ರಾಜ್ಯದಲ್ಲಿ ಉಲ್ಬಣಿಸಿದ ಪ್ರವಾಹ ತತ್ತರಿಸಿದ ಉತ್ತರ ಕರ್ನಾಟಕ

ರಾಜ್ಯದಲ್ಲಿ ಉಲ್ಬಣಿಸಿದ ಪ್ರವಾಹ ತತ್ತರಿಸಿದ ಉತ್ತರ ಕರ್ನಾಟಕ

ಧಾರಾಕಾರ ಮಳೆಯಿಂದಾಗಿ ರಾಜ್ಯದ ಪ್ರಮುಖ ಅಣೆಕಟ್ಟೆಗಳು ತುಂಬಿದ್ದು, ಉತ್ತರ ಕರ್ನಾಟಕ ಸೇರಿದಂತೆ ಹಲವೆಡೆ ಪ್ರವಾಹ ಪರಿಸ್ಥಿತಿ ಉಲ್ಬಣಿಸಿದೆ.

ಯಾದಗಿರಿ, ರಾಯಚೂರು, ಬಳ್ಳಾರಿ, ಬೀದರ್, ವಿಜಯಪುರ, ಬಾಗಲಕೋಟೆ, ಬೆಳಗಾವಿ, ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ, ಗದಗ, ಕೊಪ್ಪಳ, ಹಾವೇರಿ ಹಾಗೂ ಧಾರವಾಡಗಳು ಮಳೆಯಿಂದ ಅತಿ ಹೆಚ್ಚು ತತ್ತರಿಸಿವೆ.

ಎಲ್ಲಾ ಪ್ರಮುಖ ಅಣೆಕಟ್ಟೆಗಳ ಬಾಗಿಲು ತೆರೆಯಲಾಗಿದೆ. ಇದರಿಂದಾಗಿ ಕೆಳ ಭಾಗದಲ್ಲಿರುವ ಗ್ರಾಮಗಳಿಗೆ ನೀರು ನುಗ್ಗಿದೆ. ಕೆಲ ಗ್ರಾಮಗಳು ದ್ವೀಪಗಳಂತಾಗಿವೆ ಲಿಂಗನಮಕ್ಕಿ, ಸೂಪ, ವರಾಹಿ, ಹಾರಂಗಿ, ಹೇಮಾವತಿ, ಕೆ.ಆರ್.ಎಸ್., ಕಬಿನಿ, ಭದ್ರಾ, ತುಂಗಭದ್ರ, ಘಟಪ್ರಭ, ಮಲಪ್ರಭ, ಆಲಮಟ್ಟಿ ಹಾಗೂ ನಾರಾಯಣಪುರ ಅಣೆಕಟ್ಟೆಗಳು ತುಂಬಿವೆ. ಉಕ್ಕಿ ಹರಿಯುತ್ತಿರುವ ಭೀಮಾ ನದಿ ಯಿಂದ ಕಲಬುರಗಿ ಹಾಗೂ ಯಾದಗಿರಿ ಜಿಲ್ಲೆಗಳು ತತ್ತರಿಸಿವೆ. ರಾಯಚೂರಿನ ದೇವಸಗೂರಿನಲ್ಲಿ ಕೃಷ್ಣಾ ನದಿ ಅಪಾಯದ ಮಟ್ಟ ಮೀರಿ ಹರಿಯುತ್ತಿದೆ.

ಕಲಬುರಗಿಯ ಅಫ್ಜಲ್‌ಪುರ ತಾಲ್ಲೂಕಿನ ದಿಯೋಗಾಂವ್‌ ಸೇತುವೆ ಬಳಿ ಭೀಮಾ ನದಿ ನೀರು ಅಪಾಯದ ಮಟ್ಟ ತಲುಪುತ್ತಿದೆ.

ರಾಜ್ಯದಲ್ಲಿ ಸುರಿಯುತ್ತಿರುವ ಮಳೆಯಿಂದಾಗಿ 515 ಜಾನುವಾರುಗಳು ಸಾವನ್ನಪ್ಪಿವೆ. 4,782 ಜನರನ್ನು ಸುರಕ್ಷಿತ ಸ್ಥಳಗಳಿಗೆ ರವಾನಿಸಲಾಗಿದ್ದು, ಅವರು 36 ಕಾಳಜಿ ಕೇಂದ್ರಗಳಲ್ಲಿ ಆಶ್ರಯ ಪಡೆದಿದ್ದಾರೆ.

ರಾಯಚೂರಿನ ಹರಗದ್ದೆ ಹಾಗೂ ಕರಕಲಗದ್ದೆ ಹಳ್ಳಿಗಳು ಕೃಷ್ಣಾ ನದಿ ನೀರಿನಿಂದ ಜಲಾವೃತವಾಗಿ ದ್ವೀಪಗಳಂತಾಗಿದ್ದವು. ರಾಷ್ಟ್ರೀಯ ವಿಕೋಪ ಪರಿಹಾರ ದಳ ಅವರನ್ನು ರಕ್ಷಿಸಿದೆ.

ರಾಜ್ಯದಲ್ಲಿ ಕಳೆದ ಮೂರು ತಿಂಗಳಲ್ಲಿ ಮೂರನೇ ಬಾರಿಗೆ ಪ್ರವಾಹ ಪರಿಸ್ಥಿತಿ ಉಂಟಾಗಿದೆ.

ಆಗಸ್ಟ್ ಹಾಗೂ ಸೆಪ್ಟೆಂಬರ್ ತಿಂಗಳಲ್ಲಿ ಈ ಹಿಂದೆ ಹಲವೆಡೆ ಪ್ರವಾಹ ಪರಿಸ್ಥಿತಿ ಕಂಡು ಬಂದಿತ್ತು.

Leave a Reply

Your email address will not be published.