ಹೃದಯ ಕೃಷಿಕ …

ಹೃದಯ ಕೃಷಿಕ …

ಬಂಜರು ನೆಲವ ಹದಗೊಳಿಸಿ
ಹೃದಯದಿ ಹಸಿರು ಬಿತ್ತುವ ಹರಿಕಾರನೇ
ಅಳೆಯಲಾದೀತೆ ನಿನ್ನ ಯೌಗಿಕ ಶಕ್ತಿಯ.

ಉತ್ತಿದ್ದು ಬರೀ ಬೀಜವನ್ನಲ್ಲ
ಬಿತ್ತಿದ್ದು ಬರೀ ಹೊಲವನ್ನಲ್ಲ
ಬೆಳೆದದ್ದು ಬರೀ ಹಸಿರನ್ನಲ್ಲ
ಉಸಿರಿಗೆ ಉಸಿರು ತುಂಬಿಸುವ
ಕಾಯಕ ನಿನ್ನದು ದೊರೆಯೇ.

ಅದೆಂಥ ಮನೋಬಲ ಆತ್ಮಬಲ
ಒಳಗಿದೆ ಸಾಟಿಯಿಲ್ಲದ ಛಲ
ನಿಜದ ನೆಲೆಯಲಿ ಅರಿತಿರುವೆ
ನೀನೊಬ್ಬನೇ ದೈವಬಲ.

ಸುಳ್ಳು ಶೃಂಗಾರವ ದೂರಮಾಡಿ
ಪೊಳ್ಳು ಮನದ ಹೊಟ್ಟನು ತೂರಿ
ಸಹನಾಶೀಲತೆಯ ಗಟ್ಟಿಗೊಳಿಸಿ
ನಿಷ್ಕಲ್ಮಶ ಭಾವದಿ ಪೊರೆವ ನಿನ್ನ
ಕಾರುಣ್ಯದ ಭಾವಕೆ ಎಣೆಯಿಲ್ಲ.

ಕಳೆ ಕೊಳೆಗಳನು ನಾಶಪಡಿಸಿ
ಒಳ ಹೊರಹುಗಳ ಹಸನುಗೊಳಿಸಿ
ಅಂತಃಸತ್ವದ ಸಂದೇಶ ಸಾರುವ
ನಿನ್ನ ಮನದ ಕೃಷಿಗೆ ಸಮದೂಗಿ
ನಮಿಸುವ ಪದಗಳ ಸಿರಿ ನನ್ನೊಳಿಲ್ಲ
ಅನ್ಯ ತೋರಿಕೆಯ ಮಾತಿನ ಹಂಗೇಕೆ
ಶರಣಾರ್ಥಿ ನಿನ್ನ ಕಾಯಕಕ್ಕೆ.


ಗಂಗಾಧರ ಬಿ.ಎಲ್. ನಿಟ್ಟೂರು
blgnittur123@gmail.com

Leave a Reply

Your email address will not be published.