ಕೊರೊನಾ ಸಂಕಷ್ಟದಲ್ಲೂ ಹೆಚ್ಚಿದ ಖುಷಿ ವಸೂಲಿ

ಕೊರೊನಾ ಸಂಕಷ್ಟದಲ್ಲೂ ಹೆಚ್ಚಿದ ಖುಷಿ ವಸೂಲಿ

ಉದ್ಯಮಿಗಳಿಗೆ ಐದಾರು ಠಾಣೆ ಪೊಲೀಸರಿಂದ ಹಣಕ್ಕೆ ಬೇಡಿಕೆ
ಹಿರಿಯ ಅಧಿಕಾರಿಗಳು ಗಮನ ಹರಿಸಲು ಉದ್ಯಮಿಗಳ ಮನವಿ

ದಾವಣಗೆರೆ, ಅ.7- ದಸರಾ ಅಥವಾ ದೀಪಾವಳಿ ಹಬ್ಬದ ಖುಷಿ ಎಂದು ವ್ಯಾಪಾರಸ್ಥರು, ಉದ್ದಿಮೆದಾರರಿಂದ ಪೊಲೀಸರು, ವಿದ್ಯುತ್ ಇಲಾಖೆ ಅಧಿಕಾರಿಗಳು ಸೇರಿದಂತೆ ಆಯಾ ಉದ್ದಿಮೆಗಳಿಗೆ ಸಂಬಂಧಿಸಿದ ಸರ್ಕಾರಿ ಸಂಸ್ಥೆಗಳು ಹಣ ವಸೂಲಿ ಮಾಡುವುದು ಹಳೆಯ ಸುದ್ದಿ.

ಆದರೆ ಕೊರೊನಾ ಸಂಕಷ್ಟದಲ್ಲೂ ಈ ಖುಷಿಯ ವಸೂಲಿ ನಿಂತಿಲ್ಲ. ಇದು ಚಿಕ್ಕ ಪುಟ್ಟ ವ್ಯಾಪಾರಸ್ಥರು, ಉದ್ಯಮಿಗಳಿಗೆ `ಬಿಸಿ ತುಪ್ಪ’ ವಾಗಿದೆ.

ಕೊರೊನಾ ಹಿನ್ನೆಲೆಯಲ್ಲಿ ಈಗಾಗಲೇ ನಷ್ಟದಲ್ಲಿರುವ ಇಂಡಸ್ಟ್ರೀ ಮಾಲೀಕರು, ವ್ಯಾಪಾರಸ್ಥರಿಂದ  ಹಬ್ಬಕ್ಕೆಂದು ಪ್ರತಿ ವರ್ಷಕ್ಕಿಂತ ಹೆಚ್ಚಿನ `ಖುಷಿ ಹಣ’ ನೀಡುವಂತೆ ಪೊಲೀಸರು ದುಂಬಾಲು ಬಿದ್ದಿದ್ದಾರೆ ಎಂದು ಕೆಲ ಉದ್ಯಮಿಗಳ ಆರೋಪವಾಗಿದೆ.

ಹೌದು, ಇಂಡಸ್ಟ್ರೀಯಲ್ ಏರಿಯಾದಲ್ಲಿನ ಸುಮಾರು 30ಕ್ಕೂ ಹೆಚ್ಚು ಇಂಡಸ್ಟ್ರೀಗಳೂ ಸೇರಿದಂತೆ ನಗರದ ವಿವಿಧೆಡೆ ಇರುವ ರೈಸ್ ಮಿಲ್‌ಗಳು, ಗಾರ್ಮೆಂಟ್ಸ್, ಸೋಪ್ ಫ್ಯಾಕ್ಟರಿ, ಶುದ್ಧ ನೀರು ಘಟಕ, ಹೀಗೆ ಅನೇಕ ಸಣ್ಣ ಹಾಗೂ ಮಧ್ಯಮ ಉದ್ದಿಮೆದಾದರರಿಂದ ಪ್ರತಿ ವರ್ಷ  ಕೆಲ ಇಲಾಖೆಗಳಿಗೆ  ಹಬ್ಬದ `ಖುಷಿ’ ಸಂದಾಯವಾಗುತ್ತದೆ.

ಆದರೆ ಈಗ ಕೊರೊನಾ ದಿಂದಾಗಿ ಜನ ಸಾಮಾನ್ಯರು ಸೇರಿದಂತೆ ವ್ಯಾಪಾರಸ್ಥರು, ವಾಣಿಜ್ಯೋದ್ಯಮಿಗಳೆನ್ನದೆ ಎಲ್ಲರಿಗೂ ಬಹುದೊಡ್ಡ ಪೆಟ್ಟು ನೀಡಿದೆ. ಈಗಷ್ಟೇ ಆರ್ಥಿಕ ಚಟುವಟಿಕೆಗಳು ಚೇತರಿಕೆ ಕಾಣುತ್ತಿವೆಯಾದರೂ ಲಾಭದ ಮುಖ ನೋಡಲು ಹಲವು ತಿಂಗಳುಗಳೇ ಬೇಕಿದೆ.

ಇಂತಹ ವೇಳೆ ಪ್ರತಿ ಉದ್ಯಮಿಯ ಬಳಿ ಪೊಲೀಸರು 1 ಸಾವಿರ ರೂ.ಗಳಿಂದ ಹಿಡಿದು 10 ಸಾವಿರ ರೂ.ಗಳವರೆಗೆ ಹಬ್ಬದ `ಖುಷಿ ಹಣ’ ವಸೂಲಿ ಮಾಡುತ್ತಿದ್ದಾರೆ. ಈ ಬಾರಿ ಕೊರೊನಾ ನೆಪ ಹೇಳಿಯೇ ವಸೂಲಿ `ಖುಷಿ’ಯ  ಮೊತ್ತವನ್ನೂ ಹೆಚ್ಚಿಸಿ ನೀಡುವಂತೆ ದುಂಬಾಲು ಬಿದ್ದಿದ್ದಾರೆ ಎಂದು ಕೆಲ ವ್ಯಾಪಾರಸ್ಥರು ಆರೋಪಿಸಿದ್ದಾರೆ. ಪೊಲೀಸರ ಈ ಒತ್ತಾಯ ಎಷ್ಟರ ಮಟ್ಟಿಗೆ ಸರಿ ಎಂದು ಉದ್ಯಮಿಗಳು ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ.

ಕೆಲ ಪೊಲೀಸ್ ಠಾಣೆಯ ಪೊಲೀಸರು ತಮ್ಮ ಠಾಣಾ ವ್ಯಾಪ್ತಿ ಮೀರಿ ಖುಷಿಯ ವಸೂಲಿಗೆ ಇಳಿದಿದ್ದಾರೆ. ಇಂಡಸ್ಟ್ರೀಯಲ್ ಏರಿಯಾದಲ್ಲಿನ ಉದ್ಯಮಿಯೊಬ್ಬರು ಹೇಳುವಂತೆ, ಪ್ರತಿ ವರ್ಷ ಐದಾರೂ ಪೊಲೀಸ್ ಠಾಣೆಯ ಪೊಲೀಸರು ಹಣ ಕೇಳಲು ಬರುತ್ತಾರೆ.

ಹಣ ನೀಡದೆ ಪೊಲೀಸರನ್ನು ಎದುರು ಹಾಕಿಕೊಳ್ಳುವುದು ಕಷ್ಟ. ಸರಕು ಸಾಗಾಣಿಕೆ ವೇಳೆ ಅಥವಾ ಇನ್ನಿತರ ಸಂದರ್ಭಗಳಲ್ಲಿ ಅನಗತ್ಯ ಕಿರಿ ಕಿರಿ ನೀಡಲಾರಂಭಿಸುತ್ತಾರೆ. ಆದ್ದರಿಂದ ಸುಮ್ಮನೇ ಕೇಳಿದಷ್ಟು ಕೊಟ್ಟು ಕೈತೊಳೆದುಕೊಳ್ಳುತ್ತೇವೆ ಎನ್ನುತ್ತಾರೆ.

ಕೊರೊನಾ ಸಂಕಷ್ಟದಲ್ಲಿ ಉದ್ಯಮ ನಷ್ಟದಲ್ಲಿದೆ. ಆದರೂ ಬಡ ಕಾರ್ಮಿಕರಿಗೆ ತೊಂದರೆಯಾಗದಂತೆ ಕೆಲಸ ನೀಡಿ ವೇತನ ನೀಡುತ್ತಿದ್ದೇವೆ. ಇಂತಹ ವೇಳೆ ಪೊಲೀಸರ ಈ ಖುಷಿ ಬೇಡಿಕೆ ಹೆಚ್ಚು ದುಃಖ ನೀಡುತ್ತಿದೆ. 

ನಮಗಂತೂ ಹಬ್ಬ ಆಚರಿಸುವ ಖುಷಿಯೇ ಇಲ್ಲ, ಆದರೆ ಪೊಲೀಸರನ್ನು ಮಾತ್ರ ಖುಷಿ ಪಡಿಸುವ ಅನಿವಾರ್ಯತೆ ಒದಗಿ ಬಂದಿದೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಸೇರಿದಂತೆ ಹಿರಿಯ ಅಧಿಕಾರಿಗಳು ಈ ಬಗ್ಗೆ ಗಮನ ಹರಿಸಿ ವ್ಯಾಪಾರಸ್ಥರು, ಉದ್ಯಮಿಗಳ ಹಿತ ಕಾಪಾಡಬೇಕು ಎಂದವರು ವಿವಂತಿಸಿದ್ದಾರೆ.

Leave a Reply

Your email address will not be published.