ಉದ್ಯೋಗ ನೀಡಿ, ಆತ್ಮಹತ್ಯೆ ನಿಲ್ಲಿಸಿ

ಮಿಸ್ಡ್ ಕಾಲ್ ಅಭಿಯಾನಕ್ಕೆ ಚಾಲನೆ

ದಾವಣಗೆರೆ, ಸೆ.12- ಉದ್ಯೋಗ ನೀಡಿ ಆತ್ಮಹತ್ಯೆ ನಿಲ್ಲಿಸಿ 7998799854 ನಂಬರ್‍ಗೆ ಮಿಸ್ಡ್ ಕಾಲ್ ನೀಡುವ ಮೂಲಕ ಅಭಿಯಾನಕ್ಕೆ ಜಿಲ್ಲಾ ಯುವ ಕಾಂಗ್ರೆಸ್ ಸಮಿತಿ ಚಾಲನೆ ನೀಡಿದೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಸೈಯದ್ ಖಾಲಿದ್ ಅಹ್ಮದ್, ದೇಶ ದಲ್ಲಿ ನಿರುದ್ಯೋಗ ಸಮಸ್ಯೆ ತಾಂಡವವಾಡುತ್ತಿದ್ದು, ದೇಶದ ಪ್ರಧಾನಿ ನರೇಂದ್ರ ಮೋದಿಯವರು ಉದ್ಯೋಗ ನೀಡು ವಲ್ಲಿ ವಿಫಲರಾಗಿದ್ದಾರೆ. ಉದ್ಯೋಗ ಇಲ್ಲದೇ ಯುವಕರು ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ. ದೇಶದ ಬೆನ್ನೆಲಬು ಎಂದು ಹೇಳುವ ರೈತರು ಸಹ ಆತ್ಮಹತ್ಯೆಗೆ ಶರಣಾಗುತ್ತಿ ದ್ದಾರೆ. ಇಂತಹ ಸಂದರ್ಭದಲ್ಲಿ ನಿರುದ್ಯೋಗ ಸಮಸ್ಯೆ ಯನ್ನು ಹೋಗಲಾಡಿಸಿ ಆತ್ಮಹತ್ಯೆ ತಡೆಯುವ ಕೆಲಸವನ್ನು ಪ್ರಧಾನ ಮಂತ್ರಿಗಳು ಮಾಡಬೇಕು. ಆದರೆ ಇದನ್ನೆಲ್ಲಾ ನಿರ್ಲಕ್ಷಿಸಿ ಭ್ರಷ್ಟಾಚಾರದಲ್ಲಿ ತೊಡಗಿಸಿಕೊಂಡಿರುವುದು ದೇಶಕ್ಕೆ ಮಾರಕ ಎಂದು ಆರೋಪಿಸಿದರು.

ಪ್ರಧಾನಿ ಮೋದಿಯವರು ಅಧಿಕಾರ ಸ್ವೀಕರಿಸುವು ದಕ್ಕೂ ಮುಂಚೆ ದೇಶದಲ್ಲಿ ವರ್ಷಕ್ಕೆ 2 ಕೋಟಿ ಉದ್ಯೋಗ ಸೃಷ್ಠಿ ಮಾಡುವುದಾಗಿ ಭರವಸೆ ನೀಡಿದ್ದರು. ಆದರೆ 6 ವರ್ಷದ ಆಡಳಿತಾವಧಿಯಲ್ಲಿ ಯಾವುದೇ ತರಹದ ಉದ್ಯೋಗವನ್ನು ಸೃಷ್ಠಿ ಮಾಡದೇ ನಿರುದ್ಯೋಗ ತಾಂಡವವಾಡುವಂತೆ ಮಾಡಿ ನಿರುದ್ಯೋಗಿಗಳ ಜೀವನದ ಜೊತೆಗೆ ಚೆಲ್ಲಾಟವಾಡುತ್ತಾ, ಸುಳ್ಳು ಪ್ರಚಾರವನ್ನು ಪಡೆಯುತ್ತಿದ್ದಾರೆ ಎಂದು ಆಪಾದಿಸಿದರು. 

ಯುವ ಕಾಂಗ್ರೆಸ್ ರಾಷ್ಟ್ರೀಯ ವಕ್ತಾರ ಹೆಚ್.ಜೆ. ಮೈನುದ್ದೀನ್ ಮಾತನಾಡಿ, ಈ ಅಭಿಯಾನಕ್ಕೆ ಜಿಲ್ಲಾ ದ್ಯಂತ ನಿರುದ್ಯೋಗಿ ಯುವಕ, ಯುವತಿಯರು 7998799854 ನಂಬರ್‍ಗೆ ಮಿಸ್ಡ್‍ಕಾಲ್ ನೀಡುವ ಮುಖಾಂತರ ಕೇಂದ್ರ ಬಿಜೆಪಿ ಸರ್ಕಾರ ದಾವಣಗೆರೆ ಜಿಲ್ಲೆಯಲ್ಲಿ ಹಾಗೂ ರಾಜ್ಯ ಮತ್ತು ರಾಷ್ಟ್ರ ವ್ಯಾಪ್ತಿಯಲ್ಲಿ ಎಷ್ಟು ನಿರುದ್ಯೋಗಿಗಳು ಇದ್ದಾರೆ ಎನ್ನುವುದು ತಿಳಿಯ ಬೇಕಾಗಿದೆ. ಆದ ಕಾರಣ ಪ್ರಜ್ಞಾವಂತರಾದ ತಾವೆಲ್ಲರೂ ಈ ಅಭಿಯಾನಕ್ಕೆ ಬೆಂಬಲಿಸಬೇಕೆಂದು ವಿನಂತಿಸಿದರು. 

ದೇಶದ ಶಕ್ತಿಯೇ ಯುವಶಕ್ತಿ ಎಂಬ ಘೋಷ ವಾಕ್ಯವನ್ನು ಯಾರಾದರೂ ಹಾಳು ಮಾಡಿದ್ದರೆ ಅದು ರಾಜ್ಯ ಮತ್ತು ಕೇಂದ್ರ ಬಿಜೆಪಿ ಸರ್ಕಾರ. ಎಲ್ಲಾ ಸರ್ಕಾರಿ ಸಂಸ್ಥೆಗಳನ್ನು ಇಂದು ಖಾಸಗೀಕರಣ ಮಾಡುವುದನ್ನು ನೋಡಿದರೆ ಮುಂದಿನ ದಿನಮಾನಗಳಲ್ಲಿ ತಮ್ಮ ಸರ್ಕಾರಗಳನ್ನು ಖಾಸಗೀಕರಣ ಮಾಡಿ ಬಿಜೆಪಿ ಎಲ್ಲ ಅಂಗ ಸಂಸ್ಥೆಗಳು ವಿದೇಶದಿಂದಲೇ ಭಾರತದ ಮೇಲೆ ಆಡಳಿತ ಮಾಡುವ ಸಂದರ್ಭವನ್ನು ತರಬಹುದು ಎಂದು ಟೀಕಿಸಿದರು.

ಸ್ವಾಮಿ ವಿವೇಕಾನಂದರು ಹೇಳಿದಂತೆ ಎದ್ದೇಳಿ ಯುವಕರೇ, ಗುರಿ ಮುಟ್ಟುವವರೆಗೂ ನಿಲ್ಲದಿರಿ ಎಂಬ ಘೋಷವಾಕ್ಯವನ್ನು ಪಾಲಿಸಬೇಕಾಗಿದೆ ಎಂದರು.

ಕಾಂಗ್ರೆಸ್ ಮುಖಂಡರಾದ ಹೆಚ್. ಸುಭಾನ್‍ಸಾಬ್, ಸಂದೀಪ್‍ಕುಮಾರ್,  ರಾಜ್ಯ ಯುವ ಕಾಂಗ್ರೆಸ್ ಸಹ ಕಾರ್ಯದರ್ಶಿ ಜಮೀರಾ ನವೀದ್ ಇದ್ದರು.

Leave a Reply

Your email address will not be published.