ಹರಪನಹಳ್ಳಿ: ರಸ್ತೆ ಗುಂಡಿಯಲ್ಲಿ ಸಸಿ ನೆಟ್ಟು ಪ್ರತಿಭಟನೆ

ಹರಪನಹಳ್ಳಿ: ರಸ್ತೆ ಗುಂಡಿಯಲ್ಲಿ ಸಸಿ ನೆಟ್ಟು ಪ್ರತಿಭಟನೆ

ಹರಪನಹಳ್ಳಿ, ಅ.16- ತಾಲ್ಲೂಕಿನ ಅರಸೀಕೆರೆ-ಕಂಚಿಕೆರೆ ರಸ್ತೆ ಅಭಿವೃದ್ದಿ ಗೊಳಿ ಸುವಂತೆ ಆಗ್ರಹಿಸಿ, ವಿವಿಧ ಸಂಘಟನೆಗಳ ನೇತೃತ್ವದಲ್ಲಿ ಅರಸಿಕೇರಿ ಹೊರವಲಯದಲ್ಲಿ ಪ್ರತಿಭಟನೆ ನಡೆಸಲಾಯಿತು.

ಭಾರತ ಕಮ್ಯುನಿಸ್ಟ್ ಪಕ್ಷ (ಸಿಪಿಐ), ಕರ್ನಾಟಕ ರಾಜ್ಯ ರೈತ ಸಂಘ, ಹಸಿರು ಸೇನೆ, ದಲಿತ ಸಂಘರ್ಷ ಸಮಿತಿಯ ಪ್ರತಿಭಟನಾಕಾ ರರು, 2 ಗಂಟೆಗೂ ಅಧಿಕ ಕಾಲ ರಸ್ತೆ ತಡೆದು ಅಧಿಕಾರಿಗಳು, ಜನಪ್ರತಿನಿಧಿಗಳ ವಿರುದ್ದ ಘೋಷಣೆ ಕೂಗಿದರು. ರಸ್ತೆ ಗುಂಡಿಯಲ್ಲಿ ನಿಂತಿದ್ದ  ನೀರಿನಲ್ಲಿ ಮೆಕ್ಕಜೊಳ, ರಾಗಿ ಸಸಿಗಳನ್ನು ನೆಟ್ಟು  ಆಕ್ರೋಶ ವ್ಯಕ್ತಪಡಿಸಿದರು. 

ಕೆಸರಲ್ಲಿ ಹೊರಳಾಡಿ ಆಕ್ರೋಶ: ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ಅಧಿಕಾರಿಗಳು ಮಳೆಗಾಲದ ನಂತರ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಲಾಗುವುದು ಎಂದು ಹೇಳಿದಾಗ, ಆಕ್ರೋಶಗೊಂಡ ಸತ್ತೂರು ಮಹದೇವಪ್ಪ   ಅವರು, ಕೆಸರು ಗದ್ದೆಯಾಗಿರುವ ಗುಂಡಿಯಲ್ಲಿ ಬಿದ್ದು ಹೊರಳಾಡಿ,  ಶೀಘ್ರ ರಸ್ತೆ ಸರಿಪಡಿಸಿ ಇಲ್ಲವೇ ಸಾಯಲುಬಿಡಿ ಎಂದು ತನ್ನ ಚಪ್ಪಲಿಯಿಂದ ತಾನೇ ತಲೆಗೆ ಬಡಿದುಕೊಳ್ಳುತ್ತಾ ಕುತ್ತಿಗೆಗೆ ಶಾಲು  ಬಿಗಿದುಕೊಳ್ಳಲು ಪ್ರಯತ್ನಿಸಿದರು.

ಪರಿಸ್ಥಿತಿ ಗಂಭೀರವಾಗುತ್ತಿದ್ದಂತೆ ಅಧಿಕಾರಿಗಳು ಇಂದು ಮಧ್ಯಾಹ್ನವೇ ಕಾಮಗಾರಿ ಆರಂಭಿಸುವುದಾಗಿ ಭರವಸೆ ನೀಡಿದರು. ನಂತರ ಉಪತಹಶೀಲ್ದಾರ್ ಫಾತಿಮಾ, ಸಹಾಯಕ ಇಂಜಿನಿಯರ್  ಮಹೇಶ ನಾಯ್ಕ ಅವರಿಗೆ ಮನವಿ ಪತ್ರ ಸಲ್ಲಿಸಲಾಯಿತು.

ಸಿಪಿಐ ತಾಲ್ಲೂಕು ಕಾರ್ಯದರ್ಶಿ ಗುಡಿಹಳ್ಳಿ ಹಾಲೇಶ್, ಹೊಸಹಳ್ಳಿ ಮಲ್ಲೇಶ್, ಬೂದಿಹಾಳ ಸಿದ್ದೇಶಪ್ಪ,  ಕಬ್ಬಳ್ಳಿ ಮೈಲಪ್ಪ, ಕಬ್ಬಳ್ಳಿ ಬಸವರಾಜ್, ಮಾದಿಹಳ್ಳಿ ಮಂಜಪ್ಪ, ಕರಡಿದುರ್ಗ ಚೌಡಪ್ಪ, ತೌಡೂರು ಕೊಟ್ರಯ್ಯ, ಪುಣಭಗಟ್ಟಿ ಮಂಜಪ್ಪ, ಕರಿಬಸಪ್ಪ ಸಿದ್ದಯ್ಯನಕೋಟೆ, ಗೊಲ್ಲರಹಟ್ಟಿ ರಮೇಶ್, ಬಳಿಗನೂರು ಕೊಟ್ರಯ್ಯ , ಗುಡಿಹಳ್ಳಿ ಬಸವರಾಜ್, ಎಂ.ಮೂಗಪ್ಪ ಬೂದಿಹಾಳ್, ಟ್ರಾಕ್ಸ್ ಮಂಜುನಾಥ, ಕಂಚಿಕೆರೆ ಸುರೇಶ್,  ಪ್ರಭುಗೌಡ ಹಾಗು ಇತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.