ಅಂಡದೊಳಗೆ ಬ್ರಹ್ಮಾಂಡ..!

ಅಂಡದೊಳಗೆ ಬ್ರಹ್ಮಾಂಡ..!

ಅಂಡದೊಳಗೆ ಬ್ರಹ್ಮಾಂಡ
ಅರಿವಿಗೆ ದೇವರ ಪ್ರಕಾಂಡ!
ಆದರಿದೇಕೋ ಪ್ರಪಂಚವೆಲ್ಲ
ದೇವರಿತ್ತ ರೂಪ ಮರೆತು
ಮಾಡಲಿತ್ತ ಪಾತ್ರ ತೊರೆದು
ಎತ್ತ ಸಾಗಿದೆ ಗುರುವೆ
ಅರಿವಿತ್ತು ಕರುಣಿಸು
ಚಿತ್ತಕೊಂದು ಸರಿ ಪಥವನು
ಧಾರುಣಿಯ ಉಳಿಸು!
ಮನುಜನಿವನು ಹಿರಿಯನು
ವಿಜ್ಞಾನದಿಂದ ಬಂದು
ಅಜ್ಞಾನವಾಗುತಿಹನು
ಸಣ್ಣವನು ಅತಿ ಸಣ್ಣವನು!
ಮನುಜಪರಿಯ ಮರೆತು
ಮಲಗಿ ಆಡುತಿಹನು ಅನರ್ಥವನು :
ಮಾಡುತಿಹನು ಸ್ವಾರ್ಥವನು
ಓಡುತಿಹನು ಅಣುಬಾಂಬಿನಂತೆ
ಸಿಡಿಯಲೆಂದೇ ಸಾಯಲು!
ಬೇಯಲೆಂದೇ ಮೋಡಿಯೊಳು
ಮೊರೆಗೆ ಹೊಕ್ಕು
ಜೇಡರ ಹುಳುವಾಗುತಿಹನು!
ಹಾರುವಂತ ಕನಸು ತೊರೆದು
ಮುಗಿಲಾಗದೆ ನೆಲದ ಕೀಟವಾಗಿ ಕೊಳೆಯುತಿಹನು
ಹಣೆಬರಹದ ಹೆಸರ ಬಳಸಿ
ತನ್ನ ಗುಂಡಿ ತಾನೆ ತೋಡುತಿಹನು
ಮಾಯೆಯೊಂದು ಹೀಗೆ ಬಂತೇ !?
ತನ್ನ ತಾನೆ ಮರೆಸಿ ನಿಂತೇ
ಅರ್ಥವಿರದ ವ್ಯರ್ಥಕೆ
ಎಲ್ಲ ಬದುಕ ದೂಡುತಿಹುದು
ಮನುಜ ಬಿಡದೆ ಮಾಯೆ ಬಿಡದು
ಅರಿವಿಗೊಂದು ಹೊಳಹು ಬೇಕು
ರೋಗ ರುಜಿನ ಬರಿ ಬಾಹ್ಯವಲ್ಲ
ಮನದ ಮಲಿನ ಬಹಳ ಕೊಳಕು!
ಅಂತರಂಗ ಅವಲೋಕನವದು
ಯಾನವಾಗಿ ತುಂಬಬೇಕು
ಯುಗದ ಜಗವು ಅನಂತದ
ಯೋಗ ಭಾವವಾಗಬೇಕು
ಅಂಡದಲ್ಲಿ ಬ್ರಹ್ಮಾಂಡವೆನಿಸಬೇಕು!?


ಶ್ರೀಮತಿ ಎ.ಸಿ.ಶಶಿಕಲಾ ಶಂಕರಮೂರ್ತಿ
ಶಿಕ್ಷಕಿ, ಸಾಹಿತಿ
ಸರ್ಕಾರಿ ಪ್ರೌಢಶಾಲೆ, ಹೂವಿನಮಡು . ದಾವಣಗೆರೆ.
shashikalaac123@gmail.com