ವಾಸ್ತವ ಸ್ಥಿತಿ ಅರಿತು ಕಾನೂನು ಮಾಡಿದರೆ ಒಳ್ಳೆಯದಲ್ಲವೇ…

ಮಾನ್ಯರೇ, 

ಇಷ್ಟು ದಿನ ಹೆಲ್ಮೆಟ್, ಮಾಸ್ಕ್, ಇನ್ಷೂರೆನ್ಸ್, ಎಮಿಷನ್ ಟೆಸ್ಟ್ ಎಂದು ದಂಡ ವಸೂಲಿ ಮಾಡುತ್ತಿದ್ದ ಪೊಲೀಸ್ ಸಿಬ್ಬಂದಿ ಐಎಸ್‌ಐ ಮಾರ್ಕಿನ ಪೂರ್ಣ ಹೆಲ್ಮೆಟ್‌ ಕಡ್ಡಾಯ ಮಾಡಿ, ಹೊಸ ದಂಡ ವಸೂಲಿ ಪ್ರಯೋಗ ಆರಂಭಿಸಿದೆ.

ಕೊರೊನಾ ಭಯದಿಂದ ಗ್ರಾಮೀಣ ಪ್ರದೇಶದ ಜನತೆ ನಗರಕ್ಕೆ ಬರುವ ಸಂಖ್ಯೆ ಈಗಾಗಲೇ ಕಡಿಮೆಯಾಗಿದೆ. ವ್ಯಾಪಾರಸ್ಥರು ವ್ಯಾಪಾರ ವಿಲ್ಲದೆ ಪರದಾಡುವಂತಹ ಪರಿಸ್ಥಿತಿ ಬಂದಿದೆ. ಬಾಡಿಗೆ ಮಳಿಗೆ ಪಡೆದು ವ್ಯಾಪಾರ ಮಾಡುತ್ತಿರುವವರ ಸ್ಥಿತಿ ಚಿಂತಾಜನಕವಾಗಿದ್ದು, ಕಳೆದ 6 ತಿಂಗಳುಗಳಿಂದ ಎಲ್ಲ ವ್ಯಾಪಾರಸ್ಥರೂ ತತ್ತರಿಸಿ ಹೋಗಿದ್ದಾರೆ. ಇಂತಹ ಸಂದರ್ಭದಲ್ಲಿ ಸರ್ಕಾರಗಳು ದಿನಕ್ಕೊಂದು ಕಾನೂನು ತರುತ್ತಾ ಸಾರ್ವಜನಿಕರಿಗೆ ಮತ್ತು ವ್ಯಾಪಾರಸ್ಥರಿಗೆ ಗಾಯದ ಮೇಲೆ ಬರೆ ಎಳೆಯುತ್ತಿದ್ದಾರೆ. ಮೊದಲೇ ಉಸಿರಾಟದ ತೊಂದರೆಯಿಂದ ಜನ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಈಗ ಮುಖಕ್ಕೆ ಮಾಸ್ಕ್, ತಲೆಗೆ ಪೂರ್ಣ ಹೆಲ್ಮೆಟ್ ಹಾಕಿ ಎನ್ನುವ ಸರ್ಕಾರ ಆಸ್ಪತ್ರೆಗೆ ಬಂದರೆ ವೆಂಟಿಲೇಟರ್ ಸೌಲಭ್ಯವಿಲ್ಲದೆ ಜೀವ ಕಳೆದುಕೊಂಡು ಪ್ಲಾಸ್ಟಿಕ್ ಕವರ್‌ನಲ್ಲಿ ಮನೆಗೆ ಹೋಗುವಂತಾಗಿದೆ.

ದುಡಿಮೆಯೇ ಇಲ್ಲದ ಈಗಿನ ಸಂದರ್ಭದಲ್ಲಿ ಹೊಸದಾಗಿ ಸಾವಿರಾರು ಕೂಪಾಯಿ ನೀಡಿ ಹೆಲ್ಮೆಟ್ ಖರೀದಿ ಸಾಧ್ಯವೇ. ನಿಮ್ಮ ಪ್ರಾಣ ಉಳಿಸಲು ನಮ್ಮ ಕಾನೂನು ಎಂಬ ಹೊಸ ನಾಟಕೀಯ ಮಾತುಗಳನ್ನು ಬಿಟ್ಟು, ವಾಸ್ತವ ಸ್ಥಿತಿ ಅರಿತು ಕಾನೂನು ಮಾಡಿದರೆ ಎಲ್ಲರಿಗೂ ಒಳಿತಲ್ಲವೇ…

 – ಕೆ.ಎಲ್. ಹರೀಶ್ ಬಸಾಪುರ                   

Leave a Reply

Your email address will not be published.