ನಗರದಲ್ಲಿ ನೂತನ ತರಳಬಾಳು ವೃತ್ತ

ದಾವಣಗೆರೆ, ಆ.13-  ಮಹಾನಗರಪಾಲಿಕೆಯ ವ್ಯಾಪ್ತಿಯಲ್ಲಿ ಬರುವ ಡಾ. ಬಿ.ಆರ್ ಅಂಬೇಡ್ಕರ್ ವೃತ್ತದಿಂದ ಹದಡಿ ರಸ್ತೆ ಮೂಲಕ ರಾಷ್ಟ್ರೀಯ ಹೆದ್ದಾರಿ 4 ಕ್ಕೆ ಸೇರುವ ರಸ್ತೆಗೆ `ಆರೂಢ ದಾಸೋಹಿ ಶರಣ ಮಾಗನೂರು ಬಸಪ್ಪ ರಸ್ತೆ’ ಎಂದು ಹಾಗೂ ಶಾಮನೂರು ಶಿವಶಂಕರಪ್ಪ ಕಲ್ಯಾಣ ಮಂಟಪ ಮುಂಭಾಗದಲ್ಲಿ ನಿರ್ಮಿಸಿರುವ ವೃತ್ತಕ್ಕೆ `ತರಳಬಾಳು ವೃತ್ತ’ ಎಂದು ನಾಮಕರಣ ಮಾಡಲಾಯಿತು.

ಆರೂಢ ದಾಸೋಹಿ ಶರಣ ಮಾಗನೂರು ಬಸಪ್ಪ ರಸ್ತೆಯ ಹಾಗೂ ತರಳಬಾಳು ವೃತ್ತದ ನಾಮಫಲಕವನ್ನು ಸಂಸದ ಜಿಎಂ ಸಿದ್ದೇಶ್ವರ ಮತ್ತು ಶಾಸಕ ಎಸ್.ಎ. ರವೀಂದ್ರನಾಥ್ ಗುರುವಾರ ಅನಾವರಣಗೊಳಿಸಿದರು.

ಈ ವೇಳೆ ಸಂಸದ ಜಿ.ಎಂ. ಸಿದ್ದೇಶ್ವರ ಮಾತನಾಡಿ, ಬಹಳ ವರ್ಷಗಳ ಹಿಂದೆಯೇ ಈ ರಸ್ತೆ ಮತ್ತು ವೃತ್ತಕ್ಕೆ ಮಾಗನೂರು ಬಸಪ್ಪ ರಸ್ತೆ ಹಾಗೂ ತರಳುಬಾಳು ವೃತ್ತ ಎಂದು ಹೆಸರಿಡಲು ಸರ್ಕಾರಕ್ಕೆ ಮಹಾನಗರಪಾಲಿಕೆ ವತಿಯಿಂದ ಶಿಫಾರಸ್ಸು ಮಾಡಿ ಕಳುಹಿಸಲಾಗಿತ್ತು ಎಂದು ತಿಳಿಸಿದರು.

ಬಿಜೆಪಿ ಸರ್ಕಾರ ಇದ್ದ ಸಂದರ್ಭದಲ್ಲಿ ಮಂಜೂರಾಗಿತ್ತು. ಸರ್ಕಾರದಿಂದ ಒಪ್ಪಿಗೆ ಬಂದು ಏಳು ವರ್ಷವಾಗಿತ್ತು. ಆದರೆ ಹೆಸರಿಡಲು ಕಾಲ ಕೂಡಿ ಬಂದಿರಲಿಲ್ಲ. ಆದರೆ ಮತ್ತೆ ಬಿಜೆಪಿ ಸರ್ಕಾರ ಬಂದ ಮೇಲೆ ಈ ಅವಕಾಶ ಕೂಡಿಬಂದಿದೆ ಎಂದರು.

ಸಿರಿಗೆರೆಯ ಡಾ. ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ನಾಡಿನ ಹೆಮ್ಮೆಯ ಗುರುಗಳಾಗಿದ್ದಾರೆ. ಈ ಹಿನ್ನೆಲೆಯಲ್ಲಿ ವೃತ್ತಕ್ಕೆ ತರಳಬಾಳು ಅಂತ ಹೆಸರು ಇಟ್ಟಿರುವುದು ಜಿಲ್ಲೆಯ ಜನತೆಗೆ ಸಂತಸದ ವಿಷಯವಾಗಿದೆ.  ಜೊತೆಗೆ ಆರೂಢ ದಾಸೋಹಿ   ಮಾಗನೂರು ಬಸಪ್ಪನವರು ಜಿಲ್ಲೆ ಮಾತ್ರವಲ್ಲದೇ ಬೇರೆ ಕಡೆಯಲ್ಲಿಯೂ ಸಾಕಷ್ಟು ದಾನ ಧರ್ಮಗಳನ್ನು ಮಾಡಿದ್ದಾರೆ. ಹಾಗಾಗಿ ಅಂತಹ ವ್ಯಕ್ತಿಯ ಹೆಸರನ್ನು ಈ ರಸ್ತೆಗೆ ಇಟ್ಟಿರುವುದು ಸೂಕ್ತವಾಗಿದ್ದು, ಜಿಲ್ಲೆಯ ಜನತೆ ಹರ್ಷಗೊಂಡಿದ್ದಾರೆ ಎಂದು ತಿಳಿಸಿದರು.

ಸಮಾರಂಭದ ಅಧ್ಯಕ್ಷತೆಯನ್ನು ಮಹಾನಗರಪಾಲಿಕೆ ಮೇಯರ್ ಬಿ.ಜಿ.ಅಜಯ್ ಕುಮಾರ್ ವಹಿಸಿದ್ದರು. ಸಾಧು ಸದ್ಧರ್ಮ ಸಮಾಜದ ಅಧ್ಯಕ್ಷರೂ, ರಾಜ್ಯಸಭಾ ಮಾಜಿ ಸದಸ್ಯ ಕೆ.ಆರ್. ಜಯದೇವಪ್ಪ, ಪಾಲಿಕೆ ಆಯುಕ್ತ ವಿಶ್ವನಾಥ್ ಮುದಜ್ಜಿ, ದೂಡ ಅಧ್ಯಕ್ಷ ರಾಜನಳ್ಳಿ ಶಿವಕುಮಾರ್, ಉಪಮೇಯರ್ ಸೌಮ್ಯ ಎಸ್.ನರೇಂದ್ರ ಕುಮಾರ್, ವಿರೋಧ ಪಕ್ಷದ ನಾಯಕ ಎ.ನಾಗರಾಜ್, ಪಾಲಿಕೆ ನಗರ ಯೋಜನೆಯ ಸ್ಥಾಯಿ ಸಮಿತಿ ಅಧ್ಯಕ್ಷ ಎಸ್.ಟಿ.ವೀರೇಶ್, ಪಾಲಿಕೆ ಸದಸ್ಯರಾದ ಎಸ್.ಮಂಜುನಾಥ್, ಅಬ್ದುಲ್ ಲತೀಫ್, ಶ್ವೇತಾ ಶ್ರೀನಿವಾಸ್, ಗೀತಾ ನಾಗರಾಜ, ಗೀತಾ ದಿಳ್ಯೆಪ್ಪ, ಜಿಲ್ಲಾ ಕಸಾಪ ಅಧ್ಯಕ್ಷ ಹೆಚ್.ಎಸ್.ಮಂಜುನಾಥ್ ಕುರ್ಕಿ, ಹಿರಿಯ ವರ್ತಕ ಮಾಗನೂರು ಸಂಗಮೇಶ ಗೌಡ, ಚಂದ್ರಶೇಖರ್ ಗೌಡ ಮತ್ತಿತರರು ಇದ್ದರು.

Leave a Reply

Your email address will not be published.