ಕೊರೊನಾಗೆ ಆತಂಕ ಬೇಡ: ಶೀಘ್ರ ಚಿಕಿತ್ಸೆ ಪಡೆಯಿರಿ-ಎಸ್ಪಿ ಸಲಹೆ

ಕೊರೊನಾಗೆ ಆತಂಕ ಬೇಡ: ಶೀಘ್ರ ಚಿಕಿತ್ಸೆ ಪಡೆಯಿರಿ-ಎಸ್ಪಿ ಸಲಹೆ

ದಾವಣಗೆರೆ, ಆ.13- ಕೊರೊನಾ ಸೋಂಕಿಗೆ ತುತ್ತಾದರೆ ಆತಂಕ ಪಡಬೇಡಿ. ಬೇಗನೆ ಆಸ್ಪತ್ರೆಗೆ ತೆರಳಿ ಚಿಕಿತ್ಸೆ ಪಡೆದರೆ ಶೀಘ್ರ ಗುಣಮುಖರಾಗಲು ಸಾಧ್ಯ ಎಂದು ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಹನುಮಂತರಾಯ ಹೇಳಿದ್ದಾರೆ.

ಜಿಲ್ಲಾ ಚಿಗಟೇರಿ ಆಸ್ಪತ್ರೆಯಿಂದ ಗುರುವಾರ  ಕೊರೊನಾ ಸೋಂಕಿನಿಂದ ಗುಣ ಮುಖರಾಗಿ ಬಿಡುಗಡೆಯಾದ ಸಂದರ್ಭದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಆಗಸ್ಟ್ 7 ರಂದು ನನಗೆ ಕೊರೊನಾ ಪಾಸಿಟಿವ್ ಬಂದಿದ್ದು ವೈದ್ಯಾಧಿಕಾರಿಗಳು ಜಿಲ್ಲಾಧಿಕಾರಿಗಳ ಸಲಹೆ ಮೇರೆಗೆ ಜಿಲ್ಲಾಸ್ಪತ್ರೆಗೆ ದಾಖಲಾಗಿ ತಜ್ಞ ವೈದ್ಯರ ಮತ್ತು ವೈದ್ಯಕೀಯ ಸಿಬ್ಬಂದಿಗಳು ನೀಡಿದ ಉತ್ತಮ ಚಿಕಿತ್ಸೆಯಿಂದ ಗುಣಮುಖನಾಗಿದ್ದೇನೆ ಎಂದರು.

ಜಿಲ್ಲಾ ಚಿಗಟೇರಿ ಆಸ್ಪತ್ರೆಯ ತಜ್ಞ ವೈದ್ಯರು ಮತ್ತು ಪ್ಯಾರಾಮೆಡಿಕಲ್ ತಂಡವು ಉತ್ತಮವಾದ ಚಿಕಿತ್ಸೆ ನೀಡುತ್ತಿದೆ. ಜೊತೆಗೆ ಗುಣಮಟ್ಟದ ಆಹಾರ, ಪೋಷಕಾಂಶ ಹೆಚ್ಚಿಸುವ ಔಷಧಿಗಳನ್ನು ನೀಡಲಾಗುತ್ತಿದೆ.  ನನಗೆ ಕೋವಿಡ್ ಲಕ್ಷಣಗಳು ಇರಲಿಲ್ಲ. ವೈದ್ಯರು ಹೇಳಿದಂತೆ ಚಿಕಿತ್ಸೆ ಪಡೆದಿದ್ದೇನೆ. ಪ್ರೊಟೊಕಾಲ್ ಪ್ರಕಾರ ಇಂದಿನಿಂದ ಹೋಮ್ ಕ್ವಾರಂಟೈನ್ ಆಗಲಿದ್ದೇನೆ ಎಂದು ಹೇಳಿದರು.

ಆಸ್ಪತ್ರೆಯ  ಡಿ.ಎಸ್. ಡಾ.ನಾಗರಾಜ್, ಡಿಹೆಚ್‍ಓ ಡಾ.ರಾಘವೇಂದ್ರಸ್ವಾಮಿ, ಡಾ.ಶಶಿಧರ್, ಡಾ.ಹೇಮಂತ್, ಡಾ.ರವಿ, ಡಾ.ಗಿರೀಶ್ ಹೀಗೆ ನುರಿತ ತಜ್ಞ ವೈದ್ಯರು, ಪ್ಯಾರಾಮೆಡಿಕಲ್ ಸಿಬ್ಬಂದಿಗಳು ಕೋವಿಡ್ ಚಿಕಿತ್ಸೆ ನೀಡುವಲ್ಲಿ ಶ್ರಮ ವಹಿಸುತ್ತಿದ್ದಾರೆ. ಬಾಪೂಜಿ ಮತ್ತು ಎಸ್‍ಎಸ್ ಆಸ್ಪತ್ರೆಯ ತಜ್ಞ ವೈದ್ಯರೂ ಇಲ್ಲಿ ಚಿಕಿತ್ಸೆ ನೀಡುತ್ತಿದ್ದಾರೆ ಎಂದರು.

ಸರ್ಕಾರಿ ವ್ಯವಸ್ಥೆಯನ್ನು ಸಮರ್ಪಕವಾಗಿ ಬಳಕೆ ಮಾಡುವ ಉದ್ದೇಶ ಹಾಗೂ ಜಿಲ್ಲಾಸ್ಪತ್ರೆಯ ವ್ಯವಸ್ಥೆಯನ್ನು ಅವಲೋಕಿಸುವ ದೃಷ್ಟಿಯಿಂದ ಜಿಲ್ಲಾ ಸರ್ಕಾರಿ ಆಸ್ಪತ್ರೆಯನ್ನು ನಾನು ಚಿಕಿತ್ಸೆಗಾಗಿ ಆಯ್ಕೆ ಮಾಡಿದ್ದಾಗಿ ಎಸ್ಪಿ ಹೇಳಿದರು.

ಜಿಲ್ಲೆಯಲ್ಲಿ ದಿನೇ ದಿನೇ ಕೋವಿಡ್ ಪ್ರಕರಣಗಳು ಹೆಚ್ಚುತ್ತಿದ್ದು ಜಿಲ್ಲಾ ಚಿಗಟೇರಿ ಆಸ್ಪತ್ರೆಯಲ್ಲಿ ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಬೆಡ್‍ಗಳು ಸೇರಿದಂತೆ ಇತರೆ ಪೂರಕ ವ್ಯವಸ್ಥೆಗಳನ್ನು ಸದೃಢಗೊಳಿಸಿ ಜನರಿಗೆ ಅನುಕೂಲ ಮಾಡಿಕೊಡಲಾಗುವುದು ಎಂದರು.

ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಮಾತನಾಡಿ, ಜಿಲ್ಲೆಯ ಅತ್ಯಂತ ಪ್ರಮುಖ ಕೊರೊನಾ ವಾರಿಯರ್ ಆಗಿರುವ, ಇದೀಗ ಕೊರೊನಾ ವಿನ್ನರ್ ಆಗಿರುವ ಎಸ್‍ಪಿ ಯವರ ಆತ್ಮ ವಿಶ್ವಾಸದ ನಡೆ ಎಲ್ಲರಲ್ಲೂ ಧೈರ್ಯ ತುಂಬಿದೆ. ಎಸ್‍ಪಿಯವರು ಜಿಲ್ಲಾಸ್ಪತ್ರೆಯಲ್ಲಿನ ವಸ್ತುಸ್ಥತಿ, ನ್ಯೂನ್ಯತೆಗಳನ್ನು ಸರಿಪಡಿಸುವ ಉದ್ದೇಶದಿಂದ ಜಿಲ್ಲಾಸ್ಪತ್ರೆಯನ್ನು ಆಯ್ಕೆ ಮಾಡಿದ್ದರು. ಚಿಗಟೇರಿ ಆಸ್ಪತ್ರೆ, ಜೆಜೆಎಂನ ತಜ್ಞ ವೈದ್ಯರ ತಂಡ ಹಾಗೂ ಸಿಬ್ಬಂದಿಗಳು ಉತ್ತಮ ಚಿಕಿತ್ಸೆ ನೀಡಿದ್ದಾರೆ ಎಂದರು.

ಜಿಲ್ಲೆಯಲ್ಲಿ ಕೋವಿಡ್ ಮರಣ ಪ್ರಮಾಣ ತಗ್ಗಿಸಲು ಕೇವಲ ಟಾರ್ಗೆಟ್ ರೀಚ್ ಆಗಲು ಟೆಸ್ಟ್ ಮಾಡಲಾಗುತ್ತಿದೆಯೇ ಅಥವಾ ಡೆತ್ ಪಾಕೆಟ್ಸ್‍ಗಳಲ್ಲಿ ಹೆಚ್ಚಿನ ಟೆಸ್ಟ್ ಮಾಡಲಾಗುತ್ತಿದೆಯೇ ಎಂಬ ಬಗ್ಗೆ ಅನಾಲಿಸಿಸ್ ಮಾಡಿಸಿ, ಡೆತ್ ಪಾಕೆಟ್ಸ್‍ಗಳನ್ನು ಗುರುತಿಸಿ ಹೆಚ್ಚಿನ ಟೆಸ್ಟ್ ಮಾಡಿಸಿ, ಕೋವಿಡ್ ಸಾವಿನಿಂದ ಜನರನ್ನು ಪಾರು ಮಾಡಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದರು. ಈ ವೇಳೆ ಜಿಲ್ಲಾಸ್ಪತ್ರೆಯ ಡಿಎಸ್ ಡಾ.ನಾಗರಾಜ್, ಪೊಲೀಸ್ ಇಲಾಖೆ ಮತ್ತು ಆರೋಗ್ಯ ಇಲಾಖೆ ಅಧಿಕಾರಿ/ಸಿಬ್ಬಂದಿಗಳು ಇದ್ದರು.

Leave a Reply

Your email address will not be published.