ಬೀದಿ ಬದಿ ವ್ಯಾಪಾರಿಗಳ ಆತ್ಮ ನಿರ್ಭರ್ ನಿಧಿ ಯೋಜನೆಯ ಸದುಪಯೋಗ ಪಡೆದುಕೊಳ್ಳಲು ಕರೆ

ದಾವಣಗೆರೆ, ಸೆ.15- ಕೇಂದ್ರ ಪುರಸ್ಕೃತ ಪ್ರಧಾನಮಂತ್ರಿ ಬೀದಿ ವ್ಯಾಪಾರಿಗಳ ಆತ್ಮ ನಿರ್ಭರ್ ನಿಧಿಯ ಯೋಜನೆಯಡಿ 10 ಸಾವಿರ ಕಿರು ಸಾಲ ಮತ್ತು ಬಡ್ಡಿ ಸಹಾಯ ಧನ ಪಡೆಯಬಹುದಾಗಿದ್ದು, ಆಸಕ್ತ ಬೀದಿ ವ್ಯಾಪಾರ ಸ್ಥರು ಅರ್ಜಿ ಸಲ್ಲಿಸುವ ಮೂಲಕ ಯೋಜನೆಯ ಸದುಪಯೋಗ ಪಡೆದುಕೊಳ್ಳಲು ಕೋರಿದೆ.

ಕೋವಿಡ್-19 ಲಾಕ್‌ಡೌನ್ ಅವಧಿಯ ಬೀದಿ ವ್ಯಾಪಾರಸ್ಥರ ಜೀವನೋಪಾಯದ ಮೇಲೆ ಪ್ರತಿಕೂಲ ಪರಿಣಾಮ ಬೀರಿದ್ದು, ಬೀದಿ ವ್ಯಾಪಾರಿಗಳ ಜೀವನೋಪಾಯ ಅಭಿವೃದ್ಧಿಗಾಗಿ ಹಾಗೂ ಅವರ ವ್ಯವಹಾರವನ್ನು ಪುನರಾರಂಭಿಸಲು ಬಂಡವಾಳ ಒದಗಿಸುವ ತುರ್ತು ಅವಶ್ಯಕತೆ ಇರುವುದರಿಂದ ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಮಂತ್ರಾಲಯ, ಭಾರತ ಸರ್ಕಾರ ನವದೆಹಲಿಯವರು ಬೀದಿ ವ್ಯಾಪಾರಸ್ಥರಿಗೆ ಪ್ರಧಾನಮಂತ್ರಿ ಬೀದಿ ವ್ಯಾಪಾರಿಗಳ ಆತ್ಮ ನಿರ್ಭರ್ ನಿಧಿಯ ಯೋಜನೆಯನ್ನು ಅನುಷ್ಠಾನಗೊಳಿಸಲು ಆದೇಶ ಹೊರಡಿಸಿದ್ದಾರೆ.

ಈ ಹಿನ್ನೆಲೆಯಲ್ಲಿ ಸದರಿ ಯೋಜನೆಯ ವೆಬ್‌ಪೋರ್ಟಲ್‌ (https://pmsvanidhi.mohua.gov.in) ಮೂಲಕ ಈಗಾಗಲೇ ಖಾತೆ ಹೊಂದಿರುವ ಬ್ಯಾಂಕ್‌ಗಳನ್ನು ಆಯ್ಕೆ ಮಾಡಿಕೊಂಡು, ಕೂಡಲೇ ಅರ್ಜಿ ಸಲ್ಲಿಸಲು ಕೋರಿದೆ. ಬೀದಿ ಬದಿ ವ್ಯಾಪಾರಸ್ಥರ ಕಾರ್ಡ್ ಹೊಂದದೇ ಇರುವವರು ಮಹಾನಗರ ಪಾಲಿಕೆಯಲ್ಲಿ ತೆರೆಯಲಾಗಿರುವ ಸಹಾಯ ಕೇಂದ್ರದ ಮೂಲಕ 24 ಗಂಟೆಯೊಳಗೆ ಕಾರ್ಡ್ ಪಡೆಯಲು ಅವಕಾಶ ಕಲ್ಪಿಸಲಾಗಿದೆ. ಅರ್ಜಿ ಸಲ್ಲಿಸಿದ ಕೇವಲ 10 ದಿನಗಳೊಳಗಾಗಿ ಸಾಲ ಮತ್ತು ಸಹಾಯಧನ ದೊರಕಲಿದ್ದು, ಬೀದಿ ಬದಿ ವ್ಯಾಪಾರಸ್ಥರು ಯೋಜನೆಯ ಸದುಪಯೋಗ ಪಡೆಯುವಂತೆ ಜಿಲ್ಲಾಧಿಕಾರಿ ಮಹಾಂತೇಶ್‌ ಬೀಳಗಿ ತಿಳಿಸಿದ್ದಾರೆ.

Leave a Reply

Your email address will not be published.