ಬೆಳೆ ಸಮೀಕ್ಷೆ ಆಪ್‌ನ ಸದ್ಬಳಕೆ ಮಾಡಿಕೊಳ್ಳಲು ಕರೆ

ಬೆಳೆ ಸಮೀಕ್ಷೆ ಆಪ್‌ನ ಸದ್ಬಳಕೆ ಮಾಡಿಕೊಳ್ಳಲು ಕರೆ

ಹೊನ್ನಾಳಿ ತಾಲ್ಲೂಕಿನ ಮಾಸಡಿ ಗ್ರಾಮದ ಕಾರ್ಯಕ್ರಮದಲ್ಲಿ ಕೃಷಿ ಸಚಿವ ಬಿ.ಸಿ. ಪಾಟೀಲ್

ಹೊನ್ನಾಳಿ, ಆ.18- ನಾಡಿನ ಎಲ್ಲಾ ರೈತರು ಬೆಳೆ ಸಮೀಕ್ಷೆ ಆಪ್‍ನ ಸದ್ಭಳಕೆ ಮಾಡಿಕೊಳ್ಳಬೇಕು ಎಂದು ಕೃಷಿ ಸಚಿವ ಬಿ.ಸಿ. ಪಾಟೀಲ್ ಹೇಳಿದರು.

ತಾಲ್ಲೂಕಿನ ಮಾಸಡಿ ಗ್ರಾಮದ ಮದಾರಿ ಹನುಮಂತಪ್ಪ ಹಾಗೂ ಅನಿಲ್ ಅವರ ಮೆಕ್ಕೆಜೋಳದ ಹೊಲದಲ್ಲಿ ರೈತರಿಂದಲೇ ಬೆಳೆ ಸಮೀಕ್ಷೆ ಕಾರ್ಯವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಬೆಳೆ ಸಮೀಕ್ಷೆ ಆಪ್‍ನಲ್ಲಿ ರೈತರು ತಮ್ಮ ಜಮೀನುಗಳಲ್ಲಿನ ಬೆಳೆಗಳ ಸಮೀಕ್ಷೆಯ ಸಮಗ್ರ ವಿವರಗಳನ್ನು ನೀಡಿದರೆ ಮುಂದಿನ ದಿನಗಳಲ್ಲಿ ಸರಕಾರದ ಸವಲತ್ತುಗಳನ್ನು ಸುಲಭವಾಗಿ ಪಡೆದುಕೊಳ್ಳಬಹುದು ಎಂದು ತಿಳಿಸಿದರು.

ಈ ಅಲ್ಪ ಅವಧಿಯಲ್ಲೇ 1,52,951 ರೈತರು ತಮ್ಮ ಜಮೀನುಗಳ ಬೆಳೆ ವಿವರಗಳನ್ನು ಆಪ್‍ನಲ್ಲಿ ದಾಖಲಿಸಿದ್ದಾರೆ. ರೈತರೂ ತಾಂತ್ರಿಕ ವಾಗಿ ಅಭಿವೃದ್ಧಿ ಹೊಂದಿದ್ದಾರೆ ಎಂಬುದಕ್ಕೆ ಇದು ಸ್ಪಷ್ಟ ನಿದರ್ಶನ ಎಂದು ಹೇಳಿದರು.

ರಾಜ್ಯದ 2.10 ಲಕ್ಷ ರೈತರ ಪೈಕಿ ಕಳೆದ ಬಾರಿ 1.50 ಲಕ್ಷ ರೈತರು ಮಾತ್ರ ಬೆಳೆ ಸಮೀಕ್ಷೆ ವಿವರ ನೀಡಿದ್ದರು. ಇದಕ್ಕೆ ಮುಖ್ಯ ಕಾರಣ 60 ಲಕ್ಷ ರೈತರ ಜಮೀನುಗಳ ಪೋಡಿ ಕಾರ್ಯ ಆಗಿಲ್ಲದಿರುವುದು. ಆದ್ದರಿಂದ, ಪ್ರಸಕ್ತ ಸಾಲಿನಲ್ಲಿ ಈ ತೊಂದರೆ ಉದ್ಭವಿಸಬಾರದು ಎಂಬ ಉದ್ದೇಶದಿಂದ ರೈತರಿಂದಲೇ ಬೆಳೆ ಸಮೀಕ್ಷೆ ಕಾರ್ಯ ನಡೆಸಲು ಹಾಗೂ ವಿವರಗಳನ್ನು ಆಪ್‍ಗೆ ಅಪ್‍ಲೋಡ್ ಮಾಡಿಸಲು ನಿರ್ಧಾರ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.

ಲಾಕ್‍ಡೌನ್ ಸಂದರ್ಭದಲ್ಲಿ ಎಲ್ಲಾ ವರ್ಗಗಳ ಜನರಿಗೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ 1,610 ಕೋಟಿ ರೂ.ಗಳ ಬೃಹತ್ ಮೊತ್ತದ ಪ್ಯಾಕೇಜ್ ನೀಡಿದ್ದಾರೆ. ಪ್ರತಿಯೊಬ್ಬ ರೈತರಿಗೆ 5 ಸಾವಿರ ರೂ.ಗಳಂತೆ ಮೆಕ್ಕೆಜೋಳ ಬೆಳೆದ ರಾಜ್ಯದ 10 ಲಕ್ಷ ರೈತರಿಗೆ 500 ಕೋಟಿ ರೂ.ಗಳನ್ನು ಬಿಡುಗಡೆ ಮಾಡ ಲಾಗಿದೆ. ಈಗಾಗಲೇ 8 ಲಕ್ಷ ರೈತರ ಬ್ಯಾಂಕ್ ಖಾತೆಗಳಿಗೆ ಹಣ ಜಮಾ ಆಗಿದ್ದು, ಬಾಕಿ 2 ಲಕ್ಷ ರೈತರ ದಾಖಲೆಗಳನ್ನು ಪರಿಶೀಲಿಸಲಾಗುತ್ತಿದೆ.

ಕೊರೊನಾ ಸಂಕಷ್ಟದಲ್ಲಿ ನಷ್ಟ ಅನುಭವಿಸಿದ ಹೂವು-ಹಣ್ಣು ಬೆಳೆಗಾರರಿಗೆ ಪರಿಹಾರವಾಗಿ 136 ಕೋಟಿ ರೂ.ಗಳನ್ನು ಬಿಡುಗಡೆ ಮಾಡಲಾ ಗಿದೆ. ಕಿಸಾನ್ ಸಮ್ಮಾನ್ ಯೋಜನೆಯಡಿ ರಾಜ್ಯದ 50 ಲಕ್ಷ ರೈತರಿಗೆ ರಾಜ್ಯ ಸರಕಾರ ಆ. 16ರಂದು 1 ಸಾವಿರ ಕೋಟಿ ರೂ.ಗಳನ್ನು ಬಿಡುಗಡೆ ಮಾಡಿದೆ. ಬಿ.ಎಸ್. ಯಡಿಯೂರಪ್ಪ ಅವರು ರೈತ ನಾಯಕ ಎಂಬುದನ್ನು ಈ ಎಲ್ಲಾ ಅಂಶಗಳು ಸ್ಪಷ್ಟವಾಗಿ ದೃಢೀಕರಿಸುತ್ತವೆ ಎಂದು ಕೃಷಿ ಸಚಿವ ಬಿ.ಸಿ. ಪಾಟೀಲ್ ವಿವರಿಸಿದರು.

ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ. ರೇಣುಕಾಚಾರ್ಯ, ಜಿ.ಪಂ ಅಧ್ಯಕ್ಷೆ ದೀಪಾ ಜಗದೀಶ್, ಸದಸ್ಯರಾದ ಎಂ.ಆರ್. ಮಹೇಶ್, ಉಮಾ ರಮೇಶ್, ಸಿ. ಸುರೇಂದ್ರನಾಯ್ಕ, ತಾಪಂ ಪ್ರಭಾರ ಅಧ್ಯಕ್ಷ ಕೆ.ಎಲ್. ರಂಗನಾಥ್, ನ್ಯಾಮತಿ ತಾಪಂ ಅಧ್ಯಕ್ಷ ಎಸ್.ಪಿ. ರವಿಕುಮಾರ್, ಎಪಿಎಂಸಿ ಅಧ್ಯಕ್ಷ ಜಿ.ಎಸ್. ಸುರೇಶ್, ತಾಲ್ಲೂಕು ಬಿಜೆಪಿ ಅಧ್ಯಕ್ಷ ಜೆ.ಕೆ. ಸುರೇಶ್, ಜಿಲ್ಲಾ ಬಿಜೆಪಿ ಕಾರ್ಯದರ್ಶಿ ಅರಕೆರೆ ಎ.ಎಂ. ನಾಗರಾಜ್, ಜಂಟಿ ಕೃಷಿ ನಿರ್ದೇಶಕ ಶ್ರೀನಿವಾಸ್ ಚಿಂತಾಲ್, ಹೊನ್ನಾಳಿ ವಿಭಾಗೀಯ ಕೃಷಿ ಕಚೇರಿಯ ಉಪ ಕೃಷಿ ನಿರ್ದೇಶಕಿ ಎಂ.ಆರ್. ಹಂಸವೇಣಿ, ಸಹಾಯಕ ಕೃಷಿ ನಿರ್ದೇಶಕ ಸಿ.ಟಿ. ಸುರೇಶ್, ರೈತರಿಂದ ಬೆಳೆ ಸಮೀಕ್ಷೆ ಕಾರ್ಯದ ಉಸ್ತುವಾರಿ ಪಬ್ಲಿಕ್ ರೆಸಿಡೆಂಟ್ ಹರೀಶ್ ಮತ್ತಿತರರು ಉಪಸ್ಥಿತರಿದ್ದರು.

Leave a Reply

Your email address will not be published.