ಸತ್ಯಹರಿಶ್ಚಂದ್ರ ನಾಟಕವನ್ನು ನೋಡಿ ಗಾಂಧೀಜಿ ಸತ್ಯವನ್ನು ಪ್ರತಿಪಾದಿಸಿದರು

ಸತ್ಯಹರಿಶ್ಚಂದ್ರ ನಾಟಕವನ್ನು ನೋಡಿ  ಗಾಂಧೀಜಿ ಸತ್ಯವನ್ನು ಪ್ರತಿಪಾದಿಸಿದರು

ದಾವಣಗೆರೆ, ಸೆ.15- ಸತ್ಯಹರಿಶ್ಚಂದ್ರ ನಾಟಕವನ್ನು ಬಾಲ್ಯದಲ್ಲಿ ನೋಡಿದ ಗಾಂಧೀಜಿಯವರು ತಮ್ಮ ಜೀವನದಲ್ಲಿ ಸತ್ಯ, ಅಹಿಂಸೆಯನ್ನು ಪ್ರತಿಪಾದಿಸಿದರು ಎಂದು ಚಿತ್ರದುರ್ಗ ಬೃಹನ್ಮಠದ ಶ್ರೀ ಶಿವಮೂರ್ತಿ ಶರಣರು ವಿಶ್ಲೇಷಿಸಿದರು.

ಶರಣರು ಇಂದು ಇಲ್ಲಿನ ಗಾಂಧಿನಗರದ ಡಾ.  ಬಿ.ಆರ್. ಅಂಬೇಡ್ಕರ್‌ ಸಂಘದವರು ಏರ್ಪಡಿಸಿದ್ದ 8ನೇ ವರ್ಷದ ಸತ್ಯಹರಿಶ್ಚಂದ್ರ ಜಯಂತಿ ಮತ್ತು ವೀರಬಾಹು ಜಯಂತಿ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡುತ್ತಿದ್ದರು.

ಮನುಷ್ಯ ಸಾಯುವವರೆಗೂ ಮಣ್ಣನ್ನು ತುಳಿಯುತ್ತಲೇ ಇರುತ್ತಾನೆ. ಕೊನೆಗೆ ಮನುಷ್ಯ ಸತ್ತಾಗ ಮಣ್ಣು ಅವನನ್ನು ತುಳಿಯುತ್ತದೆ. ನನ್ನನ್ನು ನೀನು ತುಳಿದರೆ, ನಾನು ನಿನ್ನನ್ನು ತುಳಿಯುತ್ತೇನೆ ಎಂದು ಭೂಮಿ ಸಂದೇಶವನ್ನು ನೀಡುತ್ತದೆ ಎಂದು ಮಾರ್ಮಿಕವಾಗಿ ಹೇಳಿದರು.

ತುಳಿತ ಇದ್ದಲ್ಲಿ ಶೋಷಣೆ ಇರುತ್ತದೆ. ತುಡಿತ ಇರುವಾಗ ಮಾನವೀಯತೆ ಇರುತ್ತದೆ. ಇಂದು ತುಳಿಯುವವರೇ ಹೆಚ್ಚಾಗಿದ್ದಾರೆ. ತುಳಿತದಿಂದ ಪಾರಾಗಬೇಕು, ವಿವೇಚನೆ ಹೊಂದಬೇಕೆಂದು ಬುದ್ದ, ಬಸವಣ್ಣ, ಪೈಗಂಬರ್, ಗಾಂಧೀಜಿ, ಅಂಬೇಡ್ಕರ್‌ ಹೋರಾಡಿದರು ಎಂದು ಹೇಳಿದರು.

ಸತ್ಯಹರಿಶ್ಚಂದ್ರ ನೈಜ ವ್ಯಕ್ತಿಯೋ, ಕಾಲ್ಪನಿಕ ವ್ಯಕ್ತಿಯೋ ಏನೇ ಆಗಿರಲಿ, ಸ್ಮಶಾನದಲ್ಲಿ ಕಾಯುವಾಗ ತನ್ನ ಮಗನನ್ನೇ ಹೂಳಲು ಶುಲ್ಕ ನೀಡಬೇಕೆಂದು ಹೆಂಡತಿಗೆ ಹೇಳಿದ್ದು ಸ್ವಾಮಿನಿಷ್ಠೆ ತೋರಿಸುತ್ತದೆ ಎಂದರು.

ಸತ್ಯ ಸೋತರೆ ಮೋಸ, ವಂಚನೆಗೆ ಗೆಲ್ಲುವ ಅವಕಾಶ ಹೆಚ್ಚಾಗಿರುತ್ತದೆ. ಸತ್ಯವನ್ನು ಪರಿಪಾಲಿಸುವುದನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಗುಣಮಟ್ಟದ ಬದುಕು ನಮ್ಮದಾಗಬೇಕು ಎಂದು ಆಶಿಸಿದರು.

ಮುಖ್ಯ ಅತಿಥಿಯಾಗಿದ್ದ ದಾವಣಗೆರೆ ವಿಶ್ವವಿದ್ಯಾನಿಲಯದ ಕುಲಪತಿ ಡಾ. ಶರಣಪ್ಪ ಹಲಸೆ ಅವರು, ಇಂದು ನುಡಿದಂತೆ ನಡೆಯುವವರು ಕಡಿಮೆಯಾಗಿದ್ದಾರೆ, ಸತ್ಯಹರಿಶ್ಚಂದ್ರನ ಆದರ್ಶವನ್ನು ನಮ್ಮ ಜೀವನದಲ್ಲಿ ಅನುಸರಿಸಬೇಕೆಂದು ಕರೆ ನೀಡಿದರು.

ನಗರಪಾಲಿಕೆ ಮಹಾಪೌರರಾದ ಬಿ.ಜಿ.ಅಜಯಕುಮಾರ್‌ ಅವರು, ಲಂಚ ಎಲ್ಲಾ ಕಡೆ ವ್ಯಾಪಿಸಿದೆ, ನಾನೂ ಅನೇಕ ಸಂದರ್ಭದಲ್ಲಿ ಲಂಚ ನೀಡಿ ನಮ್ಮ ಕೆಲಸ ಮಾಡಿಸಿಕೊಂಡಿದ್ದೇನೆ ಎಂದು ತಿಳಿಸಿದರು.

ಸಾರ್ವಜನಿಕ ರುದ್ರಭೂಮಿಗೆ ಮೂಲಭೂತ ಸೌಲಭ್ಯಗಳನ್ನು ಒದಗಿಸಿ, ಸುಂದರ ಉದ್ಯಾನವನ್ನಾಗಿ ಪರಿವರ್ತಿಸಲು ಶ್ರಮಿಸುತ್ತೇನೆ ಎಂದು ಘೋಷಿಸಿದರು.

ದಾವಣಗೆರೆ ವಿಶ್ವವಿದ್ಯಾನಿಲಯದ ಕನ್ನಡ ಅಧ್ಯಯನ ಕೇಂದ್ರದ ಸಹಪ್ರಾಧ್ಯಾಪಕರಾದ ಡಾ. ಹೆಚ್‌. ವಿಶ್ವನಾಥ್‌ ಅವರು, ಸತ್ಯಹರಿಶ್ಚಂದ್ರನ ಆದರ್ಶ ಬದುಕು ನಮಗೆ ಪ್ರೇರಣೆಯಾಗಲಿ ಎಂದು ಆಶಿಸಿದರು.

ಆರಂಭದಲ್ಲಿ ಸ್ವಾಗತಿಸಿದ ಡಾ. ಬಿ.ಆರ್. ಅಂಬೇಡ್ಕರ್ ಸಂಘದ ಅಧ್ಯಕ್ಷ ಬಿ.ಹೆಚ್. ವೀರಭದ್ರಪ್ಪ ಅವರು ಸರ್ಕಾರವು ಪ್ರತಿ ವರ್ಷ ಸತ್ಯಹರಿಶ್ಚಂದ್ರ ಜಯಂತಿಯನ್ನು ಸರ್ಕಾರಿ ಕಾರ್ಯಕ್ರಮವಾಗಿ ಆಚರಿಸಬೇಕೆಂದು ಮನವಿ ಮಾಡಿದರು.

ವಿರಕ್ತ ಮಠದ ಶ್ರೀ ಬಸವಪ್ರಭು ಸ್ವಾಮೀಜಿ ನೇತೃತ್ವ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ದಾವಣಗೆರೆ-ಹರಿಹರ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ರಾಜನಹಳ್ಳಿ ಶಿವಕುಮಾರ್‌, ನಗರಪಾಲಿಕೆ ಸದಸ್ಯರಾದ ಜಿ.ಡಿ. ಪ್ರಕಾಶ್‌, ನಗರಪಾಲಿಕೆ ಪೌರ ಕಾರ್ಮಿಕರ ಸಂಘದ ಅಧ್ಯಕ್ಷ ಎಲ್‌.ಎಂ. ಹನುಮಂತಪ್ಪ, ಗುರುರಾಮದಾಸ್ ಆಧ್ಯಾತ್ಮ ಮಂದಿರದ ಖಜಾಂಚಿ ಬಿ.ಎಂ. ರಾಮಸ್ವಾಮಿ ಮತ್ತಿತರರು ಆಗಮಿಸಿದ್ದರು. ಕಾರ್ಯಕ್ರಮವನ್ನು ಗುರುಮೂರ್ತಿ ನಿರೂಪಿಸಿದರು.

ಕಾರ್ಯಕ್ರಮದಲ್ಲಿ ಆಶ್ರಯ ಸಮಿತಿ ಸದಸ್ಯರಾದ ಬಿ.ಎಂ. ಈಶ್ವರ್‌, ಡಾ. ಬಿ.ಆರ್‌. ಅಂಬೇಡ್ಕರ್‌ ಸಂಘದ ಪದಾಧಿಕಾರಿಗಳಾದ ಬಿ. ರಾಕೇಶ್‌, ಬಿ.ಎನ್. ರಂಗನಾಥಸ್ವಾಮಿ, ಬಿ.ಎಲ್. ಚಂದ್ರಣ್ಣ, ಮೈಲಪ್ಪ ಮತ್ತಿತರರಿದ್ದರು.

Leave a Reply

Your email address will not be published.