ಅರ್ಧ ಹೆಲ್ಮೆಟ್ ಮೇಲೆ ಪೊಲೀಸ್ ಕಣ್ಣು

ಅರ್ಧ ಹೆಲ್ಮೆಟ್ ಮೇಲೆ ಪೊಲೀಸ್ ಕಣ್ಣು

ದಾವಣಗೆರೆ, ಸೆ.9- ಸುರಕ್ಷಿತವಲ್ಲದ ಅರ್ಧ ಹೆಲ್ಮೆಟ್ ಧರಿಸಿ ರಸ್ತೆಗಿಳಿದವರ‌ ಮೇಲೆ ನಗರದಲ್ಲಿ ಸಂಚಾರಿ ಪೊಲೀಸರು ಹದ್ದಿನ ಕಣ್ಣಿಟ್ಟಿದ್ದು, ಸದ್ಯಕ್ಕೆ ಜಾಗೃತಿ ಮೂಡಿ ಸುವ ಕೆಲಸ ಮಾಡುತ್ತಿದ್ದಾರೆ. ಆದರೆ ಮುಂದೊಂದು ದಿನ ದಂಡದ ಬಿಸಿ ಕಟ್ಟಿಟ್ಟ ಬುತ್ತಿ.

ಅರ್ಧ ಹೆಲ್ಮೆಟ್ ಧರಿಸಿ ರಸ್ತೆಗಿಳಿವ ದ್ವಿಚಕ್ರ ವಾಹನ ಸವಾರರನ್ನು ಹಿಡಿದು ಅರ್ಧ ಹೆಲ್ಮೆಟ್ ವಶಕ್ಕೆ ತೆಗೆದುಕೊಳ್ಳುವ ಕಾರ್ಯಾಚರಣೆಗಿಳಿದಿದ್ದಾರೆ. ಫೆಬ್ರವರಿಯಲ್ಲಿ ಹಾಫ್ ಹೆಲ್ಮೆಟ್ ಧರಿಸದಂತೆ ಎಚ್ಚರಿಕೆ ನೀಡಿದ್ದ ಪೊಲೀಸ್ ಇಲಾಖೆ ಸೆಪ್ಟೆಂಬರ್‍ನಲ್ಲಿ ದಿಢೀರ್‍ನೇ ಕಾರ್ಯಾಚರಣೆ ಆರಂಭಿಸಿ ಸವಾರರಿಗೆ ಶಾಕ್ ನೀಡಿದೆ. 

ಇನ್ನು ಮುಂದೆ ಅದನ್ನು ಧರಿಸದೇ ತಲೆಗೆ ಸುರಕ್ಷಿತವಾದ ಐಎಸ್ ಐ ಮಾರ್ಕ್ ವುಳ್ಳ ಹೆಲ್ಮೆಟ್ ಧರಿಸುವಂತೆ ಮನವರಿಕೆ ಮಾಡುತ್ತಾರೆ.

ನಗರದ ವಿವಿಧಡೆ ರಸ್ತೆಗೆ ಇಳಿದಿರುವ ಸಂಚಾರಿ ಪೊಲೀಸರು ಅರ್ಧ ಹೆಲ್ಮೆಟ್ ವಿರುದ್ಧ ಕಾರ್ಯಾಚರಣೆ ಆರಂಭಿಸಿದ್ದು, ಅರ್ಧ ಹೆಲ್ಮೆಟ್ ಧರಿಸಿ ಸಂಚರಿಸುತ್ತಿದ್ದ ವಾಹನ ಸವಾರರನ್ನು ನಿಲ್ಲಿಸಿ ಅವರ ತಲೆ ಮೇಲಿದ್ದ ಹೆಲ್ಮೆಟ್‍ಗಳನ್ನು ಕಿತ್ತುಕೊಂಡು ನಾಳೆಯಿಂದ ಪೂರ್ಣ ಪ್ರಮಾಣದ ಹೆಲ್ಮೆಟ್ ಧರಿಸಿಕೊಂಡು ಬರಬೇಕೆಂಬ ಜಾಗೃತಿ ಮೂಡಿಸುತ್ತಿದ್ದ ದೃಶ್ಯ ನಗರದ ಕೆಎಸ್ ಆರ್ ಟಿಸಿ ಬಸ್ ನಿಲ್ದಾಣದ ಬಳಿಯ ದಕ್ಷಿಣ ಸಂಚಾರ ಪೊಲೀಸ್ ಠಾಣೆ ಬಳಿ ಇಂದು ಕಂಡು ಬಂತು.

ಹೀಗೆ ಕಿತ್ತುಕೊಂಡ ಅರ್ಧ ಹೆಲ್ಮೆಟ್‍ಗಳನ್ನು ನಗರದ ಪಿಬಿ ರಸ್ತೆಯಲ್ಲಿರುವ ಸಂಚಾರಿ ಪೊಲೀಸ್ ಠಾಣೆ ಎದುರು ರಾಶಿ ಹಾಕಲಾಗಿತ್ತು.

ಇದೀಗ ದ್ವಿ ಚಕ್ರ ವಾಹನ ಸವಾರರು ಧರಿಸುತ್ತಿರುವ ಅರ್ಧ ಹೆಲ್ಮೆಟ್‍ಗಳನ್ನು ಪಡೆಯದೇ ಕೇವಲ ತಿಳುವಳಿಕೆ ನೀಡಿ ಕಳುಹಿಸಿದರೆ ನಾಳೆ ಮತ್ತೆ  ಅದೇ ಹೆಲ್ಮೆಟ್ ಧರಿಸಿಕೊಂಡು ಬರುತ್ತಾರೆ. ಆದ್ದರಿಂದ ಅವರ ಬಳಿ ಇರುವ ಅರ್ಧ ಪ್ರಮಾಣದ ಹೆಲ್ಮೆಟ್ ಕಿತ್ತುಕೊಳ್ಳುವುದು ಅನಿವಾರ್ಯ. ಹೀಗೆ ಮಾಡಿದರೆ ಮಾತ್ರ ಅವರು ಪೂರ್ಣ ಪ್ರಮಾಣದ ಅದೂ ಐಎಸ್‍ಐ ಮಾರ್ಕಿನ ಹೆಲ್ಮೆಟ್ ಖರೀದಿಸುತ್ತಾರೆ. ಅದೂ ಇಲ್ಲದೇ ರಸ್ತೆಗೆ ಇಳಿದರೆ ದಂಡ ಕಟ್ಟಬೇಕಾಗಲಿದೆ ಎನ್ನುತ್ತಾರೆ ಸಂಚಾರಿ ಠಾಣಾ ಪೊಲೀಸರು.

ದ್ವಿಚಕ್ರ ವಾಹನ ಸವಾರರು ಇದೀಗ ಪೂರ್ಣ ಪ್ರಮಾಣದ ಹೆಲ್ಮೆಟ್ ಖರೀದಿಗೆ 1 ಸಾವಿರದಿಂದ  800 ರೂ.ವರೆಗೆ ವೆಚ್ಚ ಮಾಡಬೇಕಿದೆ. 

ಅರ್ಧ ಹೆಲ್ಮೆಟ್ ಗಿಂತ ಪೂರ್ಣ ಪ್ರಮಾಣದ ಸುರಕ್ಷಿತ ಹೆಲ್ಮೆಟ್ ಧರಿಸುವುದು ವಾಹನ ಸವಾರರ ಜೀವ ರಕ್ಷಕವಾಗಿದೆ. ಹೀಗೆ ಹೆಲ್ಮೆಟ್ ಧರಿಸಿದ ಸವಾರರು ತಲೆಗೆ ಪೆಟ್ಟು ಬಿದ್ದು ಸಾವು ಕಂಡಿರುವ, ಮತ್ತೆ ಕೆಲವರ ಜೀವ ಅದೃಷ್ಟವಶಾತ್ ಉಳಿದಿರುವ ಪ್ರಕರಣಗಳೂ ಇವೆ.‌ ಜೀವ ರಕ್ಷಕವಾಗಿರುವ ಸಂಪೂರ್ಣ ಹೆಲ್ಮೆಟ್ ಅನ್ನು ಸ್ವಯಂ ಪ್ರೇರಣೆಯಿಂದ ಧರಿಸುವುದು ಸೂಕ್ತ ಎಂಬುದು ಕಳಕಳಿಯುಳ್ಳ ನಾಗರಿಕರ ಮಾತಾಗಿದೆ.

ಅರ್ಧ ಹೆಲ್ಮೆಟ್ ಅಪಾಯವೆಂಬುದು ಇಷ್ಟು ದಿನ ಬಿಟ್ಟು ಈಗ ಅದರ ವಿರುದ್ಧ ಸಮರ ಸಾರುತ್ತಿರುವುದು, ಜನರಿಗೆ ಜಾಗೃತಿ ಮೂಡಿಸುತ್ತಿರುವುದು ಸರಿಯೇ ? ಎಂಬ ಆಕ್ಷೇಪವೂ ವ್ಯಕ್ತವಾಗಿದೆ. ಅಲ್ಲದೇ ರಾಜ್ಯದಲ್ಲಿ ಅರ್ಧ ಹೆಲ್ಮೆಟ್ ತಯಾರಿ, ಮಾರಾಟ ಮಾಡುವವರಿಗೆ ಯಾವುದೇ ದಂಡ ವಿಧಿಸಲಿಲ್ಲ. ಆದರೆ ಹೆಲ್ಮೆಟ್ ಖರೀದಿಸಿ ಧರಿಸಿದ ಜನಸಾಮಾನ್ಯರಿಗೆ ದಂಡ ವಿಧಿಸಲಾಗುತ್ತಿದೆ. ಇದ್ಯಾವ ನೀತಿ ಎಂಬ ಅಸಮಾಧಾನವೂ ಸಾರ್ವಜನಿಕ ‌ವಲಯದಲ್ಲಿ ಕೇಳಿ ಬರುತ್ತಿದೆ.

Leave a Reply

Your email address will not be published.