ನಿಟ್ಟುವಳ್ಳಿ ವೃತ್ತದಲ್ಲಿನ ಗೂಡಂಗಡಿಗಳ ತೆರವು

ದಾವಣಗೆರೆ, ಆ.13- ಸ್ಮಾರ್ಟ್ ಸಿಟಿ ಯೋಜನೆಯಡಿ ನಗರ ಸೌಂದರ್ಯೀಕರಣದ ಉದ್ದೇಶದಿಂದ ವೃತ್ತದ ಅಭಿವೃದ್ಧಿ ಹಿನ್ನೆಲೆಯಲ್ಲಿ ನಗರದ ಹದಡಿ ರಸ್ತೆಯ ದಾವಣಗೆರೆ ಗ್ರಾಮಾಂತರ ಪೊಲೀಸ್ ಠಾಣಾ ಬಳಿ ಇದ್ದ ಗೂಡಂಗಡಿಗಳನ್ನು ಇಂದು ನಗರ ಪಾಲಿಕೆಯಿಂದ ತೆರವುಗೊಳಿಸಲಾಯಿತು.

ವೃತ್ತದ ಬಳಿ ಇದ್ದ ಹಣ್ಣಿನ ಅಂಗಡಿಗಳು ಮತ್ತು ಕೆಲ ಗೂಡಂಗಡಿಗಳನ್ನು ತೆರವುಗೊಳಿಸಲಾಗಿದೆ. ಇನ್ನುಳಿದಂತೆ ಕೆಲವು ಅಂಗಡಿಗಳನ್ನು ತಾವೇ ತೆರವುಗೊಳಿಸಿಕೊಳ್ಳಲಿದ್ದು, 2 ದಿನಗಳ ಕಾಲಾವಕಾಶ ನೀಡುವಂತೆ ಮಾಲೀಕರು ಪಾಲಿಕೆ ಅಧಿಕಾರಿಗಳಿಗೆ ಮನವಿ ಮಾಡಿದ್ದಾರೆ ಎಂದು ತಿಳಿದುಬಂದಿದೆ.

ಸ್ಮಾರ್ಟ್ ಸಿಟಿ ಯೋಜನೆಯಡಿ ಜಾಗಕ್ಕೆ ಅನುಗುಣವಾಗಿ ಪ್ರಮುಖ ವೃತ್ತಗಳ ಬಳಿ ಮಿನಿ ಗಾರ್ಡನ್ ನಿರ್ಮಾಣ, ವೃತ್ತ ಅಭಿವೃದ್ಧಿಪಡಿಸಿ ಸೌಂದರ್ಯೀಕರಣಗೊಳಿಸಲಾಗುವುದು. ಹಾಗೇನಾದರೂ ಅಷ್ಟು ಜಾಗ ಸಿಗದೇ ಇದ್ದರೆ  ಫುಟ್ ಪಾತ್ ನಿರ್ಮಿಸಿ, ಸಿಗ್ನಲ್ ಲೈಟ್ ಗಳ ಹಾಕಿ ವೃತ್ತ ಅಭಿವೃದ್ಧಿಪಡಿಸುವ ಯೋಜನೆ ಇದಾಗಿದೆ. ಮೊದಲ ಹಂತದಲ್ಲಿ 9, ಎರಡನೇ ಹಂತದಲ್ಲಿ 5 ವೃತ್ತಗಳ ಅಭಿವೃದ್ಧಿಪಡಿಸುವ ಪ್ರಸ್ತಾಪವಿದೆ ಎಂದು ಸ್ಮಾರ್ಟ್ ಸಿಟಿ ವ್ಯವಸ್ಥಾಪಕ ನಿರ್ದೇಶಕ ರವೀಂದ್ರ ಮಲ್ಲಾಪುರ `ಜನತಾವಾಣಿ’ಗೆ ತಿಳಿಸಿದ್ದಾರೆ.

ಹದಡಿ ರಸ್ತೆ ಬಳಿಯ ವೃತ್ತದಲ್ಲಿ ಗೂಡಂಗಡಿಗಳು ಇದ್ದ ಕಾರಣ ವೃತ್ತದ ಅಭಿವೃದ್ಧಿ ಕಾರ್ಯಕ್ಕೆ ಅಡ್ಡಿಯಾಗಿತ್ತು. ಶೆಡ್ ಗಳ ತೆರವಿಗೆ ನಗರ ಪಾಲಿಕೆಗೆ ತಿಳಿಸಲಾಗಿತ್ತು. ವೃತ್ತದ ವ್ಯಾಪ್ತಿ ಇರುವ ಶೆಡ್ ಗಳೆಲ್ಲಾ ತೆರವುಗೊಂಡರೆ ವಾರದೊಳಗಾಗಿ ಅಭಿವೃದ್ಧಿ ಕಾರ್ಯ ಪ್ರಾರಂಭಿಸಲಾಗುವುದು ಎಂದು ಮಾಹಿತಿ ನೀಡಿದ್ದಾರೆ.

ಸ್ಮಾರ್ಟ್ ಸಿಟಿ ಯೋಜನೆಯಡಿ ವೃತ್ತದ ಅಭಿವೃದ್ಧಿ ಕಾರ್ಯ ಈಗಾಗಲೇ ಕೈಗೊಳ್ಳಲಾಗಿದ್ದು, ಫುಟ್ ಪಾತ್ ನಿರ್ಮಿಸಲಾಗಿದೆ. ವೃತ್ತದ ವ್ಯಾಪ್ತಿಯಲ್ಲಿ ಇರುವ ಗೂಡಂಗಡಿಗಳ ತೆರವಿಗೆ ಮಾಲೀಕರಿಗೆ ಈಗಾಗಲೇ ಸೂಚಿಸಲಾಗಿತ್ತು. ಆದರೆ, ತೆರವಿಗೆ ಮುಂದಾಗದ ಕಾರಣ ನಗರ ಪಾಲಿಕೆಯಿಂದ ತೆರವು ಕಾರ್ಯಾಚರಣೆ ನಡೆಸಿರುವುದಾಗಿ ಪಾಲಿಕೆ ಆಯುಕ್ತ ವಿಶ್ವನಾಥ್ ಮುದಜ್ಜಿ ಹೇಳಿದ್ದಾರೆ.

Leave a Reply

Your email address will not be published.