ಹರಪನಹಳ್ಳಿ : ಫಲಾನುಭವಿಗಳ ಸಂಕಷ್ಟಕ್ಕೆ ಸ್ಪಂದಿಸಿದ ವೀಣಾ ಮಹಾಂತೇಶ್‌

ಹರಪನಹಳ್ಳಿ : ಫಲಾನುಭವಿಗಳ ಸಂಕಷ್ಟಕ್ಕೆ ಸ್ಪಂದಿಸಿದ ವೀಣಾ ಮಹಾಂತೇಶ್‌

ತಾಂತ್ರಿಕ ಕಾರಣದಿಂದ ಬಿಡುಗಡೆಯಾಗದ ಹಣ ರಾಜೀವ್ ಗಾಂಧಿ ಗ್ರಾಮೀಣ ವಸತಿ ನಿಗಮದಿಂದ  ಮತ್ತೆ ಮಂಜೂರು

ಹರಪನಹಳ್ಳಿ, ಸೆ.13-ರಾಜೀವ್ ಗಾಂಧಿ ಗ್ರಾಮೀಣ ವಸತಿ ನಿಗಮದಿಂದ  ಮಂಜೂರಾಗಬೇಕಿದ್ದ ಹಣ ತಾಂತ್ರಿಕ ಕಾರಣದಿಂದ ಬಿಡುಗಡೆಯಾಗದಿದ್ದಾಗ, ಸಂಬಂಧಿಸಿದ ಸಚಿವರು, ಅಧಿಕಾರಿಗಳನ್ನು ಭೇಟಿ ಮಾಡಿ, ಫಲಾನುಭವಿಗಳ ಸಂಕಷ್ಟಕ್ಕೆ ನೆರವಾದ ಸಮಾಜಮುಖಿ ಟ್ರಸ್ಟ್‌ ಅಧ್ಯಕ್ಷೆ ಎಂ.ಪಿ. ವೀಣಾ ಮಹಾಂತೇಶ್ ಅವರನ್ನು ಫಲಾನುಭವಿಗಳು ಸನ್ಮಾನಿಸಿದರು.

ತಾಲ್ಲೂಕಿನ 2653 ಬಡ ಕುಟುಂಬಗಳಿಗೆ ರಾಜೀವಗಾಂಧಿ ಗ್ರಾಮೀಣ ವಸತಿ ನಿಗಮದಿಂದ ಮಂಜೂರಾಗಿದ್ದ ಮನೆಗಳಿಗೆ ಹರಪನಹಳ್ಳಿ ತಾಲ್ಲೂಕು ಬಳ್ಳಾರಿ ಜಿಲ್ಲೆಗೆ ಸೇರ್ಪಡೆಯಾದ ಪರಿಣಾಮ ತಾಂತ್ರಿಕ ಕಾರಣದಿಂದ ಹಣ ಬಿಡುಗಡೆಯಾಗಿರಲಿಲ್ಲ. ಇದ್ದ ಸೂರನ್ನು ಬೀಳಿಸಿಕೊಂಡು ನೂತನ ಮನೆ ನಿರ್ಮಾಣಕ್ಕೆ ಹಣವಿಲ್ಲದೇ ತಗಡು, ನೆರಿಕೆ ಮನೆಗಳಲ್ಲಿ ವಾಸ ಮಾಡಿಕೊಂಡು ವರ್ಷಗಟ್ಟಲೇ ಪರದಾಡುತ್ತಿದ್ದ ಫಲಾನುಭವಿಗಳ ಕಷ್ಟವನ್ನು ವೀಣಾ ಮಹಾಂತೇಶ್ ಮನಗಂಡರು. 

ಸಂಬಂಧಿಸಿದ ಅಧಿಕಾರಿಗಳಲ್ಲಿ ಹಾಗೂ ವಸತಿ ಸಚಿವ ವಿ.ಸೋಮಣ್ಣ ಅವರನ್ನು ಖುದ್ದು ಭೇಟಿಯಾಗಿ ವಸತಿ ರಹಿತರ ಕಷ್ಟವನ್ನು ವಿವರಿಸಿದರು. ನಿಗಮದಿಂದ ಸಂದಾಯ ವಾಗಬೇಕಿದ್ದ ಬಾಕಿ ಹಣವನ್ನು ಕೂಡಲೇ ಬಿಡುಗಡೆ ಮಾಡಬೇಕೆಂದು ಮನವಿ ಸಲ್ಲಿಸಿ ಒತ್ತಾಯಿಸಿದ್ದರು. ನಿರಂತರ ಹೋರಾಟ ಮಾಡಿ ಈಗಾಗಲೇ ಹಲವಾರು ಫಲಾನುಭವಿಗಳ ಬ್ಯಾಂಕ್ ಖಾತೆಗೆ ನಿಗಮದಿಂದ (ತಲಾ 88 ಸಾವಿರಕ್ಕೂ ಅಧಿಕ) ನೇರವಾಗಿ ಬಾಕಿ ಹಣ ಜಮಾ ಆಗುತ್ತಿದೆ. ವೀಣಾ ಅವರ ಕಾರ್ಯಕ್ಕೆ ತಾಲ್ಲೂಕಿನ ಎರಡು ಸಾವಿರಕ್ಕೂ ಹೆಚ್ಚು ಕುಟುಂಬಗಳು ಮನಸಾರೆ ಹರಸಿದ್ದಾರೆ.

ಕಾರ್ಯಕ್ರಮದಲ್ಲಿ ಪುರಸಭೆ ಮಾಜಿ ಅಧ್ಯಕ್ಷೆ ಕವಿತಾ ವಾಗೀಶ್, ಮುಖಂಡರಾದ ಬಿ.ದುರುಗಪ್ಪ, ಗಾಯತ್ರಮ್ಮ,  ದೇವೀರಮ್ಮ, ಎಸ್.ನಾರನಗೌಡ, ಪಿ.ಎಂ.ಕೊಟ್ರಬಸಯ್ಯ, ಎಸ್.ಅಜ್ಜಯ್ಯ, ಕೆಂಚಮ್ಮ ಇನ್ನಿತರರಿದ್ದರು.

Leave a Reply

Your email address will not be published.