ಹಳೇಚಿಕ್ಕನಹಳ್ಳಿ ಸಂತ್ರಸ್ತರಿಗೆ ನಿವೇಶನ ಒದಗಿಸಲು ಡಿಸಿಎಂಗೆ ಮನವಿ

ದಾವಣಗೆರೆ, ಸೆ.15- ನಗರದ ಹಳೇಚಿಕ್ಕನಹಳ್ಳಿ ಸಂತ್ರಸ್ತರಿಗೆ ಮಂಜೂರಾಗಿರುವ ವಡ್ಡಿನಹಳ್ಳಿ ಸರ್ವೇ ನಂ. 43ರ 4 ಎಕರೆ ಜಮೀನಿನಲ್ಲಿ ನಿವೇಶನ ಹಂಚಿಕೆ ಮಾಡಿಕೊಡುವ ಕುರಿತು ಹಾಗೂ ನಗರದಲ್ಲಿ ನೆನೆಗುದಿಗೆ ಬಿದ್ದಿರುವ ಅಂಬೇಡ್ಕರ್ ಭವನದ ಕಾಮಗಾರಿಯನ್ನು ಕೂಡಲೇ ಆರಂಭಿಸುವಂತೆ  ಮೊನ್ನೆ ನಗರಕ್ಕಾಗಮಿಸಿದ್ದ ಉಪ ಮುಖ್ಯಮಂತ್ರಿ ಗೋವಿಂದ ಎಂ.ಕಾರಜೋಳ ಅವರಿಗೆ ದಲಿತ, ಶೋಷಿತ ಸಮಾಜ ಸಂಘರ್ಷ ಸಮಿತಿ ಮನವಿ ಸಲ್ಲಿಸಿದೆ.

2016 ರಲ್ಲಿಯೇ ಜಿಲ್ಲಾಧಿಕಾರಿಗಳು ಮೇಲ್ಕಂಡ ಜಮೀನನ್ನು ಮಂಜೂರು ಮಾಡಿದ್ದರೂ ಇದುವರೆಗೂ ನಿವೇಶನ ಹಂಚಿಕೆ ಮಾಡಿಲ್ಲ. ಜಮೀನನ್ನು ಬೇರೆ ಉದ್ದೇಶಗಳಿಗೆ ಬಳಸುವ ತಂತ್ರಗಾರಿಕೆಯನ್ನು ಜಿಲ್ಲಾಡಳಿತ ಮಾಡುತ್ತಿದೆ ಎಂಬ ಗುಮಾನಿಯೂ ಇದೆ. ಈ ಕುರಿತು ಜಿಲ್ಲಾಡಳಿತಕ್ಕೆ ಸಚಿವರು ನಿರ್ದೇಶನ ನೀಡಿ ನಿವೇಶನ ಹಂಚಿಕೆ ಮಾಡಿಕೊಡುವಂತೆ ಕೋರಿದ್ದಾರೆ.

ಕಳೆದ 8 ವರ್ಷಗಳಿಂದ ನಗರದಲ್ಲಿ ನಿವೇಶನ ಕಾರಣಕ್ಕಾಗಿ ನೆನೆಗುದಿಗೆ ಬಿದ್ದಿರುವ 5 ಕೋಟಿ ರೂ. ವೆಚ್ಚದ ಅಂಬೇಡ್ಕರ್ ಭವನದ ಕಾಮಗಾರಿಯನ್ನು ಕೂಡಲೇ ಆರಂಭಿಸಲು ಜಿಲ್ಲಾಡಳಿತಕ್ಕೆ ಸೂಚನೆ ನೀಡುವಂತೆ ಒತ್ತಾಯಿಸಲಾಗಿದೆ. 

ಜಿಲ್ಲಾಧ್ಯಕ್ಷ ಹೆಗ್ಗೆರೆ ರಂಗಪ್ಪ, ಕಾರ್ಯಾಧ್ಯಕ್ಷ ಸಂತೋಷ್ ಎಂ. ನೋಟದವರ, ಉಪಾಧ್ಯಕ್ಷರಾದ ಎಲ್. ಜಯಪ್ಪ, ಹನುಮಂತಪ್ಪ ಹಳೇಚಿಕ್ಕನಹಳ್ಳಿ, ಸಂಘಟನಾ ಕಾರ್ಯದರ್ಶಿ ಸಿ.ಹೆಚ್. ದೀಪಕ್ ಕುಮಾರ್ ಚನ್ನಗಿರಿ, ತಾಲ್ಲೂಕು ಅಧ್ಯಕ್ಷ ಮಂಜುನಾಥ್ ಹರಿಹರ, ಹಳೇಚಿಕ್ಕನಹಳ್ಳಿಯ ಆರ್. ಹನುಮಂತ ರಾಜ್, ಹೆಚ್.ಕೆ. ಮಂಜುನಾಥ್ ಮನವಿ ಸಲ್ಲಿಸಿದ್ದಾರೆ.

Leave a Reply

Your email address will not be published.