ಕೇಂದ್ರ ಸರ್ಕಾರ ಬದಲಾವಣೆ ತರುವ ಕಾಯ್ದೆಯಿಂದ ರೈತರು ಬಹುರಾಷ್ಟ್ರೀಯ ಕಂಪನಿಯ ಗುಲಾಮರಾಗಲಿದ್ದಾರೆ

ಕೇಂದ್ರ ಸರ್ಕಾರ ಬದಲಾವಣೆ ತರುವ ಕಾಯ್ದೆಯಿಂದ  ರೈತರು ಬಹುರಾಷ್ಟ್ರೀಯ ಕಂಪನಿಯ ಗುಲಾಮರಾಗಲಿದ್ದಾರೆ

ಹರಿಹರ, ಸೆ.21-  ಕೇಂದ್ರ ಸರ್ಕಾರ ಸುಗ್ರೀವಾಜ್ಞೆ ಮೂಲಕ ಭೂ ಸುಧಾರಣೆ ಕಾಯ್ದೆ ಬದಲಾವಣೆ ತರುವಂತಹ ಕೆಲಸಕ್ಕೆ ಕೈಹಾಕಿರುವುದು ಅತ್ಯಂತ ಅಸಂವಿಧಾನಿಕ ಪದ್ಧತಿಯಾಗಿದ್ದು, ಇದರಿಂದ ರೈತರು ಬಹುರಾಷ್ಟ್ರೀಯ ಕಂಪನಿಯ ಗುಲಾಮರಾಗಲಿದ್ದಾರೆ ಎಂದು ರಾಜ್ಯ ಕಬ್ಬು ಬೆಳೆಗಾರರ ಸಂಘದ ಉಪಾಧ್ಯಕ್ಷ ತೇಜಸ್ವಿ ಪಟೇಲ್ ಆಕ್ರೋಶ ವ್ಯಕ್ತಪಡಿಸಿದರು.

ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ತಾಲ್ಲೂಕು ಸಮಿತಿ ವತಿಯಿಂದ ಸರ್ಕಾರದ ಭೂ ಸುಧಾರಣಾ ಕಾಯ್ದೆಯ ವಿರುದ್ಧ ಪ್ರತಿಭಟನೆ ಮತ್ತು ಭೂ ದಾಖಲೆಗಳ ಸಹಾಯಕ ನಿರ್ದೇಶಕರ ವಿರುದ್ಧ ತಹಶೀಲ್ದಾರ್ ಕೆ.ಬಿ. ರಾಮಚಂದ್ರಪ್ಪನವರಿಗೆ ಮನವಿ ಸಲ್ಲಿಸಿ ಮಾತನಾಡಿದರು.

ನಿರಂತರವಾಗಿ ಹೋರಾಟ ನಡೆಸುತ್ತಿ ರುವ ರೈತರ ಸಂಘಗಳ ಜೊತೆಯಾಗಲೀ ಅಥವಾ ರೈತ ಮುಖಂಡರ ಜೊತೆಯಾಗಲೀ ಯಾವುದೇ ರೀತಿಯ ಚರ್ಚೆ ನಡೆಸದೆ ಸುಗ್ರೀವಾಜ್ಞೆ ಮೂಲಕ ಕಾನೂನಿಗೆ ಬದಲಾವಣೆ ತರುವಂತಹ ಕೆಲಸಕ್ಕೆ ಕೈ ಹಾಕಿರುವುದು ಅತ್ಯಂತ ಅಸಂವಿಧಾನಿಕ ಪದ್ಧತಿಯಾಗಿದೆ ಮತ್ತು ರೈತರ ವ್ಯವಸಾಯ ಭೂಮಿಯನ್ನು ಅವರಿಂದ ಕಿತ್ತುಕೊಂಡು ಬಹುರಾಷ್ಟ್ರೀಯ ಕಂಪನಿಗಳ ಕಾಲಬುಡಕ್ಕೆ ಇಟ್ಟು ರೈತರನ್ನು ಗುಲಾಮರನ್ನಾಗಿಸುವ ಹುನ್ನಾರವನ್ನು ಕಾಯ್ದೆಯಲ್ಲಿ ತರಲಾಗಿದೆ ಎಂದು ಖೇದ ವ್ಯಕ್ತಪಡಿಸಿದರು.

ಇದ್ದರಂತೆ ನೂತನ ಎಪಿಎಂಸಿ ಕಾಯ್ದೆಯನ್ನೂ ಸಹ ರಾಜ್ಯ ಸರ್ಕಾರ ಜಾರಿಗೊಳಿಸಿದ್ದು, ಇದರಿಂದ ರೈತರು ತಾವು ಬೆಳೆದ ಬೆಳೆಗಳಿಗೆ ವೈಜ್ಞಾನಿಕ ಬೆಲೆ ಸಿಗದೆ ಕೆಲವೇ ಬಂಡವಾಳ ಶಾಹಿಗಳು ನಿಗದಿ ಪಡಿಸಿದ ಬೆಲೆಗಳಿಗೆ ಬೆಳೆಗಳನ್ನು ಮಾರಬೇಕಾದ ಅನಿವಾರ್ಯತೆ ಮುಂದೆ ಬರಲಿದೆ ಎಂದು ಭವಿಷ್ಯ ನುಡಿದ ಅವರು, ಇದರಿಂದ ರೈತನು ಸುಖವಾಗಿರದೇ ನೇಣುಹಾಕಿಕೊಳ್ಳುವ ಪರಿಸ್ಥಿತಿ ಉದ್ಭವವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾಧ್ಯಕ್ಷ ಜಿ. ಪ್ರಭುಗೌಡ್ರು ಕಡರನಾಯಕನಹಳ್ಳಿ ಮಾತನಾಡಿ, ಸರ್ವೇ ಇಲಾಖೆಯ ಎ.ಡಿ.ಎಲ್.ಆರ್. ಕಸ್ತೂರಿಯವರು ರೈತರಿಗೆ ತೊಂದರೆ ನೀಡುತ್ತಾ ಅವರು ತಮಗೆ ಮನಬಂದಂತೆ ವರ್ತಿಸುತ್ತಾರೆ ಹಾಗೂ ರೈತರಿಗೆ ಸ್ಪಂದಿಸದೇ ರೈತರ ಮೇಲೆ ದಬ್ಬಾಳಿಕೆ ಮಾಡುತ್ತಾರೆ ಮತ್ತು ಕಚೇರಿಗೆ ಅಲೆದಾಡಿಸುತ್ತಾರೆ. ಆದ್ದರಿಂದ ಅವರನ್ನು ಬೇರೆ ಕಡೆ ವರ್ಗಾವಣೆ ಮಾಡಿ ಬೇರೆ ಎ.ಡಿ.ಎಲ್.ಆರ್‌ ಅಧಿಕಾರಿಗಳನ್ನು ನೇಮಿಸಬೇಕೆಂದು ಹೇಳಿದರು.

ಅಲ್ಲದೇ ಸರ್ಕಾರದ ಪೋಡಿ ಮುಕ್ತ ಅಭಿಯಾನದಲ್ಲಿ ಅಳತೆಗೆ ಆಯ್ಕೆಗೊಂಡಿರುವ ಗ್ರಾಮಗಳ ಪೋಡಿ ಅಳತೆ ಸರಿಯಾಗಿ ಮಾಡದೇ ಇರುವ ಬಗ್ಗೆ ತಾಲ್ಲೂಕಿನ ಭೂ ದಾಖಲೆಗಳ ಸಹಾಯಕ ನಿರ್ದೇಶಕರನ್ನು ಸ್ಥಳಕ್ಕೆ ಕರೆಸಬೇಕೆಂದು ಪ್ರತಿಭಟನಾಕಾರರು ತಹಸಿಲ್ದಾರರನ್ನು ಒತ್ತಾಯಿಸಿದಾಗ ಕೆ.ಬಿ. ರಾಮಚಂದ್ರಪ್ಪ ಪ್ರತಿಕ್ರಿಯಿಸಿ, ಅವರು ಗ್ರಾಮ ಸಭೆಯೊಂದರಲ್ಲಿ ಭಾಗಿಯಾಗಿದ್ದಾರೆ. ಎರಡು ದಿನಗಳು ಬಿಟ್ಟು ಅವರನ್ನು ಕರೆಸುತ್ತೇನೆ. ಆಗ ನಿಮ್ಮ ಬೇಡಿಕೆಯನ್ನು ಸರಿಪಡಿಸಲಾಗುವುದು ಎಂದು ಭರವಸೆ ನೀಡಿದ ಹಿನ್ನೆಲೆಯಲ್ಲಿ ಮುಖಂಡರು ಒಪ್ಪಿಗೆ ಸೂಚಿಸಿದರು.

ಈ ಸಮಯದಲ್ಲಿ ಜಿಲ್ಲಾ ಅಧ್ಯಕ್ಷ ಪ್ರಭುಗೌಡ, ಎಂ.ಬಸಪ್ಪ, ಪಾಮೇನಹಳ್ಳಿ ಮಾರುತಿರಾವ್, ಗರಡಿಮನೆ ಬಸಣ್ಣ ಗುತ್ತೂರು, ಕುಣೆಬೆಳಕೆರೆ ಉಮೇಶ್, ಸಿರಿಗೆರೆ ಪಾಲಾಕ್ಷಪ್ಪ, ಕಮಲಾಪುರ ಕರಿಬಸಮ್ಮ, ಎಂ.ಬಿ.ಪಾಟೀಲ್ ಹೊಸಪಾಳ್ಯ, ಮಹೇಶ್ ದೊಗ್ಗಳ್ಳಿ, ಗೋವಿನಹಾಳು ಗದಿಗೆಪ್ಪ, ಕಡ್ಲೆಗೊಂದಿ ಬಸಪ್ಪ ರೆಡ್ಡಿ, ನಂದಿಗಾವಿ ಗದಿಗೆಪ್ಪ, ಎಂ.ಹೆಚ್.ಗೋವಿಂದರೆಡ್ಡಿ, ಲಕ್ಷ್ಮಣ, ಮಹೇಶ್ವರಸ್ವಾಮಿ, ಚಂದ್ರಪ್ಪ, ಭರಮಗೌಡ ಅಲ್ಲದೆ ತಾಲ್ಲೂಕಿನ ಅನೇಕ ರೈತ ಮುಖಂಡರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

Leave a Reply

Your email address will not be published.