ಅಂದದ ನಗರದ ಚೆಂದ ಹೆಚ್ಚಿಸುವ ಸೌಂದರ್ಯದ ಸಸಿಗಳು

ಅಂದದ ನಗರದ ಚೆಂದ ಹೆಚ್ಚಿಸುವ ಸೌಂದರ್ಯದ ಸಸಿಗಳು

20 ಲಕ್ಷ ವೆಚ್ಚದಲ್ಲಿ ಬೌಗೇನ್ ವಿಲ್ಲಿಯ ಸೌಂದರ್ಯದ ಸಸಿಗಳನ್ನು ನೆಡಲಾಗುತ್ತಿದೆ. ಸ್ಮಾರ್ಟ್‍ಸಿಟಿ ಯೋಜನೆಯಡಿ ನಗರದ ವಿವಿಧೆಡೆ ವಿಭಿನ್ನ ಗಿಡಗಳನ್ನು ಹಾಕುವ ಕೆಲಸವಾಗುತ್ತಿದೆ. ಇಷ್ಟೇ ಅಲ್ಲದೇ ಅಳಿವಿನಂಚಿನಲ್ಲಿರುವ ಪಕ್ಷಿಗಳ ಸಂತತಿಗಳನ್ನು ಉಳಿಸುವ ಮತ್ತು ಅವುಗಳಿಗೆ ಆಹಾರ ಸಿಗುವಂತಾಗುವ ಉದ್ದೇಶದಿಂದ 20 ಲಕ್ಷ ವೆಚ್ಚದಲ್ಲಿ ಹಣ್ಣಿನ ಸಸಿಗಳನ್ನು ನೆಡುವ ಕಾರ್ಯವೂ ನಡೆಯಲಿದೆ. 

– ಅಜಯ್ ಕುಮಾರ್, ಮೇಯರ್

ಹೆಚ್ಚುತ್ತಿರುವ ಸಿಮೆಂಟ್ ರಸ್ತೆಗಳ ನಡುವೆ ದಾವಣಗೆರೆ ನಗರ ಹಸಿರು ನಗರವಾಗುವ ನಿರೀಕ್ಷೆಗಳೂ  ಗರಿಗೆದರಿವೆ.

ಹೌದು,  ಮಹಾನಗರ ಪಾಲಿಕೆ ವತಿಯಿಂದ ಪಿಬಿ ರಸ್ತೆಯ ಡಿಸಿಎಂ ಟೌನ್ ಶಿಪ್ ನಿಂದ ಜಿಎಂಐಟಿ ಕಾಲೇಜಿನವರೆಗೂ ರಸ್ತೆ ವಿಭಜಕದ ಅಂಗಳದಲ್ಲಿ ಬೌಗೇನ್ ವಿಲ್ಲಿಯ ಎಂಬ ಹೆಸರಿನ ಸೌಂದರ್ಯದ ಸಸಿಗಳನ್ನು ಹಾಕುವ ಕಾರ್ಯಕ್ಕೆ ಇತ್ತೀಚಿಗಷ್ಟೆ ಪಾಲಿಕೆ ಮೇಯರ್ ಅಜಯ್ ಕುಮಾರ್ ಚಾಲನೆ ನೀಡಿದ್ದರು.

ಪುಣೆಯಿಂದ ಸುಮಾರು 19,750 ಸಸಿ ಗಳನ್ನು ತರಿಸಲಾಗಿದ್ದು, ಬಿಳಿ, ಕೇಸರಿ, ಗುಲಾಬಿ ಈ ಮೂರು ಬಣ್ಣದಲ್ಲಿ ಪೇಪರ್ ಫ್ಲವರ್ ನಂತಹ ಹೂವು ಅರಳಲಿವೆ. ಈ ಸಸಿಗಳನ್ನು ನೆಟ್ಟು ಒಂದು ಹಂತದವರೆಗೂ ಪೋಷಿಸುವ ಹೊಣೆಯನ್ನು ಎನ್ ಜಿಓ ಸಂಸ್ಥೆಯಾದ ನೇಸರ ಅಡ್ವೆಂಜರ್ಸ್ ಗೆ ವಹಿಸಲಾಗಿದೆ. 

ಈ ಹಿಂದೆ ಮಾಜಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಅವರ ಅವಧಿಯಲ್ಲಿ ನಗರ ಸೌಂದರ್ಯ ಹೆಚ್ಚಿಸುವ ಸಲುವಾಗಿ ವಿದೇಶದಿಂದ ತರಿಸಲಾಗಿದ್ದ ದುಬಾರಿ ವೆಚ್ಚದ ಬೋನ್ಸಾಯ್ ಸಸಿಗಳನ್ನು ನೆಡಲಾಗಿತ್ತು. ಇದೀಗ ತರಿಸಲಾಗಿರುವ ಬೌಗೇನ್ ವಿಲ್ಲಿಯ ಸಸಿಗಳನ್ನು ಸಹ ಆ ಸಸಿಗಳ ಜೊತೆ ಜೊತೆಯಲ್ಲೇ ನೆಡಲಾಗುತ್ತಿದೆ ಎಂಬ ಮಾಹಿತಿ ಇದೆ.

16 ಲಕ್ಷದ 14 ಸಾವಿರಕ್ಕೆ ಟೆಂಡರ್ ಆಗಿದ್ದು, ಮೂರು ತಿಂಗಳ ಕಾಲಾವಧಿ ನೀಡಲಾಗಿದೆ. ಸಸಿಗಳನ್ನು 2 ಅಡಿವರೆಗೆ ಬೆಳೆಸುವ ಜವಾಬ್ದಾರಿ ನಮ್ಮ ಮೇಲಿದೆ. ಇವುಗಳ ಬೆಳವಣಿಗೆಗೆ 3ರಿಂದ 4 ತಿಂಗಳು ಸಮಯ ಬೇಕು ಹಾಗೂ ಕಟ್ಟಿಂಗ್ ಗೆ 5 ತಿಂಗಳು ಬೇಕು. ಈ ಸಸಿಗಳನ್ನು ಡಿವೈಡರ್ ಮೇಲೆ ಬಹಳ ಎತ್ತರಕ್ಕೆ ಬೆಳೆಸುವುದಕ್ಕಿಂತ ಅದನ್ನು ಒಂದು ಆಕಾರದಲ್ಲಿ ವಿನ್ಯಾಸಗೊಳಿಸಿದರೆ ಚೆಂದ ಕಾಣುವುದು ಎಂದು ನೇಸರ ಅಡ್ವೆಂಚರ್ಸ್ ನ ಕಾರ್ಯದರ್ಶಿ ಮಣಿಕಂಠ ಗೌಡ `ಜನತಾವಾಣಿ’ಗೆ ಮಾಹಿತಿ ನೀಡಿದ್ದಾರೆ.

ಹಸಿರೀಕರಣಕ್ಕಾಗಿ 6550 ವಿಭಿನ್ನ ಸಸಿಗಳು: ಸ್ಮಾರ್ಟ್‍ಸಿಟಿ ಯೋಜನೆಯಡಿ ನಗರದ ವಿವಿಧೆಡೆಗಳಲ್ಲಿ 6550 ವಿಭಿನ್ನ ಗಿಡಗಳನ್ನು ಹಾಕುವ ಕೆಲಸವಾಗುತ್ತಿದೆ. ಹಸಿರು, ಅರಣ್ಯೀಕರಣ ಮತ್ತು ಪರಿಸರ ಹಿತದೃಷ್ಟಿಯಿಂದ 3.77 ಕೋಟಿ ರೂ. ವೆಚ್ಚದಲ್ಲಿ ಸಸಿ ನೆಡುವ ಕಾಮಗಾರಿ ನಡೆಯುತ್ತಿದೆ. ನಗರವನ್ನು ಹಸಿರೀಕರಣ ಮಾಡಲು ಎಂಟರಿಂದ ಹತ್ತು ಜಾತಿಯ ವಿಭಿನ್ನ ಗಿಡಗಳನ್ನು ಹಾಕಲಾಗುತ್ತಿದೆ. ಸುಮಾರು ಎರಡು ವರ್ಷಗಳಿಂದ ಸಂಶೋಧನೆ ನಡೆಸಿ ಅಂತಿಮವಾಗಿ ಪರಿಸರ ಕಾಳಜಿ, ಸೌಂದರ್ಯ ಮತ್ತು ಸುವಾಸನೆ ಹರಡುವಂತಹ ಗಿಡಗಳನ್ನು ಹಾಕಲಾಗುತ್ತಿದೆ. ಈ ಗಿಡಗಳ ಬೇರು ಆಗಲಿ ಆಗುವುದಿಲ್ಲ, ಫುಟ್‍ಪಾತ್, ರಸ್ತೆ ಮೇಲೆ ಉಬ್ಬು ಏಳುವುದಿಲ್ಲ. ಈ ಗಿಡಗಳು ಎಂಟರಿಂದ ಒಂಭತ್ತು ತಿಂಗಳು ಹಸಿರು ನೀಡುತ್ತವೆ. ಉಳಿದ ತಿಂಗಳು ಹೂವು ಬಿಟ್ಟು ಸೌಂದರ್ಯ ವೃದ್ಧಿಸುತ್ತವೆ ಎನ್ನಲಾಗಿದೆ.

ಕೋನಾಟಾರ್ಫಸ್ ಹೆಸರಿನ ಗಿಡವನ್ನು ದಾವಣಗೆರೆಯಲ್ಲಿ ಪರಿಚಯಿಸುತ್ತಿದ್ದು, ಇವು ಧೂಳು ಮತ್ತು ದುರ್ವಾಸನೆ ತಡೆದು, ಸುವಾಸನೆ ಬೀರುವ ವಿಶೇಷತೆ ಹೊಂದಿವೆ. ದೆಹಲಿಯಲ್ಲಿ ಈ ಗಿಡ ನೆಡಲಾಗಿದ್ದು, ಅಲ್ಲಿ ಉತ್ತಮ ಪರಿಸರ ನಿರ್ಮಿಸಲು ಸಹಕಾರಿಯಾಗಿದೆ. ದೆಹಲಿ ನಂತರ ದಾವಣಗೆರೆಯಲ್ಲಿ ಈ ಗಿಡ ನೆಡಲಾಗುತ್ತಿದ್ದು, ನಗ ರದ ಸೌಂದರ್ಯ ಮತ್ತಷ್ಟು ಹೆಚ್ಚಿಸಲಿವೆಯಂತೆ.

Leave a Reply

Your email address will not be published.