ರಕ್ತದಾನಿಗಳ ಸಂಖ್ಯೆ ಹೆಚ್ಚಾಗಲಿ

ರಕ್ತದಾನಿಗಳ ಸಂಖ್ಯೆ ಹೆಚ್ಚಾಗಲಿ

ದಾವಣಗೆರೆ, ಅ. 10- ಬೇರೊಬ್ಬರ ಜೀವ ಉಳಿ ಸುವಂತಹ ರಕ್ತದಾನಿಗಳ ಸಂಖ್ಯೆ ಹಾಗೂ ರಕ್ತದಾನದ ಬಗ್ಗೆ ಪ್ರಚಾರ ಹೆಚ್ಚಾಗಬೇಕು ಎಂದು ಜಿಲ್ಲಾ ಪಂಚಾಯ್ತಿ ಸಿಇಒ ಪದ್ಮಾ ಬಸವಂತಪ್ಪ ಹೇಳಿದರು.

ನಗರದ ಕುವೆಂಪು ಕನ್ನಡ ಭವನದಲ್ಲಿ  `ರಾಷ್ಟ್ರೀಯ ಸ್ವಯಂಪ್ರೇರಿತ ರಕ್ತದಾನ ದಿನಾಚರಣೆ’ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ತಾವೂ ಸಹ ಕಾಲೇಜು ದಿನಗಳಲ್ಲಿ ಎರಡು-ಮೂರು ಬಾರಿ ರಕ್ತದಾನ ಮಾಡಿದ್ದಾಗಿ ಹೇಳಿದ ಅವರು, ಕೃತಕ ರಕ್ತ ಉತ್ಪಾದಿಸಲು ಸಾಧ್ಯವಿಲ್ಲ. ಆದ್ದರಿಂದ ಬೇರೊಬ್ಬರ ಜೀವ ಉಳಿಸಲು ರಕ್ತದಾನ ಮಾಡುವುದು ಅತ್ಯಗತ್ಯವಾಗಿದೆ ಎಂದು ಹೇಳಿದರು.

ನನ್ನ ತಾಯಿ ಕ್ಯಾನ್ಸರ್‌ನಿಂದ ಬಳಲುತ್ತಿದ್ದಾಗ ಅವರಿಗೆ ರಕ್ತದ ಅಗತ್ಯತೆ ಇರುತ್ತಿತ್ತು. ಸ್ನೇಹಿತರು ರಕ್ತದಾನ ಮಾಡಿ ನೆರವಾಗುತ್ತಿದ್ದರು. ಆಗಲೇ ನನಗೆ ರಕ್ತದ ಮಹತ್ವ ಅರಿವಾಯಿತು ಎಂದು ನೆನಪಿಸಿಕೊಂಡರು. ಕೊರೊನಾ ಕಾಲದಲ್ಲೂ ಸ್ವಯಂ ಪ್ರೇರಿತರಾಗಿ ರಕ್ತದಾನ ಮಾಡಲು ಮುಂದಾಗಿರು ವುದು ಶ್ಲ್ಯಾಘನೀಯ.  ರಕ್ತದ ಜೊತೆ ದೇಹದ ಅಂಗಾಂಗಳ ದಾನದ ಬಗ್ಗೆಯೂ ಪ್ರಚಾರದ ಅಗತ್ಯತೆ ಇದೆ ಎಂದು ಹೇಳಿದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಜಿಲ್ಲಾ ಏಡ್ಸ್ ಪ್ರತಿಬಂಧಕ ಮತ್ತು ನಿಯಂತ್ರಣ ಘಟಕದ ಅಧಿಕಾರಿ ಡಾ. ಕೆ.ಹೆಚ್.ಗಂಗಾಧರ್, ಭಾರತದಲ್ಲಿ ಪ್ರತಿ ವರ್ಷ ಅಕ್ಟೋಬರ್ 1 ರಂದು ರಾಷ್ಟ್ರೀಯ ರಕ್ತದಾನ ದಿನಾಚರಣೆಯನ್ನು ಡಾ. ಜೈ ಗೋಪಾಲ್ ಜೊಲ್ಲಿ ಇವರ ಜನ್ಮ ದಿನದ ಸ್ಮರಣಾರ್ಥ ಆಚರಿಸಲಾಗುತ್ತಿದೆ ಎಂದರು.

ಸ್ವಯಂ ಪ್ರೇರಿತ ರಕ್ತದಾನ ಮಾಡಿದ ವ್ಯಕ್ತಿಗಳಿಗೆ ಧನ್ಯವಾದ ತಿಳಿಸುವುದು ಮತ್ತು ಪ್ರೋತ್ಸಾಹಿಸುವುದು ಈ ದಿನದ ಮುಖ್ಯ ಉದ್ದೇಶವಾಗಿದೆ ಎಂದರು.

ಇದೇ ಸಂದರ್ಭದಲ್ಲಿ ಅತೀ ಹೆಚ್ಚು ಬಾರಿ ರಕ್ತದಾನ ಮಾಡಿದ ಕಲ್ಲೇಶಪ್ಪ, ಹನುಮಂತಪ್ಪ, ಎಂ.ಜಿ.ಶ್ರೀಕಾಂತ್, ವೀರೇಂದ್ರ ಪ್ರಸಾದ್, ಸಂತೋಷ್ ಕುಮಾರ್ ಅವರುಗಳನ್ನು ಸನ್ಮಾನಿಸಲಾಯಿತು. 

ಎನ್‍ಸಿಸಿ ಯ 10 ಜನರು ರಕ್ತದಾನ ಮಾಡಿದರು. ಆಪ್ತ ಸಮಾಲೋಚಕ ಬಿ.ಡಿ.ಮಹೇಂದ್ರಪ್ಪ ನಿರೂಪಿಸಿದರು. ಐಸಿಟಿಸಿ ಕೇಂದ್ರದ ಮಹಾದೇವ ಪ್ರಾರ್ಥಿಸಿದರು. ಜಿಲ್ಲಾ ಆಸ್ಪತ್ರೆಯ ಅಧೀಕ್ಷಕ ಡಾ.ಜೈಪ್ರಕಾಶ, ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಯ ಅಧೀಕ್ಷಕ ಡಾ.ನೀಲಕಂಠ ಜೆ.ಬಿ, ಜಿಲ್ಲಾ ಕುಷ್ಠರೋಗ ನಿಯಂತ್ರಣ ಅಧಿಕಾರಿ ಡಾ.ಮುರಳಿಧರ, ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ.ಹೆಚ್.ಎಸ್.ಮಂಜುನಾಥ ಕುರ್ಕಿ, ಎನ್‍ವಿಸಿಪಿಡಿ ಡಾ.ನಟರಾಜ ಇತರರು ಹಾಜರಿದ್ದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಏಡ್ಸ್ ಪ್ರತಿಬಂಧಕ ಮತ್ತು ನಿಯತ್ರಣ ಘಟಕ, ರಕ್ತ ಭಂಡಾರ, ಚಿಗಟೇರಿ ಜಿಲ್ಲಾ ಆಸ್ಪತ್ರೆ ದಾವಣಗೆರೆ, ಕರ್ನಾಟಕ ರಾಜ್ಯ ಏಡ್ಸ್ ನಿಯಂತ್ರಣ ಸೊಸೈಟಿ ಬೆಂಗಳೂರು ಹಾಗೂ ವಿವಿಧ ರಕ್ತನಿಧಿ ಕೇಂದ್ರಗಳ  ಸಂಯುಕ್ತಾಶ್ರಯದಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

Leave a Reply

Your email address will not be published.