ಅಹಿಂಸೆ – ಸತ್ಯಾಗ್ರಹ ಎಂಬ ಅಸ್ತ್ರಗಳನ್ನು ನೀಡಿ, ಸ್ವತಂತ್ರ ತಂದುಕೊಟ್ಟ ಮಹಾನ್ ಸಂತ ಗಾಂಧೀಜಿ

ಅಹಿಂಸೆ – ಸತ್ಯಾಗ್ರಹ ಎಂಬ ಅಸ್ತ್ರಗಳನ್ನು ನೀಡಿ,  ಸ್ವತಂತ್ರ ತಂದುಕೊಟ್ಟ ಮಹಾನ್ ಸಂತ ಗಾಂಧೀಜಿ

ಸ್ಲಂ ಜನಾಂದೋಲನ, ಸಾವಿತ್ರಿ ಬಾಪುಲೆ ಸಂಘಟನೆ ಕಾರ್ಯಕ್ರಮದಲ್ಲಿ ನ್ಯಾಯವಾದಿ ಎಲ್.ಹೆಚ್. ಅರುಣ್ 

ದಾವಣಗೆರೆ, ಅ.4- ಸ್ಲಂ ಜನಾಂದೋಲನ ಕರ್ನಾಟಕ, ಸಾವಿತ್ರಿ ಬಾಪುಲೆ ಮಹಿಳಾ ಸಂಘಟನೆ ಜಿಲ್ಲಾ ಸಮಿತಿ ವತಿಯಿಂದ  ಮಹಾತ್ಮ ಗಾಂಧೀಜಿ ಜನ್ಮ ದಿನಾಚರಣೆ ಹಾಗೂ ಸ್ಲಂ ನಿವಾಸಿಗಳಿಗೆ ಮಾಸ್ಕ್, ಸ್ಯಾನಿಟೈಜರ್ ವಿತರಣಾ ಕಾರ್ಯಕ್ರಮ ವನ್ನು ನಗರದ ಬಂಬೂ ಬಜಾರ್ ರಸ್ತೆಯಲ್ಲಿರುವ ಲಿಟ್ಲ್ ಫೇರೀಸ್ ಸ್ಕೂಲ್ ಆವರಣದಲ್ಲಿ ಆಯೋಜಿಸಲಾಗಿತ್ತು. 

ಕಾರ್ಯಕ್ರಮವನ್ನು ಉದ್ಘಾಟಿಸಿದ ರಾಜ್ಯ ಕಾನೂನು ಸೇವಾ ಪ್ರಾಧಿಕಾರದ ಸದಸ್ಯರೂ ಆದ ನ್ಯಾಯವಾದಿ ಎಲ್.ಹೆಚ್. ಅರುಣ್ ಕುಮಾರ್ ಮಾತನಾಡಿ, ಭಾರತೀಯರಿಗೆ ಅಹಿಂಸೆ ಮತ್ತು ಸತ್ಯಾಗ್ರಹ ಎಂಬ ಎರಡು ಪ್ರಬಲ ಅಸ್ತ್ರಗಳನ್ನು ನೀಡಿ, ಸ್ವತಂತ್ರ ತಂದುಕೊಟ್ಟ ಮಹಾನ್ ಸಂತ ಗಾಂಧೀಜಿ. ಗಾಂಧೀಜಿ ಬದುಕು ಜಗತ್ತಿನೆದುರು ತೆರೆದ ಪುಸ್ತಕದಂತಿದೆ. ರಾಜಕೀಯಕ್ಕೆ ಹೊಸ ಸ್ವರೂಪವನ್ನು ತಂದುಕೊಟ್ಟ ಬಹುದೊಡ್ಡ ಶಕ್ತಿ ಗಾಂಧೀಜಿ. ಸ್ವಾತಂತ್ರ್ಯೋತ್ತರ ಭಾರತದಲ್ಲಿ ಅದರಲ್ಲೂ 21ನೇ ಶತಮಾನದ ಯುವ ಮನಸ್ಸುಗಳಿಗೆ ಗಾಂಧೀಜಿ ಪರಿಚಯವಾಗಬೇಕು. ಏಕೆಂದರೆ ಸ್ವಾತಂತ್ರ್ಯ ಹೋರಾಟದ ಎಲ್ಲ ಮಗ್ಗಲು ಗಳನ್ನು ಅರಿತುಕೊಂಡಾಗ ಬಹುತ್ವ ಭಾರತದ ವರ್ತಮಾನದ ರಾಜಕೀಯ ಸನ್ನಿವೇಶವನ್ನು ಅರ್ಥ ಮಾಡಿಕೊಳ್ಳಲು ಸಾಧ್ಯವಾಗುತ್ತದೆ ಎಂದು ಪ್ರತಿಪಾದಿಸಿದರು. 

ಗಾಂಧೀಜಿಯವರು ತಮ್ಮ ಬದ್ಧತೆಯಿಂದ ಲಕ್ಷಾಂತರ ಜನರನ್ನು ಹುರಿದುಂಬಿಸಿ, ಪರ್ವತದಂತಿದ್ದ ಬ್ರಿಟೀಷ್ ಸಾಮ್ರಾಜ್ಯವನ್ನು ಅಲುಗಾಡಿಸಿ, ಸ್ವಾತಂತ್ರ್ಯವನ್ನು ತಂದುಕೊಟ್ಟರು ಎಂದು ಅವರು ಗಾಂಧಿಯವರನ್ನು ಸ್ಮರಿಸಿದರು.  

ಅಧ್ಯಕ್ಷತೆ ವಹಿಸಿದ್ದ ಸ್ಲಂ ಜನಾಂದೋಲನ ಕರ್ನಾಟಕದ ಪ್ರಧಾನ ಕಾರ್ಯದರ್ಶಿ ರೇಣುಕ ಯಲ್ಲಮ್ಮ ಮಾತನಾಡಿ, ಸರ್ವ ಜನಾಂಗದ ಶಾಂತಿಯ ತೋಟವಾಗಿ ಭಾರತವನ್ನು ಕಾಣುವ,  ಕಟ್ಟುವ ಕ್ರಿಯಾಶೀಲ ಗುರಿಯನ್ನು ಮಹಾತ್ಮ ಗಾಂಧೀಜಿ ಹೊಂದಿದ್ದರು ಎಂದರು.

ಈ ಸಂದರ್ಭದಲ್ಲಿ ಲಿಟಲ್ ಫೇರೀಸ್ ಸ್ಕೂಲ್‍ನ ಮುಖ್ಯ ಶಿಕ್ಷಕ ಮಹ್ಮದ್ ಇರ್ಫಾನ್, ಸ್ಲಂ ಜನಾಂದೋಲನ ಕರ್ನಾಟಕದ ಜಿಲ್ಲಾಧ್ಯಕ್ಷ ಎಂ. ಶಬ್ಬೀರ್ ಸಾಬ್, ಕಾರ್ಯದರ್ಶಿ ಹೆಚ್. ಬಸವರಾಜ್, ಸಾವಿತ್ರಿ ಬಾಪುಲೆ ಮಹಿಳಾ ಸಂಘಟನಾ ಅಧ್ಯಕ್ಷರಾದ ಶ್ರೀಮತಿ ಸಾವಿತ್ರಮ್ಮ,  ಕಾರ್ಯದರ್ಶಿ ಶ್ರೀಮತಿ ಶಾಹಿನಾ ಬೇಗಂ, ಸಹ ಕಾರ್ಯದರ್ಶಿ ಶ್ರೀಮತಿ ಶಾಂತಮ್ಮ, ಸಂಘಟನಾ ಕಾರ್ಯದರ್ಶಿಗಳಾದ ಸೈಯದ್ ಸುಹೀಲ್ ಬಾಷಾ,  ಬಾಲಪ್ಪ ಮತ್ತಿತರರು ಉಪಸ್ಥಿತರಿದ್ದರು. 

Leave a Reply

Your email address will not be published.