ಕಾರುಣ್ಯ ಬಂಧನ…

ಕಾರುಣ್ಯ ಬಂಧನ…

ಆಗೋಚರ ಜೀವಿಯೊಂದು ಲೋಕದೊಳು
ದಿಕ್ಕೆಟ್ಟು ಬರಲು ಮನುಕುಲವು ತತ್ತರಿಸಿದೆ
ಅನುಕ್ಷಣವು ಉಸಿರಿನ ಜೀವವ ಪಣಕ್ಕಿಟ್ಟು
ಹಸಿವಿನ ಧಾವಂತದಿ ನರಳುತಿಹುದು.

ದೂರದೂರಿಗೆ ಹಗಲಿರುಳು ನಡಿಗೆ
ದೇಹಕೆ ವಿಶ್ರಾಂತಿಯಿಲ್ಲ ಮನದಿ ಕಾಡುವ
ಯೋಚನೆಗಳಿಗೆ ಕೊನೆಯಿಲ್ಲ ಬದುಕು ಬಂಡಿ
ಮುಂದ್ಹೊಗುವ ಭರವಸೆಯೂ ನಮಗಿಲ್ಲ.

ಕಗ್ಗತ್ತಲ ಮಧ್ಯ ಬೆಳಕಿನ ಕಿಡಿಯಂತೆ
ಗೋಚರಿಸಿದೆ ಕಾಣದ ಅದೆಷ್ಟೋ ಕೈಗಳು
ಜಾತಿ ಮತ ಬೇದವ ಪಕ್ಕಕ್ಕಿಟ್ಟು
ಕರುಣೆಯಲಿ ನೀಡಿವೆ ಹಸಿದರಿಗೆ
ಹಸಿವ ನೀಗಿಸುವ ಆಹಾರದ ಬಟ್ಟಲನಿತ್ತು.

ಇವರಾರೂ ನಮ್ಮ ಕರುಳ ಬಳ್ಳಿಯ
ಬಂದು ಬಾಂಧವ ಸಂಬಂಧಿಗಳಲ್ಲ
ಕರುಣೆಯೆಂಬ ಬಾಹು ಬಂಧನಕೆ ಒಳಗಾದ
ಮಾನವೀಯತೆಯ ಜೀವಂತ
ಮೂರ್ತಿಗಳು ಇವರೆಲ್ಲಾ.


ಅಂಶು ಬೆಳುವಳ್ಳಿ
ಮಾಡೆಲ್ ಶಾಲೆ ಜಾವಗಲ್
rashmisuresh.1986@gmail.com