ಕೈ ತೊಳೆಯುವುದರಿಂದ ಕಾಯಿಲೆಗಳು ದೂರ

ಕೈ ತೊಳೆಯುವುದರಿಂದ ಕಾಯಿಲೆಗಳು ದೂರ

ದಾವಣಗೆರೆ, ಅ. 15- ಪದೇ ಪದೇ ಕೈ ತೊಳೆಯುವುದು, ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಕಾಪಾಡುವುದರಿಂದ ಕೊರೊನಾದಂತಹ ಕಾಯಿಲೆಗಳು ಹರಡುವುದನ್ನು ತಡೆಗಟ್ಟಬಹುದು ಎಂದು ಮಹಾನಗರ ಪಾಲಿಕೆ ಆಯುಕ್ತ ವಿಶ್ವನಾಥ ಮುದಜ್ಜಿ ಹೇಳಿದರು.

ನಗರದ ದೇವರಾಜ ಅರಸ್ ಬಡಾವಣೆಯ ರೆಡ್ ಕ್ರಾಸ್ ಭವನದಲ್ಲಿ ಗುರುವಾರ ರೆಡ್ ಕ್ರಾಸ್ ಸಂಸ್ಥೆ ಆಯೋಜಿಸಿದ್ದ ಜಾಗತಿಕ ಕೈ ತೊಳೆಯುವ ದಿನಾಚರಣೆ, ಕೈ ತೊಳೆಯುವ ಕುರಿತ ಜಾಗೃತಿ ವಾಹನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಪ್ರತಿದಿನ ಸ್ವಚ್ಛವಾಗಿ ಸಾಬೂನಿನಿಂದ ಕೈ  ತೊಳೆಯುವುದನ್ನು ಪ್ರತಿಯೊಬ್ಬರೂ ರೂಢಿಸಿ ಕೊಂಡರೆ ಕಾಯಿಲೆಗಳಿಂದ ಸದಾ ದೂರವಿರ ಬಹುದು ಎಂದು ಮುದಜ್ಜಿ ಅಭಿಪ್ರಾಯಿಸಿದರು.

ರೆಡ್‍ಕ್ರಾಸ್ ಸಂಸ್ಥೆ ಕಳೆದ ಆರೇಳು ತಿಂಗಳಿನಿಂದ ನಗರ, ಗ್ರಾಮೀಣ ಪ್ರದೇಶಗಳು ಸೇರಿದಂತೆ ಎಲ್ಲೆಡೆ ಕೊರೊನಾ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಅರಿವು ಮೂಡಿಸುತ್ತಿದೆ. 

ಸ್ವಚ್ಛತೆ ಕಾಪಾಡಿಕೊಳ್ಳುವುದು, ಮಾಸ್ಕ್ ಧರಿಸುವುದು,  ಸಾಮಾಜಿಕ ಅಂತರ ಕಾಪಾಡುವ ಕಾರ್ಯಕ್ರಮಗಳನ್ನು ನಡೆಸುತ್ತಾ ಬಂದಿದೆ. ಪೊಲೀಸ್ ಇಲಾಖೆ, ಮಹಾನಗರ ಪಾಲಿಕೆ ಅಧಿಕಾರಿಗಳು, ಸಿಬ್ಬಂದಿಗಳೂ ಸಹ ಜನರಲ್ಲಿ ಜಾಗೃತಿ ಮೂಡಿಸುವಲ್ಲಿ ನಿರತರಾಗಿದ್ದಾರೆ ಎಂದು ಹೇಳಿದರು.

ರೆಡ್ ಕ್ರಾಸ್ ಸಂಸ್ಥೆಯ ಅಧ್ಯಕ್ಷ ಡಾ.ಎ.ಎಂ.ಶಿವಕುಮಾರ್ ಮಾತನಾಡಿ, ಸಾಬೂನು ಬಳಸಿ ಕೈ ತೊಳೆಯುವುದು ದೈನಂದಿನ ಕಾರ್ಯಕ್ರಮಗಳಲ್ಲಿ ಒಂದಾಗಬೇಕು ಎಂದು  ಹೇಳಿದರು.

ಕೈ ತೊಳೆಯುವುದು ಈ ದಿನಕ್ಕೆ ಮಾತ್ರ ಸೀಮಿತವಾಗಬಾರದು. ಅದನ್ನು ಜೀವನ ಪರ್ಯಂತ ನಡೆಸಿದರೆ ನಮ್ಮ ಮಕ್ಕಳು, ಸುತ್ತ ಮುತ್ತಲ ಪ್ರದೇಶದ ಮಕ್ಕಳು ಆರೋಗ್ಯವಂತ ರಾಗಿರಲು ಸಾಧ್ಯ ಎಂದು ಹೇಳಿದರು.

 ಈಗಾಗಲೇ ವಾಟ್ಸಾಪ್, ಫೇಸ್‍ಬುಕ್ ಸೇರಿದಂತೆ ಸಾಮಾಜಿಕ ಜಾಲ ತಾಣಗಳ ಮೂಲಕ  ಕೈ ತೊಳೆಯುವ ಕುರಿತ ವಿಡಿಯೋವನ್ನು ಕಳುಹಿಸಿ ಜಾಗೃತಿ ಮೂಡಿಸುತ್ತಿದ್ದೇವೆ. ನೀವೂ ಸಹ ನಿಮ್ಮ ಸ್ನೇಹಿತರಿಗೆ ಕಳುಹಿಸಿ ಇತರರೂ ಜಾಗೃತರಾಗುವಂತೆ ಮಾಡಿ ಎಂದು ನೆರೆದಿದ್ದವರಿಗೆ ಸಲಹೆ ನೀಡಿದರು.

ಕಾರ್ಯಕ್ರಮದಲ್ಲಿ ಸಂಸ್ಥೆಯ ಸಿಎ ಉಮೇಶ ಶೆಟ್ಟಿ, ಉಪಾಧ್ಯಕ್ಷ ಡಿ.ಎಸ್.ಸಿದ್ದಣ್ಣ, ಗೌಡ್ರ ಚನ್ನಬಸಪ್ಪ, ಕಾರ್ಯದರ್ಶಿ ಡಿ.ಎಸ್.ಸಾಗರ್, ಖಜಾಂಚಿ ಅನಿಲ್ ಬಾರೆಂಗಳ್, ರಾಜ್ಯ ಸಮಿತಿ ಸದಸ್ಯ ಡಾ.ಕೆ.ಮಹೇಶ್, ಆನಂದ ಜ್ಯೋತಿ, ಇನಾಯತ್‍ವುಲ್ಲಾ, ಎಂ.ಜಿ.ಶ್ರೀಕಾಂತ್, ಶ್ರೀಕಾಂತ ಬಗರೆ, ಕೆ.ಕೆ. ನಾಗರಾಜ್ ಇತರರು ಉಪಸ್ಥಿತರಿದ್ದರು.

Leave a Reply

Your email address will not be published.