ಕೂಡ್ಲಿಗಿಯಲ್ಲಿ ಅರ್ಥಪೂರ್ಣ ಗುರುವಂದನಾ ಕಾರ್ಯಕ್ರಮ

ಕೂಡ್ಲಿಗಿಯಲ್ಲಿ ಅರ್ಥಪೂರ್ಣ ಗುರುವಂದನಾ ಕಾರ್ಯಕ್ರಮ

ಕೂಡ್ಲಿಗಿ, ಅ.10- ಇಲ್ಲಿನ ಶ್ರೀ ರೇಣುಕ ಪ್ರೌಢಶಾಲೆಯ 2002ನೇ ಸಾಲಿನ ಹತ್ತನೇ ತರಗತಿ ವಿದ್ಯಾರ್ಥಿಗಳಿಂದ ಗುರುವಂದನಾ ಕಾರ್ಯಕ್ರಮ ಹಾಗೂ ಸ್ನೇಹ ಸಮ್ಮಿಲನ ಕಾರ್ಯಕ್ರಮವನ್ನು ಶಾಲೆಗೆ ಗ್ರೀನ್ ಬೋರ್ಡ್‌ಗಳನ್ನು ವಿತರಿಸಿ ಸಸಿ ನೆಡುವುದರ ಮೂಲಕ ಹಾಗೂ ಶಾಲೆಯ ಕಿಟಿಕಿ ಬಾಗಿಲುಗಳನ್ನು ಸರಿಪಡಿಸಿ ಬಣ್ಣ ಹಚ್ಚಿ ಶಾಲಾ ಸೌಂದರ್ಯೀಕರಣ ಹಾಗೂ ನೆಚ್ಚಿನ ಗುರುಗಳಿಗೆ ನೆನಪಿನ ಕಾಣಿಕೆಯಾಗಿ ಗಡಿಯಾರ ಕೊಡುವುದರ ಮೂಲಕ ಆಚರಿಸಲಾಯಿತು.

ಶ್ರೀ ರೇಣುಕಾ ಪ್ರೌಢಶಾಲೆಯ ಮಾಜಿ ಪ್ರಾಂಶುಪಾಲ ಸೋಮಯ್ಯ ಅವರ ಅಧ್ಯಕ್ಷತೆಯಲ್ಲಿ ಕಾರ್ಯಕ್ರಮ ನಡೆಯಿತು.

ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಸೋಮಯ್ಯ, ಪ್ರಸ್ತುತ ದಿನಗಳಲ್ಲಿ ಒತ್ತಡದಿಂದ ಕಲಿಸಲಾಗುತ್ತಿದೆ. ಕೇವಲ ಅಂಕಗಳನ್ನು ಮಾತ್ರ ಪರಿಗಣಿಸುವ ಪರಿಣಾಮ ಉತ್ತಮ ಜೀವನ ರೂಪಿಸಿಕೊಳ್ಳುವಲ್ಲಿ ವಿಫಲರಾಗುತ್ತಾರೆ. ಶಿಕ್ಷಕನಿಂದ ಪಾಠ ಕೇಳಿದ ಎಲ್ಲ ವಿದ್ಯಾರ್ಥಿಗಳು ವಿವೇಕ ಪಡೆಯುವುದಿಲ್ಲ, ಹಾಗೆಯೇ ಎಲ್ಲರೂ ಬುದ್ದಿವಂತರಾಗಲು ಸಾಧ್ಯವಿಲ್ಲ ಎಂದು ಪ್ರತಿಪಾದಿಸಿದರು.

ನಿವೃತ್ತ ಶಿಕ್ಷಕ ನಾಗನಗೌಡ್ರು, ನಿವೃತ್ತ ಶಿಕ್ಷಕ ಕೆ.ಜಿ. ಚಂದ್ರಶೇಖರ್, ನಿವೃತ್ತ ಶಿಕ್ಷಕ ಶಫಿವುಲ್ಲಾ (ಗುರೂಜಿ), ನಿವೃತ್ತ ಶಿಕ್ಷಕ ಕೊಟ್ರೇಶ್ ಅವರುಗಳು ಮಾತನಾಡಿದರು.

ಗುರುಬಸವರಾಜ್, ಮಂಜುನಾಥ್, ಚಂದ್ರಶೇಖರ್ ಸೇರಿದಂತೆ 20ಕ್ಕು ಹೆಚ್ಚು ಶಿಕ್ಷಕರನ್ನು ಸನ್ಮಾನಿಸಲಾಯಿತು.

ಶಾಲೆಯ ಹಳೆಯ ವಿದ್ಯಾರ್ಥಿಗಳಾದ ಕೆ.ಬಿ. ಮಂಜುನಾಥ್ ಮಾತನಾಡಿ, ನಾನು ಓದಿದ ಶಾಲೆಯಲ್ಲಿ ಪ್ರತಿ ವರ್ಷವೂ ಹೆಚ್ಚಿನ ಅಂಕ ಪಡೆದವರಿಗೆ ಪ್ರಥಮ ಬಹುಮಾನ ಹತ್ತು ಸಾವಿರ, ದ್ವಿತೀಯ ಬಹುಮಾನ ಐದು ಸಾವಿರಗಳನ್ನು ನನ್ನ ಉಸಿರಿರುವವರೆಗೂ ಕೊಡುತ್ತೇನೆ ಎಂದು ಎಲ್ಲಾ ಗುರುಗಳ ಮುಂದೆ ಘೋಷಣೆ ಮಾಡಿದರು.

ಜಿ. ಜಗದೀಶ್, ಬೆಣ್ಣೆ ವಿಜಯಕುಮಾರ್, ಬಿ. ಪತ್ರೇಶ್, ರಾಘವೇಂದ್ರ, ಪ್ರಶಾಂತ್ ಯಾದವ್, ಮಂಜು ಮಯೂರ ಅನಿಸಿಕೆ ವ್ಯಕ್ತಪಡಿಸಿದರು. 

Leave a Reply

Your email address will not be published.