ರಾಜ್ಯದಲ್ಲಿ ಮತ್ತೆ ಮಳೆ ಹೊಡೆತ

ರಾಜ್ಯದಲ್ಲಿ ಮತ್ತೆ ಮಳೆ ಹೊಡೆತ

ಬೆಂಗಳೂರು, ಸೆ. 20 – ರಾಜ್ಯದ ಹಲವು ಭಾಗಗಳಲ್ಲಿ ಸುರಿಯುತ್ತಿರುವ ಮಳೆ ವಿಕೋಪಕ್ಕೆ ಹೋಗಿದ್ದು, ಕರಾವಳಿ ಜಿಲ್ಲೆಯಾದ ಉಡುಪಿಯಲ್ಲಿ ವ್ಯಾಪಕ ಹಾನಿಯಾಗಿದೆ. ಜನರಿಗೆ ನೆರವಾಗಲು ವಿಕೋಪ ಸ್ಪಂದನಾ ದಳವನ್ನು ಬಳಸಿಕೊಳ್ಳಲಾಗಿದೆ.

ಮಲೆನಾಡು, ಕರಾವಳಿ ಹಾಗೂ ಒಳನಾಡು ಮತ್ತು ಉತ್ತರದ ಕೆಲ ಜಿಲ್ಲೆಗಳಲ್ಲಿ ಇನ್ನೆರಡು ದಿನ ಭಾರೀ ಮಳೆಯಾಗಲಿದೆ ಎಂದು ರಾಜ್ಯ ವಿಕೋಪ ಸ್ಪಂದನಾ ದಳ ತಿಳಿಸಿದೆ.

ಉತ್ತರ ಕರ್ನಾಟಕ, ಮಲೆನಾಡು ಹಾಗೂ ಕರಾವಳಿ ಪ್ರದೇಶಗಳು ಕಳೆದ ತಿಂಗಳು ಸುರಿದ ಭಾರೀ ಮಳೆ ಹಾಗೂ ಕೊರೊನಾದಿಂದ ಚೇತರಿಸಿಕೊಂಡಿಲ್ಲ. ಆ ನಡುವೆಯೇ ಇನ್ನೊಂದು ಸುತ್ತಿನ ಭಾರೀ ಮಳೆ ಎರಗಿದೆ.

ಉಡುಪಿಯಲ್ಲಿ ಪರಿಸ್ಥಿತಿ ಕಠಿಣವಾಗಿದ್ದು, ಕೆಲ ಹಳ್ಳಿಗಳು ಮುಳುಗಿವೆ, ಮನೆಗಳು ಕುಸಿದಿವೆ, ರಸ್ತೆಗಳು ಕೊಚ್ಚಿ ಹೋಗಿವೆ ಹಾಗೂ ಬೆಳೆ ಸಂಪೂರ್ಣ ನಾಶವಾಗಿದೆ ಎಂದು ವಿಕೋಪ ಸ್ಪಂದನಾ ದಳದ ಅಧಿಕಾರಿಯೊಬ್ಬರು ಹೇಳಿದ್ದಾರೆ.

ಉಡುಪಿ ಜಿಲ್ಲಾಡಳಿತ ತಕ್ಷಣವೇ ಪರಿಹಾರ ಕಾರ್ಯ ಕೈಗೊಳ್ಳಬೇಕು. ರಾಜ್ಯ ವಿಕೋಪ ಸ್ಪಂದನಾ ದಳದ 250 ಸಿಬ್ಬಂದಿಯ ತಂಡವನ್ನು ಜಿಲ್ಲೆಗೆ ರವಾನಿಸಬೇಕು ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

ಉಡುಪಿಯಲ್ಲಿ ಕಳೆದ ದಶಕಗಳಲ್ಲಿ ಕಂಡು ಕೇಳರಿಯದ ಪರಿಸ್ಥಿತಿ ಉಂಟಾಗಿದೆ. ರಸ್ತೆಗಳಲ್ಲಿ ವ್ಯಾಪಕವಾಗಿ ನೀರು ನಿಂತಿದ್ದು, ಕಾರು – ಬೈಕುಗಳು ನೀರಿನಲ್ಲಿ ಮುಳುಗಿವೆ.

ಉಡುಪಿಯ ಕೃಷ್ಣ ಮಠದ ಆವರಣದಲ್ಲೂ ನೀರು ನುಗ್ಗಿದೆ. ಉಡುಪಿಯ ಕಳ್ಸಂಕದಲ್ಲಿ ಇಂದ್ರಾಣಿ ನದಿ ಉಕ್ಕಿ ಹರಿಯುತ್ತಿದ್ದು, ಉಡುಪಿ – ಮಣಿಪಾಲ್ ಹೆದ್ದಾರಿಗೆ ನುಗ್ಗಿದೆ. ಉಡುಪಿ ನಗರದ ಬಡಗುಪೇಟೆಯ ಕೆಲ ಅಂಗಡಿ ಹಾಗೂ ಮನೆಗಳೂ ಜಲಾವೃತವಾಗಿವೆ.

ಉಡುಪಿಯ ಮಲ್ಪೆ, ಬೈರಂಪಲ್ಲಿ, ಕುಕ್ಕೆಹಳ್ಳಿ, ಬೈಲಕೆರೆ ಹಾಗೂ ಹೆರಂಜೆಗಳು ಜಲಾವೃತವಾಗಿವೆ. ಅತಂತ್ರರಾಗಿರುವ ಜನರನ್ನು ಸುರಕ್ಷಿತ ಸ್ಥಳಕ್ಕೆ ರವಾನಿಸಲು ಕ್ರಮ ತೆಗೆದುಕೊಳ್ಳಲಾಗುತ್ತಿದೆ.

ನೆರವು ಕಾರ್ಯಾಚರಣೆಗಾಗಿ ವಾಯುಪಡೆಯ ಹೆಲಿಕಾಪ್ಟರ್ ಒದಗಿಸುವಂತೆ ವಾಯು ಪಡೆಗೆ ಮನವಿ ಮಾಡಿಕೊಳ್ಳುವಂತೆ ಕಂದಾಯ ಸಚಿವ ಆರ್. ಅಶೋಕ್‌ಗೆ ಕೇಳುವುದಾಗಿ ಬೊಮ್ಮಾಯಿ ತಿಳಿಸಿದ್ದಾರೆ.

ನೆರವಿಗಾಗಿ ಹೆಲಿಕಾಪ್ಟರ್ ಅನ್ನು ಈಗಾಗಲೇ ಸಜ್ಜಾಗಿರಿಸಲಾಗಿದೆ ಎಂದು ರಾಜ್ಯ ವಿಕೋಪ ನಿರ್ವಹಣಾ ಪ್ರಾಧಿಕಾರ ತಿಳಿಸಿದೆ. ಉಡುಪಿಯಲ್ಲಿ ಇನ್ನೂ ಒಂದೆರಡು ದಿನಗಳ ಕಾಲ ಮಳೆಯ ರೆಡ್‌ ಅಲರ್ಟ್ ಘೋಷಿಸಿರುವುದು ಜನರನ್ನು ಮತ್ತಷ್ಟು ಆತಂಕಕ್ಕೆ ದೂಡಿದೆ.

ದಕ್ಷಿಣ ಕನ್ನಡ, ಉತ್ತರ ಕನ್ನಡ, ಕೊಡಗು, ಚಿಕ್ಕಮಗಳೂರು, ಶಿವಮೊಗ್ಗ ಹಾಗೂ ಹಾಸನಗಳಲ್ಲಿ ಕಳೆದ ಕೆಲ ದಿನಗಳಿಂದ ಧಾರಾಕಾರ ಮಳೆ ಸುರಿಯುತ್ತಿದೆ.

ಉತ್ತರ ಕರ್ನಾಟಕದ ವಿಜಯಪುರ, ರಾಯಚೂರು, ಕಲಬುರಗಿ ಹಾಗೂ ಬೀದರ್‌ಗಳಲ್ಲದೇ, ದಕ್ಷಿಣ ಕರ್ನಾಟಕ ಬೆಂಗಳೂರು, ಮೈಸೂರು ಹಾಗೂ ತುಮಕೂರುಗಳಲ್ಲೂ ಭಾರೀ ಮಳೆಯಾಗುತ್ತಿದೆ.

ಮುಂದಿನ ಕೆಲ ದಿನಗಳ ಕಾಲ ಬೀದರ್, ಕಲಬುರಗಿ, ರಾಯಚೂರು, ವಿಜಯಪುರ, ಯಾದಗಿರಿ, ಕೊಪ್ಪಳ, ಬೆಳಗಾವಿ, ಬಾಗಲಕೋಟೆ, ಗದಗ, ಧಾರವಾಡ, ಹಾವೇರಿ ಹಾಗೂ ಬಳ್ಳಾರಿ ಜಿಲ್ಲೆಗಳಲ್ಲಿ ಭಾರೀ ಮಳೆಯಾಗಲಿದೆ ಎಂದು ತಿಳಿಸಲಾಗಿದೆ.

ಶಿವಮೊಗ್ಗ, ಚಿಕ್ಕಮಗಳೂರು, ಕೊಡಗು ಹಾಗೂ ಹಾಸನ ಜಿಲ್ಲೆಗಳ ಕೆಲವೆಡೆ  ಅತಿ ಭಾರೀ ಮಳೆಯಾಗಲಿದೆ ಎಂದು ತಿಳಿಸಲಾಗಿದೆ.

ಕರಾವಳಿ ಜಿಲ್ಲೆಗಳಾದ ಉಡುಪಿ, ದಕ್ಷಿಣ ಕನ್ನಡ ಹಾಗೂ ಉತ್ತರ ಕನ್ನಡ ಜಿಲ್ಲೆಗಳಿಗೂ ಭಾರೀ ಮಳೆಯ ಮುನ್ನೆಚ್ಚರಿಕೆ ನೀಡಲಾಗಿದೆ

Leave a Reply

Your email address will not be published.