ನಿಸ್ವಾರ್ಥ ಸೇವೆಯಿಂದ ದೇಶದ ಉನ್ನತಿ

ನಿಸ್ವಾರ್ಥ ಸೇವೆಯಿಂದ ದೇಶದ ಉನ್ನತಿ

ದಾವಣಗೆರೆ ವಿವಿಯಲ್ಲಿನ ಇಂಜಿನಿಯರ್‌ಗಳ ದಿನಾಚರಣೆಯಲ್ಲಿ ಪ್ರೊ. ಹಲಸೆ

ದಾವಣಗೆರೆ, ಸೆ. 15- ದೇಶದ ಅರ್ಥಿಕ, ಸಾಮಾಜಿಕ, ಶೈಕ್ಷಣಿಕ ಮತ್ತು ಕೃಷಿ ಕ್ಷೇತ್ರದ ಸಮಗ್ರ ಅಭಿವೃದ್ದಿಗೆ ಸರ್ ಎಂ. ವಿಶ್ವೇಶ್ವರಯ್ಯ ಅವರು ನೀಡಿದ ಕೊಡುಗೆಗಳು ಶಾಶ್ವತವಾಗಿ ಉಳಿದಿವೆ. ಪ್ರತಿಯೊಬ್ಬ ವ್ಯಕ್ತಿಯೂ ನಿಸ್ವಾರ್ಥದಿಂದ ದೇಶಕ್ಕಾಗಿ, ಸಮಾಜಕ್ಕಾಗಿ ತನ್ನ ಸೇವೆಯನ್ನು ಸಮರ್ಪಿಸಿದಾಗ ದೇಶವನ್ನು ಅತ್ಯುನ್ನತ ಮಟ್ಟಕ್ಕೆ ಒಯ್ಯಲು ಸಾಧ್ಯ ಎಂದು ದಾವಣಗೆರೆ ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ. ಶರಣಪ್ಪ ವಿ. ಹಲಸೆ ಅಭಿಪ್ರಾಯಪಟ್ಟರು.

ದಾವಣಗೆರೆ ವಿಶ್ವವಿದ್ಯಾನಿಲಯದ ಆವರಣ ದಲ್ಲಿ  ಸರ್. ಎಂ. ವಿಶ್ವೇಶ್ವರಯ್ಯ ಅವರ ಜನ್ಮ ದಿನದ ಪ್ರಯುಕ್ತ ಇಂದು ಏರ್ಪಡಿಸಿದ್ದ ಇಂಜಿನಿಯರ್‍ಗಳ ದಿನಾಚರಣೆ ಕಾರ್ಯಕ್ರಮದಲ್ಲಿ ವಿಶ್ವೇಶ್ವರಯ್ಯ ಅವರ ಭಾವಚಿತ್ರಕ್ಕೆ ಪುಷ್ಪಾರ್ಪಣೆ ಮಾಡಿ ಮಾತನಾಡಿದರು.

ಜೀವನದಲ್ಲಿ ಶಿಸ್ತು, ಕಾರ್ಯದಲ್ಲಿ ಸಂಯಮ, ಅಭಿವೃದ್ದಿಯ ಮುಂದಾಲೋಚನೆ, ಯೋಜನೆಗಳ ಅನುಷ್ಠಾನಕ್ಕೆ ಅಧ್ಯಯನಗಳ ಜೊತೆಗೆ ಜನಪರ ಕಾಳಜಿಯ ಸೇವಾಭಾವಗಳನ್ನು ಮೈಗೂಡಿಸಿ ಕೊಂಡಾಗ ಕೈಗೊಂಡ ಯಾವುದೇ ಕೆಲಸದಲ್ಲಿ ಯಶಸ್ಸು ಕಾಣಲು ಸಾಧ್ಯ. ವಿಶ್ವೇಶ್ವರಯ್ಯ ಅವರ ಪ್ರಾಮಾಣಿಕವಾದ ಕಾರ್ಯ, ಸೇವಾ ನಿಷ್ಠೆ ಹಾಗೂ ಯೋಜನಾಬದ್ಧ ಕಾರ್ಯಗಳು ಇಂದಿಗೂ ಜನಮಾನಸದಲ್ಲಿ ಗಟ್ಟಿಯಾಗಿ ಉಳಿಯಲು ಕಾರಣವಾಗಿವೆ ಎಂದು ತಿಳಿಸಿದರು.

ಯಾವುದೇ ಕೆಲಸ ಮಾಡುವ ಮುನ್ನ ಅಧ್ಯಯನ, ಚಿಂತನ-ಮಂಥನ ಅಗತ್ಯ. ನಾವು ತಿಳಿಸುವ ವಿಚಾರಗಳು ಇನ್ನೊಬ್ಬರ ಮೇಲೆ ಕೆಟ್ಟ ಪರಿಣಾಮ ಬೀರದಂತೆ ಎಚ್ಚರಿಕೆ ವಹಿಸಬೇಕು. ಶಿಕ್ಷಕರೂ ಸಹ ತಮ್ಮ ಪಾಠ ಪ್ರವಚನಕ್ಕೆ ಮುನ್ನ ಉದ್ದೇಶಿತ ವಿಷಯದ ಬಗ್ಗೆ ಆಳವಾಗಿ ಅಧ್ಯಯನ ಮಾಡಿ ವಿದ್ಯಾರ್ಥಿಗಳಿಗೆ ಮಾಹಿತಿ ನೀಡಬೇಕು. ಆಗ ಸಿಗುವ ತೃಪ್ತಿಗೆ ಸರಿಸಮವಾದುದು ಯಾವುದೂ ಇಲ್ಲ ಎಂದು ಹೇಳಿದರು.

ಕುಲಸಚಿವ ಪ್ರೊ. ಬಸವರಾಜ ಬಣಕಾರ ಮಾತನಾಡಿ, ಸರ್.ಎಂ. ವಿಶ್ವೇಶ್ವರಯ್ಯ ಅವರು ರಾಜ್ಯಕ್ಕೆ ನೀಡಿದ ಕೊಡುಗೆ ಅಪಾರ. ಬ್ಯಾಂಕ್, ವಿಶ್ವವಿದ್ಯಾನಿಲಯ, ಮಹಿಳಾ ಶಿಕ್ಷಣ, ಕೈಗಾರಿಕೆ, ನೀರಾವರಿ, ಅಣೆಕಟ್ಟು, ಆಡಳಿತ ನಿರ್ವಹಣೆ, ವಿದ್ಯುತ್ ಹೀಗೆ ಎಲ್ಲಾ ಕ್ಷೇತ್ರಗಳಲ್ಲೂ ತಮ್ಮದೇ ಆದ ವಿಭಿನ್ನ ರೀತಿಯ ಯೋಜನೆಗಳನ್ನು ರೂಪಿಸಿ, ಅನುಷ್ಠಾನಕ್ಕೆ ತರಲು ಯತ್ನಿಸಿದ್ದಾರೆ. ಅವರ ಅನುಪಮ ಸೇವೆ, ಯೋಜನೆಗಳು ಇಂದಿಗೂ ಜನರ ಆರ್ಥಿಕ, ಸಾಮಾಜಿಕ, ಶೈಕ್ಷಣಿಕ ಬೆಳವಣಿಗೆಗೆ ಪೂರಕವಾಗಿವೆ ಎಂದು ನುಡಿದರು.

ಭದ್ರಾವತಿಯ ಕಾಗದ ಕಾರ್ಖಾನೆ, ಕಬ್ಬಿಣ ಉಕ್ಕು ಕಾರ್ಖಾನೆ, ಮೈಸೂರು ವಿವಿ, ಮೈಸೂರು ಬ್ಯಾಂಕ್, ಸಕ್ಕರೆ ಕಾರ್ಖಾನೆ, ಶರಾವತಿ ಜಲ ವಿದ್ಯುತ್, ನಗರಾಭಿವೃದ್ಧಿ, ಬಣ್ಣ ಮತ್ತು ಅರಗು ಕಾರ್ಖಾನೆ, ಸೋಪ್, ಮೈಸೂರು ರೇಷ್ಮೆ,… ಹೀಗೆ ಅವರು ಅಭಿವೃದ್ಧಿಯ ವಿಚಾರದಲ್ಲಿ ಯಾವುದೇ ಕ್ಷೇತ್ರವನ್ನೂ ಬಿಟ್ಟಿಲ್ಲ. ಸ್ಥಳೀಯವಾಗಿ ಲಭ್ಯವಿರುವ ಸಂಪನ್ಮೂಲಗಳನ್ನು ಬಳಸಿಕೊಂಡು ಅಭಿವೃದ್ಧಿ ಪಡಿಸಿ ದೇಶಕ್ಕೆ ಮಾದರಿಯಾಗುವ ರೀತಿಯಲ್ಲಿ ಬೆಳೆಸಲು ನೆರವಾಗಿದ್ದಾರೆ ಎಂದು ವಿವರಿಸಿದರು.

ಪರೀಕ್ಷಾಂಗ ಕುಲಸಚಿವೆ ಪ್ರೊ. ಅನಿತಾ ಹೆಚ್.ಎಸ್., ಹಣಕಾಸು ಅಧಿಕಾರಿ ಪ್ರೊ. ಗೋಪಾಲ ಎಂ. ಅಡವಿರಾವ್, ಡೀನ್ ಡಾ.ಕೆ. ವಿಶ್ವನಾಥ, ಡಾ. ರಾಜಕುಮಾರ, ಚಿತ್ರದುರ್ಗ ಸ್ನಾತಕೋತ್ತರ ಕೇಂದ್ರದ ಸಂಯೋಜನಾಧಿಕಾರಿ ಡಾ. ವಿಶ್ವನಾಥ, ಕುಮಾರ ಸಿದ್ಧಮಲ್ಲಪ್ಪ ಉಪಸ್ಥಿತರಿದ್ದರು.

Leave a Reply

Your email address will not be published.