ರೈತ ವಿರೋಧಿ ನೀತಿಗಳನ್ನು ಕೈ ಬಿಡಲು ಆಗ್ರಹ

ರೈತ ವಿರೋಧಿ ನೀತಿಗಳನ್ನು ಕೈ ಬಿಡಲು ಆಗ್ರಹ

ಗ್ರಾಮ ಪಂಚಾಯಿತಿ ಭಾಗದಲ್ಲಿ ಹೋರಾಟ

ದಾವಣಗೆರೆ, ಸೆ.12- ಮೆಕ್ಕೆಜೋಳ ಖರೀದಿ ಕೇಂದ್ರ, ಭೂಮಿ ಕಾಯ್ದೆ, ಎಪಿಎಂಸಿ ಕಾಯ್ದೆ, ವಿದ್ಯುತ್ ಖಾಸಗೀಕರಣದ ಬಗ್ಗೆ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ವತಿಯಿಂದ ತಾಲ್ಲೂಕಿನ ವಿವಿಧ ಗ್ರಾಮಗಳ ಗ್ರಾಮ ಪಂಚಾಯಿತಿ ಭಾಗದಲ್ಲಿ ಹೋರಾಟದ ಜೊತೆಗೆ ಆ ಭಾಗದ ರೈತರಿಗೆ ಅರಿವು ಮೂಡಿಸಲಾಯಿತು.

ಕಾಡಜ್ಜಿ ಪಂಚಾಯ್ತಿ, ಆಲೂರು ಪಂಚಾಯ್ತಿ, ಬಸವನಾಳ್ ಪಂಚಾಯ್ತಿ ಭಾಗದ ರೈತರಿಗೆ ಜಾಗೃತಿ ಮೂಡಿಸಿ ಪಂಚಾಯಿತಿ ಮುಖಾಂತರ ರಾಜ್ಯದ ಮುಖ್ಯಮಂತ್ರಿ ಅವರಿಗೆ ರೈತ ಪರ ಬೇಡಿಕೆಗಳ ಈಡೇರಿಕೆಗೆ ಮನವಿ ಸಲ್ಲಿಸಲಾಯಿತು.

ಜಿಲ್ಲೆಯಲ್ಲಿ 1 ಲಕ್ಷದ 25 ಸಾವಿರ ಹೆಕ್ಟೇರ್‌ನಿಂದ 1 ಲಕ್ಷದ 30 ಸಾವಿರ ಹೆಕ್ಟೇರ್‌ ಪ್ರದೇಶದಲ್ಲಿ ಮೆಕ್ಕೆಜೋಳ ಬಿತ್ತನೆಯಾಗಿದೆ. ಸರಾಸರಿ ಇಳುವರಿ ಪ್ರತಿ ಎಕರೆಗೆ 25 ರಿಂದ 30 ಕ್ವಿಂಟಾಲ್ ಆಗಿದ್ದು, ಒಟ್ಟು ಜಿಲ್ಲೆಯ ಸರಾಸರಿ 6 ಲಕ್ಷದ 50 ಸಾವಿರ ಮೆಟ್ರಿಕ್ ಟನ್‌ನಿಂದ 7 ಲಕ್ಷ ಟನ್ ಉತ್ಪಾದನೆ ಇದ್ದು, ಇದೇ ಸೆ.30ಕ್ಕೆ ಖರೀದಿ ಕೇಂದ್ರ ತೆರೆಯಬೇಕು. ಭೂಮಿ ಕಾಯ್ದೆ, ಎಪಿಎಂಸಿ ಕಾಯ್ದೆ, ವಿದ್ಯುತ್ ಖಾಸಗೀಕರಣ ಇವುಗಳನ್ನು ಕೊರೊನಾ ನೆಪವೊಡ್ಡಿ ದೇಶ ಮತ್ತು ರಾಜ್ಯದಲ್ಲಿ 144ನೇ ಸೆಕ್ಷನ್ ಜಾರಿಗೊಳಿಸಿದ್ದು, ಈ ಕಾಯ್ದೆಗಳು ರೈತ, ಕೃಷಿ ಕಾರ್ಮಿಕ ವಿರೋಧಿ ನೀತಿಯಾಗಿದ್ದು, ತಕ್ಷಣ ಕೈಬಿಡಬೇಕೆಂದು ಸಂಘಟನೆಯ ರಾಜ್ಯ ಕಾರ್ಯದರ್ಶಿ ಬಲ್ಲೂರು ರವಿಕುಮಾರ್ ಒತ್ತಾಯಿಸಿದರು.

ಈ ಸಂದರ್ಭದಲ್ಲಿ ಪಾಮೇನಹಳ್ಳಿ ಲಿಂಗರಾಜು, ರಾಂಪುರ ಆರ್.ಜಿ. ಬಸವರಾಜ, ನಾಗರಕಟ್ಟೆ ಜಯನಾಯ್ಕ, ಆಲೂರು ಆರ್. ಪರಮೇಶಪ್ಪ ಸೇರಿದಂತೆ ಇತರರು ಇದ್ದರು.

Leave a Reply

Your email address will not be published.