ಕ-ರುಣಾಳು ಕರ್ತಾರ

ಕ-ರುಣಾಳು ಕರ್ತಾರ

ಕಡು ಬಡತನದ ಬದುಕಿನಲ್ಲೂ
ಕಲ್ಪನೆಯ ಕಲ್ಲ ದೇವರಿಗೆ
ಕವಳ ಬಡಿಸುವ ಬಡಿವಾರ
ಕರ್ತಾರನಿಗಿದು ಸಲ್ಲದಾ ಉಪಚಾರ.

ಕರೆದು ನೋಡು ಪ್ರೀತಿಯಲಿ
ಕರವ ಜೋಡಿಸಿ ಶಿರವ ಬಾಗಿಲು
ಕಲೆತು ಹೃದಯದಲೇ ಇರುವ ದೇವನಿಗೆ
ಕರ್ತಾರನಿಗಿದು ಸಲ್ಲುವಾ ಉಪಚಾರ.

ಕಳವಳದಿ ಕರೆಯನಾಲಿಸಿ
ಕರುಳಲವಿತು ಹಸಿವ ಹಿಂಗಿಸುವ
ಕರುಣಾಳು ಕಲ್ಪತರು
ಕರ್ತಾರನಿಗಿದು ದಿನನಿತ್ಯ ವ್ಯವಹಾರ.

ಕಲಿಯುಗದಿ ಕಲಿತವರು
ಕರಕೊಟ್ಟು ಕರೆಸುವರು
ಕರವ ಜೋಡಿಸಿ ಕೋರಿಕೆಯನರ್ಪಿಸಲು
ಕರ್ತಾರನೊಪ್ಪನೀ ಮಧ್ಯಸ್ಥಿಕೆಯ ವ್ಯವಹಾರ.

ಕಸಿದು ಕಾರ್ಮಿಕನ ಕಿಲುಬು ಕಾಸನು
ಕಟ್ಟುವನು ಧನಿಕ ದೇಗುಲವ
ಕತ್ತಿಗೆ ಹೇರುವನು ಸ್ವರ್ಣದ ಹಾರವನು
ಕರ್ತಾರಗೆ ಸಲ್ಲದೀ ಭಾರದ ಹೊರೆಯು.

ಕರ್ತಾರ ಬಯಸುವನು ಬಳಲಿದಾ ಭಾಗ್ಯಹೀನರ
ಕರಪಿಡಿದು ಮುನ್ನಡೆಸಿ ದಾಸೋಹ ಭಾವದಿ
ಕಸುವ ನೀಡಿ ಕಳೆಯ ತುಂಬಿ
ಕನಸನವರ ನನಸ ಮಾಡುವ ಪರಿಯ.!


ಅಣ್ಣಾಪುರ್‌ ಶಿವಕುಮಾರ್,  ಲಿಬರ್ಟಿವಿಲ್
ಇಲಿನಾಯ್, ಯುಎಸ್ಎ.
ashivakumar@yahoo.com

Leave a Reply

Your email address will not be published.