ಜಿಲ್ಲೆಯಲ್ಲಿ ಸ್ವಾಮಿತ್ವ ಯೋಜನೆಗೆ ಚಾಲನೆ

ಜಿಲ್ಲೆಯಲ್ಲಿ ಸ್ವಾಮಿತ್ವ ಯೋಜನೆಗೆ ಚಾಲನೆ

ಮೊದಲ ಹಂತದಲ್ಲಿ ಪ್ರತಿ ತಾಲ್ಲೂಕಿನ 8 ಗ್ರಾಮ ಆಯ್ಕೆ: ಜಿ.ಪಂ.ಸಿಇಒ

ದಾವಣಗೆರೆ, ಸೆ. 6- ಗ್ರಾಮೀಣ ಪ್ರದೇಶ ದಲ್ಲಿ ವಾಸಿಸುವ ಭೂಮಿಯನ್ನು ಗುರುತಿಸಿ ದಾಖಲಾತಿ ಗಳನ್ನು ಮಾಡುವ ಉದ್ದೇಶದಿಂದ ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಸ್ವಾಮಿತ್ವ ಯೋಜನೆ  ಮಹತ್ವಪೂರ್ಣವಾಗಿದ್ದು,  ದಾವಣಗೆರೆಯೂ ಸೇರಿದಂತೆ ರಾಜ್ಯದ 16 ಜಿಲ್ಲೆಗಳಲ್ಲಿ ಈ ಯೋಜನೆ ಆರಂಭಿಸಲಾಗಿದೆ ಎಂದು ಜಿ.ಪಂ. ಸಿಇಒ ಪದ್ಮಾ ಬಸವಂತಪ್ಪ ಮಾಹಿತಿ ನೀಡಿದರು.

ಆರಂಭಿಕವಾಗಿ ಜಿಲ್ಲೆಯ ಪ್ರತಿ ತಾಲ್ಲೂಕಿನಲ್ಲಿ ಈ ಯೋಜನೆಗೆ 8 ಗ್ರಾಮಗಳನ್ನು ಆಯ್ಕೆ ಮಾಡಿಕೊಳ್ಳಲಾಗಿದೆ. ಆಯ್ದ ಗ್ರಾಮಗಳಲ್ಲಿ ಯೋಜನೆ ಬಗ್ಗೆ ಅರಿವು ಮೂಡಿಸಲು ಈಗಾಗಲೇ ಗ್ರಾಮ ಸಭೆಗಳನ್ನು ನಡೆಸಲಾಗುತ್ತಿದೆ ಎಂದು ತಿಳಿಸಿದರು.

ಜಿಲ್ಲಾ ಪಂಚಾಯ್ತಿ ಸಭಾಂಗಣದಲ್ಲಿ ಸಂಸದ ಜಿ.ಎಂ. ಸಿದ್ದೇಶ್ವರ ಅಧ್ಯಕ್ಷತೆಯಲ್ಲಿ ಇಂದು ನಡೆದ ಜಿಲ್ಲಾ ಅಭಿವೃದ್ಧಿ ಸಮನ್ವಯ ಮತ್ತು ಉಸ್ತುವಾರಿ ಸಮಿತಿ (ದಿಶಾ) ಸಭೆಯಲ್ಲಿ ಅವರು ಮಾತನಾಡಿದರು.

ಗ್ರಾಮೀಣ ಪ್ರದೇಶದ ಜನರ ನಿಜ ಆಸ್ತಿ ಮೌಲ್ಯವನ್ನು ಮಾಪನ ಮಾಡಲಾಗುವುದು. ನಂತರ ಡ್ರೋನ್‌ನಲ್ಲಿ ಅಳತೆ ಕಾರ್ಯವನ್ನು ಮಾಡಲಾಗುವುದು. ಈ ಸಮಗ್ರ ಮಾಹಿತಿಯನ್ನು ಪಿ.ಆರ್. ಕಾರ್ಡ್‌ನಲ್ಲಿ ನಮೂದಿಸಿ ನೀಡಲಾಗುವುದು. ಆಸ್ತಿ ವಾರಸುದಾರರಿಗೆ ಪಿ.ಆರ್.ಕಾರ್ಡ್ ದಾಖಲಾತಿಯಲ್ಲಿ ವ್ಯತ್ಯಾಸ ಕಂಡಲ್ಲಿ ಅಥವಾ ಆಸ್ತಿಯಲ್ಲಿ ವಿವಾದ ಇದ್ದಲ್ಲಿ ಅದನ್ನು ವಿಚಾರಣಾಧಿಕಾರಿಗಳಿಗೆ ಅರ್ಜಿ ನೀಡಿ ಬಗೆಹರಿಸಿಕೊಳ್ಳಬಹುದು ಎಂದರು.

ಈ ಮೊದಲು ಗ್ರಾಮದಲ್ಲಿರುವ ಭೂಮಿಗಳ ಮೇಲೆ ಬ್ಯಾಂಕ್ ಲೋನ್ ನೀಡಲಾಗುತ್ತಿರಲಿಲ್ಲ. ಈ ಯೋಜನೆ ಜಾರಿಗೆ ಬರುತ್ತಿದ್ದಂತೆ ನಾಗರಿಕರು ತಮ್ಮ ಗ್ರಾಮದ ಆಸ್ತಿ-ಪಾಸ್ತಿಗಳ ಮೇಲೂ ಕೂಡ ಸಾಲವನ್ನು ಪಡೆಯಬಹುದಾಗಿದೆ ಎಂದರು.

ಸಂಸದ ಜಿ.ಎಂ. ಸಿದ್ದೇಶ್ವರ ಮಾತನಾಡಿ, ಕೇಂದ್ರ ಸರ್ಕಾರದ ಸ್ವಾಮಿತ್ವ ಯೋಜನೆಯಿಂದ ಹಳ್ಳಿಗರಿಗೆ ತುಂಬಾ ಅನುಕೂಲವಾಗಲಿದ್ದು, ಸರ್ವೇ ಕಾರ್ಯವನ್ನು ಒಂದು ವರ್ಷಗಳ ವರೆಗೆ ನಡೆಸದೆ, 6 ತಿಂಗಳ ಒಳಗೆ ಮುಗಿಸುವಂತೆ ಸೂಚಿಸಿದರು.

ಆಯುಷ್ಮಾನ್ ಕಾರ್ಡ್ ಚರಂಡಿಗೆ ಎಸೆದವರನ್ನು ಸಸ್ಪೆಂಡ್ ಮಾಡಿ: ಎಲೆ ಬೇತೂರು ಬಳಿ ಆಯುಷ್ ಮಾನ್ ಕಾರ್ಡ್‌ಗಳನ್ನು ಚರಂಡಿಗೆ ಮೇಲೆ ಯಾವ ಕ್ರಮ ಕೈಗೊಂಡಿದ್ದೀರಿ ಎಂದು ಸಂಸದರು  ಅಂಚೆ ಕಚೇರಿಯ ಸಹಾಯಕ ಅಧೀಕ್ಷಕರನ್ನು ಪ್ರಶ್ನಿಸಿದರು.

ಆಯುಷ್ಮಾನ್ ಕಾರ್ಡ್ ಗಳನ್ನು ತಿಪ್ಪೆಗೆಸದು ಇಬ್ಬರು ಕರ್ತವ್ಯಲೋಪ ಮಾಡಿದ ಕಾರಣಕ್ಕಾಗಿ ಅವರ ಮೇಲೆ ಚಾರ್ಜ್ ಶೀಟ್ ಹಾಕಲು ಹೇಳಿರುವುದಾಗಿ ಅಧೀಕ್ಷಕರು ಉತ್ತರಿಸಿದರು.

ಬೇತೂರು ಪೋಸ್ಟ್ ಮಾಸ್ಟರ್ ಕಾರ್ಯವೈಖರಿ ಕುರಿತು ಅಸಮಾಧಾನಗೊಂಡ ಸಿದ್ದೇಶ್ವರ್, ಬಡವರಿಗೆ ತಲುಪಬೇಕಾದ ಕಾರ್ಡ್ ತಿಪ್ಪೆಗೆ ಹಾಕಿದವರನ್ನು ಸಸ್ಪೆಂಡ್ ಮಾಡಿ ಎಂದು ಅಧಿಕಾರಿಗೆ ಸೂಚಿಸಿದರು. ಈ ಬಗ್ಗೆ ಪೊಲೀಸ್ ಇಲಾಖೆಯಲ್ಲೂ ಎಫ್‌ಐಆರ್ ಆಗಿರುವುದಾಗಿ ಜಿಲ್ಲಾಧಿಕಾರಿ ತಿಳಿಸಿದರು.

ಅಧಿಕಾರಿಗಳೇ ಹೊಣೆ:  ಜುಲೈನಿಂದ ವೃದ್ಧಾಪ್ಯ ವೇತನ, ಅಂಗವಿಲಕರ ವೇತನ ಬಂದಿಲ್ಲ ಎಂದು ಫಲಾನುಭವಿಗಳು ದೂರಿದರೆ ಅಧಿಕಾರಿಗಳೇ ಹೊಣೆ ಎಂದು ಸಂಸದರು ಹೇಳಿದರು. ಡಿಸೆಂಬರ್ ಒಳಗೆ ಯಾವ ವೇತನ ಗಳನ್ನೂ ಬಾಕಿ ಉಳಿಸಿಕೊಳ್ಳದಂತೆ ತಾಕೀತು ಮಾಡಿದರು.

ವಿವಿಧ ವಸತಿ ಯೋಜನೆಗಳಡಿ ಫಲಾನುಭವಿಗಳು ಮನೆ ಕಟ್ಟಿಕೊಳ್ಳದಿದ್ದರೆ ನೋಟೀಸ್ ನೀಡಿ ರದ್ದು ಮಾಡುವಂತೆ ಜಿಲ್ಲಾಧಿಕಾರಿಗಳು ಅಧಿಕಾರಿಗಳಿಗೆ ಸೂಚಿಸಿದರು.

ಖಾತ್ರಿ ಯೋಜನೆಯಲ್ಲಿ ಲೇಬರ್ ವರ್ಕ್‌ಗೆ ಹೆಚ್ಚಿನ ಒತ್ತು:  ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆಯಡಿ ಜಿಲ್ಲೆಗೆ 40 ಲಕ್ಷ ಮಾನವ ದಿನಗಳ ಗುರಿ ನೀಡಲಾಗಿದೆ. ನಿನ್ನೆಯವರೆಗೆ 12.72 ಲಕ್ಷ ಮಾನವ ದಿನಗಳ ಬಳಕೆಯಾಗಿದೆ ಎಂದು ಜಿ.ಪಂ. ಮುಖ್ಯ ಕಾರ್ಯದರ್ಶಿ ಆನಂದ್ ತಿಳಿಸಿದರು.

ಸಾಮಗ್ರಿ ಹಾಗೂ ಲೇಬರ್ ರೆಷ್ಯೂ ಸರಿದೂಗಿಸಿಕೊಳ್ಳುವ ನಿಟ್ಟಿನಲ್ಲಿ ಪ್ರಸಕ್ತ ವರ್ಷ ಲೇಬರ್  ಕೆಲಸಕ್ಕೆ ಹೆಚ್ಚಿನ ಒತ್ತು ನೀಡಲಾಗಿದೆ ಎಂದು ಹೇಳಿದರು.

ಸಭೆಯಲ್ಲಿ ಜಿ.ಪಂ. ಅಧ್ಯಕ್ಷೆ ದೀಪಾ ಜಗದೀಶ್,  ದಿಶಾ ಸಮಿತಿ ಸದಸ್ಯರು, ತಾ.ಪಂ. ಅಧ್ಯಕ್ಷರು, ಅಧಿಕಾರಿಗಳು ಉಪಸ್ಥಿತರಿದ್ದರು.

Leave a Reply

Your email address will not be published.