ಸಾಧಕ ವಿದ್ಯಾರ್ಥಿಗಳಲ್ಲಿ ಅಹಂಕಾರ ಬಾರದಿರಲಿ : ರವೀಂದ್ರನಾಥ್

ಸಾಧಕ ವಿದ್ಯಾರ್ಥಿಗಳಲ್ಲಿ ಅಹಂಕಾರ ಬಾರದಿರಲಿ : ರವೀಂದ್ರನಾಥ್

 

ದಾವಣಗೆರೆ, ಆ. 14- ಗ್ರಾಮೀಣ ಭಾಗದ ವಿದ್ಯಾರ್ಥಿಗಳು ವೈದ್ಯಕೀಯ, ಇಂಜಿನಿಯರಿಂಗ್ ಮತ್ತಿತರ ಉತ್ತಮ ಹುದ್ದೆಗಳನ್ನು ಅಲಂಕರಿಸುವ ಕನಸು ಕಾಣಬೇಕು ಎಂದು ಶಾಸಕ ಎಸ್.ಎ.ರವೀಂದ್ರನಾಥ್ ಕಿವಿ ಮಾತು ಹೇಳಿದರು.

ನಗರದ ಸೋಮೇಶ್ವರ ಶಾಲೆಯಲ್ಲಿ ಶುಕ್ರವಾರ, ಡಿಡಿಪಿಐ ಕಚೇರಿ, ದಕ್ಷಿಣ ವಲಯ ಬಿಇಒ ಕಚೇರಿ, ಎಸ್‌ಎಆರ್ ಅಭಿಮಾನಿ ಬಳಗದ ಸಹಯೋಗದಲ್ಲಿ  ಎಸ್ಸೆಸ್ಸೆಲ್ಸಿಯ ಸಾಧಕ ವಿದ್ಯಾರ್ಥಿಗಳಿಗೆ ಹಮ್ಮಿಕೊಂಡಿದ್ದ ಅಭಿನಂದನಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಸಾಧಕ ವಿದ್ಯಾರ್ಥಿಗಳಲ್ಲಿ ಮನಸ್ಸಿನಲ್ಲಿ  ಅಹಂಕಾರ, ಪ್ರತಿಷ್ಠೆಗಳು ಹೆಚ್ಚಾಗಬಾರದು.  ಬದಲಾಗಿ ಗುರು-ಹಿರಿಯರ ಬಗ್ಗೆ ವಿನಯ ಭಾವನೆ ಹೊಂದಬೇಕು. ಆಗ ಮಾತ್ರವೇ ಭವಿಷ್ಯದಲ್ಲಿ ಒಳ್ಳೆಯ ಸ್ಥಾನಮಾನಗಳು ಸಿಗಲು ಸಾಧ್ಯ ಎಂದು ಪ್ರತಿಪಾದಿಸಿದರು.

ದಾವಣಗೆರೆ ಜಿಲ್ಲೆ ಈ ಬಾರಿ ಉತ್ತಮ ಫಲಿತಾಂಶ ಗಳಿಸಿದೆ. ಕರೊನಾ ಕಾರಣಕ್ಕೆ 2 ತಿಂಗಳ ನಂತರ ತಡವಾಗಿ ಪರೀಕ್ಷೆ ನಡೆದದ್ದೂ ಸಾರ್ಥಕ ಭಾವನೆ ಮೂಡಿದೆ. ಕೊರೊನಾ ಸಂಕಷ್ಟದ ಸಂದರ್ಭದಲ್ಲೂ ಗ್ರಾಮಾಂತರ ವಿದ್ಯಾರ್ಥಿಗಳು ಉತ್ತಮ ಅಂಕಗಳನ್ನು ಪಡೆದಿದ್ದಾರೆ ಎಂದು ಶಾಸಕ ರವೀಂದ್ರನಾಥ್ ಮೆಚ್ಚುಗೆ ವ್ಯಕ್ತಪಡಿಸಿದರು. 

ವಿಧಾನಪರಿಷತ್‌ನ ಮಾಜಿ ಮುಖ್ಯ ಸಚೇತಕ ಡಾ.ಎ.ಎಚ್.ಶಿವಯೋಗಿಸ್ವಾಮಿ ಮಾತನಾಡಿ, ಮಾರ್ಕ್ಸ್ ಕಡಿಮೆ ಬಂದರೂ ಬದುಕಿನಲ್ಲಿ ರಿಮಾರ್ಕ್ ಬರದಂತೆ ನಡೆದುಕೊಳ್ಳಬೇಕು ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.

ಸ್ವದೇಶ ಪ್ರೇಮ, ಸ್ವಭಾಷಾ ಪ್ರೀತಿ ಹಾಗೂ ಸ್ವ ಭೂಷಣಕ್ಕೆ ಆದ್ಯತೆ ನೀಡುವುದು ಮುಖ್ಯ. ಏನೇ ಸಾಧನೆ ಮಾಡಿದ್ದರೂ ಶ್ರದ್ಧೆ, ಗುರುಗಳ ಬಗ್ಗೆ ಗೌರವ ಇರಬೇಕು. ಕಲಿತ ಶಾಲೆಯನ್ನು ಸ್ಮರಿಸಿ ಅದರ ಬೆಳವಣಿಗೆಗೆ ಸಹಕರಿಸಿದಾಗಲೆ ಆದರ್ಶ ವಿದ್ಯಾರ್ಥಿಯಾಗುತ್ತೀರಿ ಎಂದರು.

ಸಂಬಂಧಿಕರು ಅಥವಾ ನೆರೆಹೊರೆಯ ವಿದ್ಯಾರ್ಥಿ ಕಡಿಮೆ ಅಂಕ ಗಳಿಸಿದ್ದರೆ ಕೀಳರಿಮೆಯಿಂದ ನೋಡಬಾರದು. ಅಂಕ ಗಳಿಕೆ ಮಾತ್ರವೇ ಪ್ರತಿಭೆಯಲ್ಲ. ಬೇರೆ ಕ್ಷೇತ್ರದಲ್ಲೂ ಸಾಧಿಸುವ ಅವಕಾಶಗಳಿವೆ ಎಂಬುದನ್ನು ಮರೆಯಬಾರದು ಎಂದರು.

ಡಿಡಿಪಿಐ ಸಿ.ಆರ್.ಪರಮೇಶ್ವರಪ್ಪ ಮಾತನಾಡಿ,   ಡಿಸ್ಟಿಂಕ್ಷನ್ ಹಾಗೂ ಪ್ರಥಮ ಶ್ರೇಣಿಯಲ್ಲಿ ಹೆಚ್ಚಿನ ವಿದ್ಯಾರ್ಥಿಗಳು ತೇರ್ಗಡೆಯಾಗಿರುವುದು ಈ ಬಾರಿಯ ವಿಶೇಷ. ಅಲ್ಲದೆ ವಿಷಯವಾರು ಅಧಿಕ ಸಂಖ್ಯೆಯವರು ಪೂರ್ಣ ಅಂಕ ಗಳಿಸಿದ್ದಾರೆ ಎಂದರು. 

ಸೋಮೇಶ್ವರ ಶಾಲೆಯ ಕಾರ್ಯದರ್ಶಿ ಕೆ.ಎಂ. ಸುರೇಶ್ ಮಾತನಾಡಿ, ನಾವು ಕಲಿತ ಓದು ದೇಶಕ್ಕಾಗಿ ಬಳಕೆಯಾಗಬೇಕು ಎಂದು ಆಶಿಸಿದರು. ಬಿಇಒ ಬಿ.ಸಿ.ಸಿದ್ದಪ್ಪ, ಅಕ್ಷರ ದಾಸೋಹ ಯೋಜನೆಯ ಸಹಾಯಕ ನಿರ್ದೇಶಕ ಕೆ.ಜಿ.ಶಿವಶಂಕರ್ ಇದ್ದರು. ಇದೇ ವೇಳೆ ದಕ್ಷಿಣ ವಲಯ ವ್ಯಾಪ್ತಿಯ 28 ಎಸ್ಸೆಸ್ಸೆಲ್ಸಿ ಪ್ರತಿಭಾನ್ವಿತರನ್ನು ಗೌರವಿಸಲಾಯಿತು.

Leave a Reply

Your email address will not be published.