆ ಹೆಚ್ಚು ಸಂತಸ ತಂದಿದೆ ಎಂದು ಮಲ್ಲೇಶ್ ಕುಟುಂಬ ಹರ್ಷ ಪಡುತ್ತಿದೆ. ಹಲವಾರು ಜಾತಿಯ ಪಕ್ಷಿಗಳು ಮನೆಯ ಮುಂದೆ ಬರುತ್ತಿವೆ. ಅವುಗಳ ಸೌಂದರ್ಯ, ಸಂಗೀತ ವರ್ಣಿಸಲಸಾಧ್ಯವೆಂದು ಮನದಾಳದ ಸಂತಸವನ್ನು ವ್ಯಕ್ತಪಡಿಸುತ್ತಾರೆ. ಅಲ್ಲದೆ ಈ ಸತ್ಕಾರ್ಯವೆಸಗಲು ಇಡೀ ಕುಟುಂಬವೇ ಸಹಕಾರ ನೀಡಿದೆ. ಈ ರೀತಿ ತಮ್ಮ ಮನೆಯ ಮುಂದೆ ಪಕ್ಷಿ ಪಾಲನೆ ಮಾಡಲಿಚ್ಚಿಸುವವರಿಗೆ ಸಂತಸದಿಂದ ಮಾಹಿತಿ ನೀಡುವುದಾಗಿ  ಮಲ್ಲೇಶ್ ತಿಳಿಸಿದ್ದಾರೆ.

ಕರುಣಾ ಟ್ರಸ್ಟ್ ಸಹ ಈಗಾಗಲೇ ಈ ರೀತಿ ಪ್ರಾಣಿ-ಪಕ್ಷಿಗಳಿಗೆ ಆಹಾರ, ನೀರು ಒದಗಿಸುವಲ್ಲಿ ಮುಂದಾಗಿದ್ದು. ತಮ್ಮ ಮನೆಯ ಮುಂದಿನ ಗಿಡ, ಮರಗಳಲ್ಲಿ ಪಕ್ಷಿಗಳು ನೆಲೆಗೊಳ್ಳುವಂತೆ ಮಡಿಕೆ, ಪೈಪು, ಬಾಟಲಿಗಳನ್ನು ಕಟ್ಟಿ ಪಕ್ಷಿಗಳ ನೆರವಿಗೆ ಬರಲು ಆಸಕ್ತಿ ತೋರಿಸಿದವರಿಗೆ ಸ್ವತಃ ಟ್ರಸ್ಟ್ ವತಿಯಿಂದ ಮಡಿಕೆಗಳನ್ನು ಕಟ್ಟಿ ಕೊಡುವುದಾಗಿ ಟ್ರಸ್ಟಿನ ಕಾರ್ಯದರ್ಶಿ ಶಿವನಕೆರೆ ಬಸವಲಿಂಗಪ್ಪ ತಿಳಿಸಿದ್ದಾರೆ.


ಜಿ.ಸಿ. ಬಸವಲಿಂಗಪ್ಪ
ಕರುಣಾ ಜೀವ ಕಲ್ಯಾಣ ಟ್ರಸ್ಟ್‌

Leave a Reply

Your email address will not be published.