ಭದ್ರಾ ಅಚ್ಚುಕಟ್ಟಿನ ಅಭಿವೃದ್ಧಿಗೆ ವಿಶೇಷ ಅನುದಾನ ನೀಡುವಂತೆ ಮುಖ್ಯಮಂತ್ರಿಗೆ ಒತ್ತಾಯ

ಭದ್ರಾ ಅಚ್ಚುಕಟ್ಟಿನ ಅಭಿವೃದ್ಧಿಗೆ ವಿಶೇಷ  ಅನುದಾನ ನೀಡುವಂತೆ ಮುಖ್ಯಮಂತ್ರಿಗೆ ಒತ್ತಾಯ

ಶಿವಮೊಗ್ಗ, ಅ.15- ಭದ್ರಾ ಅಚ್ಚುಕಟ್ಟು ವ್ಯಾಪ್ತಿಯಲ್ಲಿ ಆಗಬೇಕಿರುವ ಕೆಲಸಗಳ ಬಗ್ಗೆ ಮತ್ತು ಭದ್ರಾ ಕಾಡಾಕ್ಕೆ ವಿಶೇಷ ಅನುದಾನ ನೀಡುವಂತೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಬಳಿ ಮನವಿ ಮಾಡೋಣ ಎಂದು ಭದ್ರಾ ಕಾಡಾ ನೂತನ ಅಧ್ಯಕ್ಷರಾದ ಪವಿತ್ರ ರಾಮಯ್ಯ ಹೇಳಿದರು.

ಮಲವಗೊಪ್ಪದಲ್ಲಿರುವ ಭದ್ರಾ ಕಾಡಾ ಕಚೇರಿಯಲ್ಲಿ ಗುರುವಾರ ತಮ್ಮನ್ನು ಭೇಟಿ ಮಾಡಿದ ಭದ್ರಾ ಜಲಾಶಯ ಯೋಜನಾ ಮಟ್ಟದ ನೀರು ಬಳಕೆದಾರರ ಸಹಕಾರ ಸಂಘಗಳ ಮಹಾಮಂಡಳದ ಅಧ್ಯಕ್ಷರು ಹಾಗೂ ನಿರ್ದೇಶಕರೊಂದಿಗೆ ನಡೆಸಿದ ಸಭೆಯಲ್ಲಿ ಅವರು ಮಾತನಾಡಿದರು.

ಭದ್ರಾ ಕಾಡಾ ವ್ಯಾಪ್ತಿಯಲ್ಲಿ ಕಾಲುವೆಗಳ ದುರಸ್ತಿ ಸೇರಿದಂತೆ ಅಗತ್ಯ ಹೊಸ ಕಾಮಗಾರಿಗಳು, ರೈತರಿಗೆ ಅನುಕೂಲವಾಗುವ ಕೆಲಸಗಳನ್ನು ಕೈಗೆತ್ತಿಕೊಳ್ಳುವ ಉದ್ದೇಶ ಹೊಂದಿದ್ದೇನೆ ಎಂದವರು ಹೇಳಿದರು.

ರೈತ ಸಂಘದ ಗೌರವಾಧ್ಯಕ್ಷ ಹೆಚ್.ಆರ್.ಬಸವರಾಜಪ್ಪ ಮಾತನಾಡಿ, ಭದ್ರಾ ಜಲಾಶಯದಿಂದ ನೀರನ್ನು ನಾಲೆಗೆ ಬಿಡುಗಡೆ ಮಾಡುವ ಮುನ್ನ ನೀರಾವರಿ ಸಲಹಾ ಸಮಿತಿ ಸಭೆಯಲ್ಲಿ ಚರ್ಚಿಸಿ ಎಂದರು.

ಮಹಾಮಂಡಳದ ಅಧ್ಯಕ್ಷ ವೈ.ದ್ಯಾವಪ್ಪ ರೆಡ್ಡಿ ಮಾತನಾಡಿ, ಭದ್ರಾ ಕಾಡಾ, ನೀರಾವರಿ ನಿಗಮ ಮತ್ತು ನೀರು ಬಳಕೆದಾರರ ಸಂಘಗಳು ಪರಸ್ಪರ ಹೊಂದಾಣಿಕೆಯಿಂದ ಕೆಲಸ ಮಾಡಿ ದರೆ, ಅಚ್ಚುಕಟ್ಟಿನ ರೈತರಿಗೆ ಅನುಕೂಲ ವಾಗಲಿದೆ ಎಂಬ ವಿಷಯವನ್ನು ಸಭೆಯ ಗಮನಕ್ಕೆ ತಂದಾಗ ಎಲ್ಲರೂ ಒಪ್ಪಿಕೊಂಡರು.

ಕಾಲುವೆಗಳ ಕಾಮಗಾರಿಯನ್ನು ಟೆಂಡರ್ ಕರೆಯದೆ ನೀರು ಬಳಕೆದಾರರ ಸಂಘಗಳಿಗೆ ನೀಡಿ, ಕೆಲಸವಾದ ನಂತರ ಕಾಮಗಾರಿ ಪರೀಕ್ಷೆ ಮಾಡಿ, ಬಿಲ್ ಪಾವತಿಸಿ ಎಂದು ದ್ಯಾವಪ್ಪರೆಡ್ಡಿ ಮನವಿ ಮಾಡಿದರು.

ರೈತ ಮುಖಂಡ ಹಾಗೂ ಮಹಾಮಂ ಡಳದ ನಿರ್ದೇಶಕ ತೇಜಸ್ವಿ ಪಟೇಲ್ ಮಾತನಾಡಿ, ಭದ್ರಾ ಅಚ್ಚುಕಟ್ಟು ವ್ಯಾಪ್ತಿಯಲ್ಲಿ ಕೆಲಸ ಮಾಡುವ ನೀರು ಗಂಟಿಗಳಿಗೆ ಪ್ರತಿ ತಿಂಗಳು ಸರಿಯಾಗಿ ಸಂಬಳ ನೀಡಬೇಕು. ದಿನಗೂಲಿ ನೌಕರರ ಟೆಂಡರ್ ಪದ್ದತಿ ರದ್ದು ಮಾಡಿ, ನೀರು ಬಳಕೆದಾರರ ಸಂಘಗಳಿಗೆ ಅದರ ಜವಾಬ್ದಾರಿ ನೀಡಿ ಎಂದರು.

ಮಹಾಮಂಡಳದ ನಿರ್ದೇಶಕ ಮುದೇ ಗೌಡ್ರ ಗಿರೀಶ್ ಮಾತನಾಡಿ, ಅಚ್ಚುಕಟ್ಟಿನ ಕೊನೆ ಭಾಗದ ರೈತರಿಗೆ ನೀರು ಸಮರ್ಪಕವಾಗಿ ತಲುಪುವುದಿಲ್ಲ. ಹೊಲಗಾಲುವೆ ಕಾಂಕ್ರೀಟ್ ಲೈನಿಂಗ್ ಮಾಡಿದರೆ, ರೈತರಿಗೆ ಅನುಕೂಲ ವಾಗುತ್ತದೆ ಎಂದು ಅಭಿಪ್ರಾಯಪಟ್ಟರು.

ಅಪ್ಪರ ಭದ್ರಾ ವಿಷಯ ಪ್ರಪ್ತಾಪಿಸಿದ ಗಿರೀಶ್ ಅವರು, ತುಂಗಾದಿಂದ ನೀರನ್ನು ಲಿಫ್ಟ್ ಮಾಡದೆ ಭದ್ರಾದಿಂದ 700 ಕ್ಯೂಸೆಕ್ಸ್  ನೀರು ಹರಿಸುವುದಕ್ಕೆ ಅಸಮಾಧಾನ ವ್ಯಕ್ತಪಡಿಸಿದರು.

ಮಹಾಮಂಡಳದ ಉಪಾಧ್ಯಕ್ಷ ಶ್ರೀನಿವಾಸ್, ಕೃಷಿಕ ಸಮಾಜದ ರಾಜ್ಯಾಧ್ಯಕ್ಷ ಮಹೇಂದ್ರನಾಥ್, ಮಹಾಮಂಡಳದ ನಿರ್ದೇಶಕ ಬೆಳಲಗೆರೆ ದೇವೇಂದ್ರಪ್ಪ, ಮಲ್ಲಿಕಾರ್ಜುನಪ್ಪ ತರೀಕೆರೆ, ಹೊನ್ನಾಳಿ ಹರೀಶ್, ಎ.ಬಿ. ಕರಿಬಸಪ್ಪ, ಹನುಮಂತರೆಡ್ಡಿ, ಚಂದ್ರಪ್ಪ ಅರಕೆರೆ ಮತ್ತು ಮಹಾಮಂಡಳದ ಸಿಇಒ ವೀರಪ್ಪ ಸಭೆಯಲ್ಲಿ ಹಾಜರಿದ್ದರು.

Leave a Reply

Your email address will not be published.