ಸಾವಯವ ಉತ್ಪನ್ನಗಳ ಉತ್ಪಾದನೆಯಲ್ಲಿ ಚಿಕ್ಕಬನ್ನಿಹಟ್ಟಿ ರೈತರ ಸಾಧನೆ

ಸಾವಯವ ಉತ್ಪನ್ನಗಳ ಉತ್ಪಾದನೆಯಲ್ಲಿ ಚಿಕ್ಕಬನ್ನಿಹಟ್ಟಿ ರೈತರ ಸಾಧನೆ

ದಾವಣಗೆರೆ, ಸೆ.13- ಕೃಷಿ ಇಲಾಖೆಯಿಂದ ಸೌಲಭ್ಯ ಪಡೆದು ಎರೆಹುಳು ತೊಟ್ಟಿಗಳನ್ನು ನಿರ್ಮಿಸಿಕೊಂಡು, ಎರೆಗೊಬ್ಬರ ಉತ್ಪಾದನೆ ಮಾಡಿ ಅದರಿಂದ ಸಾವಯವ ಉತ್ಪನ್ನಗಳನ್ನು ಹೆಚ್ಚಾಗಿ ಉತ್ಪಾದಿಸುವತ್ತ ಹೆಜ್ಜೆ ಇಟ್ಟಿರುವ ಜಗಳೂರು ತಾಲ್ಲೂಕಿನ ಚಿಕ್ಕಬನ್ನಿ ಹಟ್ಟಿ ಹಾಗೂ ಚಿಕ್ಕಬನ್ನಿಹಟ್ಟಿ ಗೊಲ್ಲರಹಟ್ಟಿ ರೈತರ ಸಾಧನೆ ಅಭಿನಂದನಾರ್ಹ ಎಂದು ಕೃಷಿ ಇಲಾಖೆ ಶ್ಲಾಘಿಸಿದೆ.

ಜಗಳೂರು – ಕೊಟ್ಟೂರು ದಾರಿಯಲ್ಲಿ ಕೆಚ್ಚೇನಹಳ್ಳಿ ಗ್ರಾಮದಿಂದ ಮೂರು ಕಿ.ಮೀ. ಕ್ರಮಿಸಿದರೆ, ಚಿಕ್ಕಬನ್ನಿ ಹಟ್ಟಿ ಗ್ರಾಮ ಸಿಗುತ್ತದೆ. ರಾಗಿ, ಜೋಳ, ಸಜ್ಜೆ, ತೊಗರಿ, ಶೇಂಗಾ, ಹೀಗೆ ಬಹುಬೆಳೆ ಪದ್ಧತಿ ಅನುಸರಿಸುತ್ತಿರುವ ಗ್ರಾಮದ ಪ್ರತಿ ರೈತ ಕುಟುಂಬದಲ್ಲಿ ಕುರಿಗಳು, ರಾಸುಗಳು ಕಾಣಸಿಗುತ್ತವೆ.  ಮನೆ ಮನೆಯಲ್ಲಿ 25 ರಿಂದ 200 ಕುರಿಗಳನ್ನು ಹೊಂದಿರುವ ಕುಟುಂಬಗಳಿಗೆ ಜಮೀನಿನಲ್ಲಿ ಗೊಬ್ಬರಕ್ಕಾಗಿ ಕುರಿಗಳನ್ನು ನಿಲ್ಲಿಸುವುದು ಒಂದು ಉಪಕಸುಬಾಗಿದೆ.

ಪಟ್ಟಣ ಸಂಪರ್ಕದಿಂದ ದೂರವಿದ್ದು, ವಾಹನಗಳ ಸೌಕರ್ಯ ಅಷ್ಟಾಗಿ ಇಲ್ಲದಂಥ ಈ ಗ್ರಾಮಗಳು ಕೃಷಿ ಇಲಾಖೆಯ ಸಾವಯವ ಕೃಷಿ ಅಳವಡಿಕೆ ಮತ್ತು ಪ್ರಮಾಣೀ ಕರಣ ಕಾರ್ಯಕ್ರಮದಡಿಯಲ್ಲಿ ಗುಂಪು ಪ್ರಮಾಣೀಕರಣ ಕ್ಕಾಗಿ ಆಯ್ಕೆಗೊಂಡಿವೆ. ಚಿಕ್ಕಬನ್ನಿಹಟ್ಟಿಯಲ್ಲಿ ಶ್ರೀ ಮುರುಡ ಬಸವೇಶ್ವರ ಸಾವಯವ ಕೃಷಿ ಸಮಿತಿ ಹಾಗೂ ಚಿಕ್ಕಬನ್ನಿಹಟ್ಟಿ ಗೊಲ್ಲರಹಟ್ಟಿಯಲ್ಲಿ ಶ್ರೀ ಸಿದ್ದೇಶ್ವರ ಸಾವಯವ ಕೃಷಿ ಸಮಿತಿ ಹೆಸರಿನಲ್ಲಿ ಗುಂಪುಗಳು ನೋಂದಣಿಯಾಗಿದ್ದು, ಪ್ರತಿ ಗುಂಪು 45 ಜನ ರೈತ ಸದಸ್ಯರನ್ನು ಹೊಂದಿವೆ.

ಗುಂಪುಗಳು ರಾಗಿ, ಊಟದ ಜೋಳ, ಶೇಂಗಾ, ಮೆಕ್ಕೆಜೋಳ ಬೆಳೆಗಳಿಗೆ ಸಾವಯವ ಪ್ರಮಾಣೀಕರಣಕ್ಕಾಗಿ ಬೆಳೆಗಳನ್ನು ಆಯ್ಕೆ ಮಾಡಿಕೊಂಡಿರುತ್ತಾರೆ. ಸಾವಯವ ಬೆಳೆ ಉತ್ಪಾದನೆ ಹಾಗೂ ಪ್ರಮಾಣೀಕರಣವನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಎರೆಹುಳು ಗೊಬ್ಬರ ಉತ್ಪಾದನೆ ಮಾಡಲು ಎರೆಹುಳು ಸಾಕಾಣಿಕೆ ಘಟಕಗಳನ್ನು ನಿರ್ಮಿಸಿಕೊಳ್ಳಲು ಸರ್ಕಾರದ ವತಿಯಿಂದ ಸಹಾಯಧನವನ್ನು ನೀಡಲಾಗುತ್ತಿದೆ. ಯೋಜನೆಯ ಅಂಗವಾಗಿ ಚಿಕ್ಕಬನ್ನಿಹಟ್ಟಿ ಗ್ರಾಮ ಹಾಗೂ ಚಿಕ್ಕಬನ್ನಿಹಟ್ಟಿ – ಗೊಲ್ಲರಹಟ್ಟಿ ಗ್ರಾಮದಲ್ಲಿ ಈವರೆಗೆ ತಲಾ 15  ಜನ ರೈತರು ಜೋಡಿ ಅಂಕಣದ ಎರೆಹುಳು ತೊಟ್ಟಿಗಳನ್ನು ನಿರ್ಮಿಸಿಕೊಂಡು ಎರೆಗೊಬ್ಬರ ಉತ್ಪಾದನೆ ಮಾಡುತ್ತಿದ್ದಾರೆ.

ಗ್ರಾಮ ಪ್ರವೇಶಿಸಿ ಹಾಗೇ ಹೊಲದ ದಾರಿಯಲ್ಲಿ ಸಾಗುತ್ತಿದ್ದರೆ ಒಂದೊಂದೇ ಎರೆಹುಳು ತೊಟ್ಟಿಗಳು ಕಾಣಸಿಗುತ್ತವೆ. ಕೆಲ ರೈತರು ಜಮೀನಿನಲ್ಲಿ, ಕೆಲವರು ಕಣದಲ್ಲಿ ಲಭ್ಯವಿರುವ ಜಾಗದಲ್ಲಿ ತೊಟ್ಟಿಗಳನ್ನು ನಿರ್ಮಾಣ ಮಾಡಿಕೊಂಡು ಎರೆಗೊಬ್ಬರ ಉತ್ಪಾದನೆ ಪ್ರಾರಂಭಿಸಿದ್ದಾರೆ. ಇದೇ ಎರೆಹುಳು ಗೊಬ್ಬರ ಉಪಯೋಗಿಸಿಕೊಂಡು ಎರೆಹುಳು ಗೊಬ್ಬರಗಳ ಘಟಕಗಳ ಪಕ್ಕದಲ್ಲಿ ಸಾವಯವ ರೀತಿಯಲ್ಲಿ ತರಕಾರಿ, ಹೂವು ಉತ್ಪಾದನೆ ಮಾಡುತ್ತಿದ್ದಾರೆ.

ರಾಸಾಯನಿಕ ಮುಕ್ತ ಆಹಾರ ಸೇವನೆ ಆರೋಗ್ಯಕ್ಕೂ ಒಳ್ಳೆಯದು. ಭೂಮಿಯು ಫಲವತ್ತಾಗಿ ಉಳಿಯುತ್ತದೆ. ಸರ್ಕಾರದಿಂದ ದೊರೆತಿರುವ ಈ ಸಹಾಯ ರೈತರಿಗೆ ಅನುಕೂಲವಾಗಿದೆ ಎನ್ನುತ್ತಾರೆ ಗ್ರಾಮದ ರೈತ ಹಾಗೂ ಕೃಷಿ ಮಾರುಕಟ್ಟೆ ಮಾಜಿ ಉಪಾಧ್ಯಕ್ಷ ಮಹೇಶ್.

Leave a Reply

Your email address will not be published.