ಕೋವಿಡ್ : ವದಂತಿಗಳಿಗೆ ಕಿವಿಗೊಡದೇ ಜಾಗೃತೆ ವಹಿಸಿ

ಕೋವಿಡ್ : ವದಂತಿಗಳಿಗೆ ಕಿವಿಗೊಡದೇ ಜಾಗೃತೆ ವಹಿಸಿ

ಜಗಳೂರು, ಸೆ.24- ಸಾರ್ವಜನಿಕರು ಕೊರೊನಾ ಬಗ್ಗೆ  ವಿನಾಕಾರಣ ವದಂತಿಗಳಿಗೆ ಕಿವಿಗೊಡದೆ, ಪ್ರತಿಯೊಬ್ಬರೂ ಜಾಗೃತರಾಗಿ ತಪಾಸಣೆಗೆ ಮುಂದಾಗಿ ಗುಣಮುಖರಾಗಿರಿ ಎಂದು ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಹೇಳಿದರು.

ಪಟ್ಟಣದ ಸರ್ಕಾರಿ ಆಸ್ಪತ್ರೆಗೆ ಭೇಟಿ ನೀಡಿ, ಮೂಲ ಭೂತ ಸೌಕರ್ಯಗಳನ್ನು ಪರಿಶೀಲಿಸಿ ನಂತರ ತಮ್ಮನ್ನು ಭೇಟಿಯಾದ ಸುದ್ದಿಗಾರರೊಂದಿಗೆ ಮಾತನಾಡಿದರು.

ಕೋವಿಡ್ ರೋಗಿಗಳಿಂದ ಸರ್ಕಾರಕ್ಕೆ ಆದಾಯ ಎಂಬ ಸಾಕಷ್ಟು ವದಂತಿಗಳು ಹಬ್ಬಿದ್ದು, ಅವೆಲ್ಲಾ ಸುಳ್ಳು. ಪ್ರತಿಯೊಬ್ಬರಿಗೂ ಕೊರೊನಾ ಸೋಂಕು ತಗುಲದಂತೆ ಜಾಗೃತಿ ಮೂಡಿಸುವುದು ನಮ್ಮ ಸೇವೆ. ಇದು ಮುಖ್ಯ ಕಾರ್ಯದರ್ಶಿಗಳ ನಿರ್ದೇಶನವಾಗಿದೆ ಎಂದು ಸ್ಪಷ್ಟನೆ ನೀಡಿದರು. ವೈದ್ಯರುಗಳು ಎಚ್ಚರದಿಂದ ಕರ್ತವ್ಯ ನಿರ್ವಹಿಸಬೇಕು. ಕೋವಿಡ್ ರೋಗಿಗಳ ಬಗ್ಗೆ ಹೆಚ್ಚು ಗನಹರಿಸಿ ಎಂದು ಸೂಚನೆ ನೀಡಿದರು.

ಆಸ್ಪತ್ರೆಯ ಎಡಭಾಗದಲ್ಲಿ ಕೋವಿಡ್ ವಾರ್ಡ್‌ಗೆ ಪ್ರತ್ಯೇಕವಾಗಿ ನಿರ್ಮಾಣಗೊಳ್ಳುತ್ತಿರುವ  ರಾಂಪ್ ಕಾಮಗಾರಿ ಇನ್ನೂ 3 ದಿನದೊಳಗೆ ಪೂರ್ಣಗೊಳ್ಳಬೇಕು. ಕೋವಿಡ್ ರೋಗಿಗಳಿಗೆ ಯಾವುದೇ ತೊಂದರೆಯಾಗದಂತೆ ಮೇಲ್ಬಾಗದಲ್ಲಿ ಪ್ರತ್ಯೇಕ ವಾರ್ಡ್‌ಗಳಲ್ಲಿ ವ್ಯವಸ್ಥೆ ಕಲ್ಪಿಸಿ, ಇತರೆ ರೋಗಿಗಳನ್ನು ಕೆಳಭಾಗದಲ್ಲಿರಿಸಿ ಚಿಕಿತ್ಸೆ ನೀಡಬೇಕು.

ಅಂಬ್ಯುಲೆನ್ಸ್ ಕೊರತೆಯಿಂದ ಎಲ್ಲಾ ರೀತಿಯ ರೋಗಿಗಳಿಗೂ ಒಂದೇ ಅಂಬ್ಯುಲೆನ್ಸ್ ಬಳಕೆ ಮಾಡುತ್ತಿರುವುದು ಗಮನಕ್ಕೆ ಬಂದಿದ್ದು, ಕೂಡಲೇ ಬಗೆಹರಿಸಲಾಗುವುದು ಎಂದು ತಿಳಿಸಿದರು.

ಪ.ಪಂ.ಜೆಸಿಬಿ ದುರಸ್ತಿಯಲ್ಲಿದ್ದು, ಕೋವಿಡ್ ರೋಗಿಗಳ ಶವಸಂಸ್ಕಾರಕ್ಕೆ ತೊಂದರೆಯಾಗುತ್ತಿದೆ ಎಂಬ ದೂರಿನ ಬಗ್ಗೆ ತಕ್ಷಣವೇ ಜೆಸಿಬಿ ರಿಪೇರಿ ಮಾಡಿಸಲು ಮುಖ್ಯಾಧಿಕಾರಿ ರಾಜು ಬಣಕಾರ್ ಅವರಿಗೆ ಜಿಲ್ಲಾಧಿಕಾರಿಗಳು ಸೂಚನೆ ನೀಡಿದರು.

ಫೈನಾನ್ಸ್‌ಗಳ ಮೇಲೆ ನಿಗಾವಹಿಸಿ : ಗ್ರಾಮೀಣ ಭಾಗದಲ್ಲಿ ಯಾವುದೇ ಕೊರೊನಾ ಬಗ್ಗೆ ಮುಂಜಾಗ್ರತಾ ಕ್ರಮಗಳಾದ ಸಾನಿಟೈಸರ್, ಮಾಸ್ಕ್ ಸಾಮಾಜಿಕ ಅಂತರವಿಲ್ಲದೇ ಸಾಲ ವಸೂಲಾತಿಗೆ ಹೋಗುತ್ತಿರುವ ಮಾಹಿತಿ ಬಂದಿದ್ದು, ಕೂಡಲೇ ತಹಶೀಲ್ದಾರ್ ಹಾಗೂ ಡಿವೈಎಸ್ಪಿ ಅವರು ಫೈನಾನ್ಸ್ ಸಂಸ್ಥೆಗಳ ಮುಖ್ಯಸ್ಥರ  ಜೊತೆ ಸಭೆ ನಡೆಸಿ, ಎಚ್ಚರಿಕೆ ನೀಡಿರಿ ಎಂದು ಸೂಚಿಸಿದರು.

ಈ ಸಂದರ್ಭದಲ್ಲಿ ತಹಶೀಲ್ದಾರ್ ಡಾ.ನಾಗವೇಣಿ, ಪ.ಪಂ ಮುಖ್ಯಾಧಿಕಾರಿ ರಾಜು ಡಿ.ಬಣಕಾರ್, ಕಂದಾಯ ನಿರೀಕ್ಷಕ ಕುಬೇಂದ್ರನಾಯ್ಕ, ಡಾ.ಸಂಜಯ್, ಹಿರಿಯ ಶುಶ್ರೂಷಕಿ ಮೀನಾಕ್ಷಮ್ಮ, ಮಹಾದೇವಮ್ಮ, ಕಿರಿಯ ಆರೋಗ್ಯ ಸಹಾಯಕ ಪಿ.ಎಂ.ರುದ್ರೇಶ್ ಉಪಸ್ಥಿತರಿದ್ದರು.

Leave a Reply

Your email address will not be published.