28 ವರ್ಷಗಳಿಂದ ಹುತಾತ್ಮ ರೈತರ ಸ್ಮರಿಸುತ್ತಾ ನೆನಪು ಹಸಿರಾಗಿಸಿದ ಪುಟ್ಟಸ್ವಾಮಿ

ಹುತಾತ್ಮ ರೈತ ಭವನದ ಜಾಗ ಮಂಜೂರಿಗೆ ಸ್ಪಂದಿಸಿದ ಜಿಎಂಎಸ್, ಎಸ್ ಎಆರ್, ಡಿಸಿಗೆ ಧನ್ಯವಾದ

ದಾವಣಗೆರೆ, ಸೆ.15- ರೈತ ಹುತಾತ್ಮರ ಸ್ಮರಣಾರ್ಥ ಸಮಿತಿ ಅಧ್ಯಕ್ಷ ಎನ್.ಜಿ. ಪುಟ್ಟಸ್ವಾಮಿಯವರು ಸ್ವ ಇಚ್ಚೆಯಿಂದ ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೆ ತಮ್ಮ ಮನೆಯ ಕಾರ್ಯಕ್ರಮದಂತೆ ಕಳೆದ 28 ವರ್ಷಗಳಿಂದಲೂ ಪ್ರತಿ ವರ್ಷವೂ ತಪ್ಪದೇ ಹುತಾತ್ಮ ರೈತರ ಸ್ಮರಣೋತ್ಸವ ಆಚರಿಸುತ್ತಾ ಅವರುಗಳ ನೆನಪನ್ನು ಹಸಿರಾಗಿಸಿದ್ದಾರೆ.

ಈ ವರ್ಷವೂ ಸಹ ತಾಲ್ಲೂಕಿನ ಆನಗೋಡು ಬಳಿಯ ಉಳುಪಿನ ಕಟ್ಟೆಯ ಕ್ರಾಸ್ ನಲ್ಲಿ ಕಳೆದ ಭಾನುವಾರ ಹುತಾತ್ಮ ರೈತರ ದಿನಾಚರಣೆ ಮತ್ತು ಸಮಾಧಿ ಸ್ಥಳಾಂತರ ಕಾರ್ಯಕ್ರಮದ ಮೂಲಕ ಹುತಾತ್ಮ ರೈತರಾದ ಕಲ್ಲಿಂಗಪ್ಪ ಮತ್ತು ನಾಗರಾಜ ಚಾರ್ ಸ್ಮರಣೆ ಮಾಡಲಾಯಿತು.

ಎನ್.ಜಿ. ಪುಟ್ಟಸ್ವಾಮಿ ಅವರು ತಮ್ಮ ತಂದೆ-ತಾಯಿ ಅವರುಗಳ ಸಮಾಧಿ ಕಟ್ಟಿಸುವುದಕ್ಕಿಂತ ಮುಖ್ಯವಾಗಿ ಯಾವುದೇ ಸರ್ಕಾರದ ಅನುದಾನ, ಸಾರ್ವಜನಿಕವಾಗಿ ಆರ್ಥಿಕ ನೆರವು, ರೈತರಿಂದಲೂ ಹಣ ಸಂಗ್ರಹಿಸದೇ ತಮ್ಮ ಸ್ವಂತ ಖರ್ಚಿನಿಂದ ಮುಖ್ಯ ರುವಾರಿಗಳಾಗಿ ಹುತಾತ್ಮ ರೈತರ ಸ್ಮರಣೆಯ ಸೇವೆಗೆ ಮುಂದಾಗಿದ್ದು ಇವರ ಮಕ್ಕಳು, ಅಣ್ಣಂದಿರು, ಸಹೋದರರು, ಮೊಮ್ಮಕ್ಕಳಾದಿಯಾಗಿ ಬೆಂಬಲವಾಗಿ ನಿಂತಿದ್ದು, ಇದಕ್ಕೆ ತಾಲ್ಲೂಕಿನ ರೈತರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

ಧನ್ಯವಾದ ಅರ್ಪಿಸಿದ ಪುಟ್ಟಸ್ವಾಮಿ : ರೈತ ಹುತಾತ್ಮರ ಭವನದ ಜಾಗ ಗುರುತಿಸುವಿಕೆಗೆ ಸಮಿತಿ ಗೌರವ ಅಧ್ಯಕ್ಷ ಆನಗೋಡು ನಂಜುಂಡಪ್ಪ ರೂವಾರಿಯಾಗಿದ್ದಾರೆ. ಈ ಭವನಕ್ಕಾಗಿ ಮೊದಲು ಕೇವಲ 10 ಗುಂಟೆ ಜಾಗ ನೀಡಲಾಗಿತ್ತು. ಸಮಿತಿ‌ ಮನವಿಗೆ ಸ್ಪಂದಿಸಿದ ಸಂಸದ ಜಿ.ಎಂ. ಸಿದ್ದೇಶ್ವರ ಮತ್ತು ಶಾಸಕ ಎಸ್.ಎ. ರವೀಂದ್ರನಾಥ್ ಅವರುಗಳು 37 ಗುಂಟೆ ಜಾಗ ಮಂಜೂರಿಗೆ ಸೂಚನೆ ನೀಡಿದರು. ಜಿಲ್ಲಾಧಿಕಾರಿಗಳು ತತ್ ಕ್ಷಣವೇ ಸಮ್ಮತಿಸಿದರು ಎಂದು   ಪುಟ್ಟಸ್ವಾಮಿ ಅವರು ಕೃತಜತಾ ಭಾವ ವ್ಯಕ್ತಪಡಿಸಿದ್ದಲ್ಲದೇ, ಇವರುಗಳಿಗೆ ಹಾಗೂ ಸರ್ಕಾರ ಸೇರಿದಂತೆ ತಾಲ್ಲೂಕಿನ ಎಸಿ, ತಹಸೀಲ್ದಾರ್, ಆನಗೋಡಿನ ಕಂದಾಯ ಇಲಾಖೆಯ ಹೆಚ್ಚಿನ ಸಹಕಾರಕ್ಕೆ ಧನ್ಯವಾದ ಅರ್ಪಿಸಿದ್ದಾರೆ.

ಹುತಾತ್ಮರ ಭವನ ನಿರ್ಮಾಣದ ಜವಾಬ್ದಾರಿ ಹೊತ್ತಿರುವ ಜಿಲ್ಲಾಧಿಕಾರಿಗಳು ಕೂಡಲೇ ನಿರ್ಮಿಸಿ ಕೊಡಬೇಕೆಂದು ಅವರು ವಿನಂತಿಸಿದ್ದಾರೆ.

ಮಾದರಿ ಭವನ ನಿರ್ಮಾಣದ ಆಕಾಂಕ್ಷೆ: ರೈತ ಮುಖಂಡರಾದ ಆವರಗೆರೆ ರುದ್ರಮುನಿ, ಹೊನ್ನೂರು ಮುನಿಯಪ್ಪ, ಶಾಮನೂರು ಹೆಚ್.ಆರ್. ಲಿಂಗರಾಜ್ ಸೇರಿದಂತೆ ತಾಲ್ಲೂಕಿನ ರೈತರು, ಮುಖಂಡರು ಹುತಾತ್ಮ ರೈತರ ಸ್ಮರಣೆಯ ನನ್ನ ಸೇವೆಗೆ ಹೆಚ್ಚಿನ ಶಕ್ತಿ ತುಂಬಿದ್ದಾರೆ ಎಂದು ಹಿತ ನುಡಿದರು.

ರೈತ ಹುತಾತ್ಮರ ಭವನ ಶಾಂತಿ ಸಭೆ ಇದ್ದಂತೆ. ಹೆಚ್ಚಿನ ರೀತಿಯಾಗಿ ರೈತರ ಕಷ್ಟ – ಸುಖಗಳನ್ನು ಚರ್ಚಿಸಲು ಶಾಂತಿ ಸಭೆ ಮಾಡುವ ಉದ್ದೇಶವಿದೆ. ಸಮುದಾಯ ಭವನ, ಜಿಲ್ಲೆಯಲ್ಲಿ ಅಷ್ಟೇ ಅಲ್ಲದೇ ರಾಜ್ಯದಲ್ಲೇ ಮಾದರಿ ಭವನ ಆಗಬೇಕೆಂಬ ಆಕಾಂಕ್ಷೆ ಇದೆ. ರೈತ ಪರವಾದ ಒಳ್ಳೆಯ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು. ಬದುಕಿರುವವರೆಗೂ ಸಹ ಪ್ರತಿ ವರ್ಷ ಸೆ.13ರಂದು ಹುತಾತ್ಮ ರೈತರ ಶ್ರದ್ಧಾಂಜಲಿ ಸಭೆಯ ಖರ್ಚನ್ನು ನಾನೇ ಭರಿಸುತ್ತೇನೆ. ಮುಂದೆಯೂ ಸಹ ಪ್ರತಿ ವರ್ಷ 37 ಗುಂಟೆ ಜಾಗದಲ್ಲಿ ಅದ್ದೂರಿಯಾಗಿ ಸ್ಮರಣೆ ಮಾಡಲು ತಾಲ್ಲೂಕಿನ ರೈತರು, ಮುಖಂಡರು ಸ್ವ ಇಚ್ಛೆಯಿಂದ ನನ್ನೊಂದಿಗೆ ಬಲವಾಗಿ ನಿಲ್ಲಬೇಕೆಂದು ಆಶಿಸಿದರು.

ಸಮಿತಿಗೆ ಎಲ್ಲರೂ ಸಹ ಅಧ್ಯಕ್ಷರೇ. ಎಲ್ಲರೂ ಸಹ ಸೇವೆಗೆ ಸದಾ ಸಿದ್ದರಾಗಿರಬೇಕು. ಪುಟ್ಟಸ್ವಾಮಿ ಒಬ್ಬರದ್ದೇ ಸ್ವತ್ತಲ್ಲ. ಎಲ್ಲರಿಗೂ ಹಕ್ಕಿದೆ. ಎಲ್ಲರೂ ಅಧ್ಯಕ್ಷರಂತೆ ಎಂದಿದ್ದಾರೆ ಪುಟ್ಟಸ್ವಾಮಿ ಅವರು.

Leave a Reply

Your email address will not be published.