ಸ್ವಾತಂತ್ರ್ಯವು ಸಕಲ ಜಗದ ಜೀವ ಸಂಕುಲದ್ದು

ಸ್ವಾತಂತ್ರ್ಯವು ಸಕಲ ಜಗದ ಜೀವ ಸಂಕುಲದ್ದು

ಸಮುದ್ರಕ್ಕೆ ಸೇರುವ ಎಲ್ಲಾ ಮಹಾನದಿಗಳು
ಹುಟ್ಟುವುದು ಚಿಕ್ಕ ಝರಿಯಾಗಿ ತೊರೆಯಾಗಿ
ಜಗದ ಎಲ್ಲಾ ಜನಪರ ಮಹಾಕ್ರಾಂತಿಗಳಾಗಿದ್ದೂ
ಯಾರಾರೋ ಒಬ್ಬಂಟಿ ಹೃತ್ಕಮಲಿಗಳಿಂದಲೇ.

ಸ್ವಾತಂತ್ರ್ಯ ಸಕಲ ಮಾನವರ ಜನ್ಮಸಿದ್ದ ಹಕ್ಕು
ಉಸಿರಾಟ ನಾಡಿಮಿಡಿತ ಹೃದಯಬಡಿತದಂತೇ
ಕಾಯಕಜೀವಿಗಳಿಗೆ ಬಂಧನವೆ ರೌರವನರಕವು
ಕೂತುಂಡಾಳುವತಂತ್ರ ಕಾರಸ್ತಾನಕಿದೊ ದಿಕ್ಕಾರ.

ಮನೆಗಳು ಕಾಣಲಿ ಮಹಾಮನೆಯ ದಿಟ್ಟಶರಣಸತ್ವ
ಕೈಲಾಸವಾಗಲಿ ಸಕಲರ ಶುದ್ಧಕಾಯಹೃನ್ಮನಂಗಳು
ಎಲ್ಲಾ ಕಳಚಿ ಫಕೀರರಾದವರೆ ಭುವಿಯ ಬೆಳಗಿದ್ದಾರೆ
ಯಂತ್ರ ಮಂತ್ರ ಕುತಂತ್ರ ಸ್ವಾರ್ಥಕೆ ಖಡ್ಗವಾಗಿದ್ದಾರೆ.

ರಕ್ತಕ್ರಾಂತಿಯಲ್ಲ ನಮ್ಮದು ಬುದ್ಧ ಬಸವ ಗಾಂಧಿಯಾತ್ರೆ
ಬಾಹ್ಯ ಸುಡುವುದಲ್ಲ ನಮ್ಮ ಅಂತರಂಗ ಶುದ್ಧಿಕಾರ್ಯ
ಕೂಲಿಮಾಲಿ ಯಾರೆ ಇರಲಿ ಅವರಿಗಿರಲಿ ಸ್ವತಂತ್ರಸುಖ
ಎಮ್ಮ ಕಾಲೇ ಬಾಳಕಂಭ ಶಿರವೆ ಜಗಕೆ ಹೊನ್ನಕಳಸ.

ಆಗ ಕೆಂಪುಮೂತಿಗಳಿಗೆ ಈ ಕರಿಗಾಲಲೊದ್ದೆ ಓಡಿಸಿದೆವು
ಈಗ ನಮ್ಮವೇ ಕೆಂಪುಖಳಮುಖವಾಡ ಧರಿಸಿ ಮೆರೆದಿವೆ
ಮತ್ತೊಮ್ಮೆ ಘೋಷಣೆ ಹಾಕಬೇಕಿದೆ ಒಕ್ಕೊರಲಿನಿಂದಲೆ
`ಸ್ವಾತಂತ್ರ್ಯವು ಸಕಲಜಗದ ಜೀವಸಂಕುಲದ್ದು’ ಕಾವ್ಯಾತ್ಮ.


ಆರ್.ಶಿವಕುಮಾರಸ್ವಾಮಿ ಕುರ್ಕಿ
shivukurki1@gmail.com

 

Leave a Reply

Your email address will not be published.