ಅತ್ಯುತ್ತಮ ಯೋಗ ಶಿಕ್ಷಕಿ ಜ್ಯೋತಿ ಜಗದೀಶ್ ಜೆಂಬಿಗಿ…

ಅತ್ಯುತ್ತಮ ಯೋಗ ಶಿಕ್ಷಕಿ  ಜ್ಯೋತಿ ಜಗದೀಶ್ ಜೆಂಬಿಗಿ…

ರಾಣೇಬೆನ್ನೂರಿನ ಜೆಂಬಿಗಿ ರಾಚಪ್ಪ ಶಾಂತಮ್ಮ ಅವರ ಮೊಮ್ಮಗಳು, ಜಗದೀಶ್ ರಾಚಪ್ಪ ಜೆಂಬಿಗಿ ಅವರ ಧರ್ಮಪತ್ನಿ, ಜ್ಯೋತಿ ಜೆಂಬಿಗಿ, ಅವರ ಕಿರು ಪರಿಚಯದ ಮೂಲಕ ಬಹುಮುಖ ಪ್ರತಿಭೆಯ ಅನಾವರಣಕ್ಕೆ ಇಂದು ಪ್ರಸ್ತುತ ಸಂದರ್ಭವೆಂದು ಎಲೆಮರೆಯ ಕಾಯಾಗಿರುವ ಅವರ ವಿಚಾರಧಾರೆಯ ಕೆಲವು ಮುಖ್ಯಾಂಶಗಳು.

ಸದ್ದುಗದ್ದಲವಿಲ್ಲದೆ, ಸಾಮಾಜಿಕ ಸಾಧನೆಯ ಹಾದಿಯಲ್ಲಿ ದಿಟ್ಟ ಹೆಜ್ಜೆಯನ್ನಿಡುತ್ತಿರುವ ಜ್ಯೋತಿ ಜೆಂಬಿಗಿ ರಾಣೇಬೆನ್ನೂರಿನ ಸಮಾಜ ಸೇವಕರಲ್ಲೊಬ್ಬರು, ಯೋಗ ಶಿಕ್ಷಕಿಯಾಗಿ, ಹಾವೇರಿ ಜಿಲ್ಲಾ ಪತಂಜಲಿ ಯೋಗ ಸಮಿತಿಯ ಪ್ರಭಾರಿಯಾಗಿ ಜವಾಬ್ದಾರಿ ಹೊತ್ತ ಮಹಿಳೆ, ಬ್ರಹ್ಮಕುಮಾರಿ ವಿಶ್ವವಿದ್ಯಾನಿಲಯದ ರಾಣೇಬೆನ್ನೂರಿನ ಶಾಖೆಯ ಸದಸ್ಯರಾಗಿ ಸಮಾಜ ಮುಖಿಯಾಗಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ, ಇತಿಹಾಸದ ಸ್ನಾತಕೋತ್ತರ ಪದವೀಧರೆಯಾದ ಇವರು ಸರಳ ಸಜ್ಜನಿಯ ಸಾಕಾರಮೂರ್ತಿ, ಮಾತು ಬೆಳ್ಳಿ-ಮೌನ ಬಂಗಾರ ಎಂಬ ನುಡಿಯಂತೆ ಮೌನದಿಂದಲೇ ಸಮಾಜವನ್ನು ಗ್ರಹಿಸುವ ಮನಸ್ಸು ಹೊಂದಿದ್ದಾರೆ.

ರಾಣೇಬೆನ್ನೂರು ತಾಲ್ಲೂಕು ಎಜುಕೇಷನ್ ಸೊಸೈಟಿಯ ಬಿಇಡಿ ಕಾಲೇಜಿನಲ್ಲಿ ಕಳೆದ ಐದು ವರ್ಷಗಳಿಂದ ಯೋಗ ಶಿಕ್ಷಣ ತರಬೇತಿದಾರರಾಗಿ ಸೇವೆ ಸಲ್ಲಿಸುತ್ತಿರುವ ಜ್ಯೋತಿ ಜೆಂಬಿಗಿ ಅತ್ಯುತ್ತಮ ಯೋಗ ಶಿಕ್ಷಕಿ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಇವರು ಆಟ-ಪಾಠ, ಓದು-ಬರಹ ಯೋಗಾಸನಗಳಲ್ಲೂ ಎಲ್ಲರ ಕಣ್ಮನಗಳನ್ನು ಸೆಳೆದಿದ್ದಾರೆ, ಕಾಲೇಜ್ ಮತ್ತು ಸ್ನಾತಕೋತ್ತರ ಮಟ್ಟಗಳಲ್ಲಿ ಓದುವಾಗಲೇ ಬಹುಮಾನಗಳಿಸಿ ಕೀರ್ತಿಪಡೆದಿದ್ದಾರೆ.

ಯೋಗ ಜೀವನದ ಜೊತೆ ಆಧ್ಯಾತ್ಮಿಕ ಜೀವನದೆಡೆಗೆ ಅಪಾರ ಆಸಕ್ತಿ ಹೊಂದಿರುವ ಇವರು ಆಧ್ಯಾತ್ಮ ನನಗೆ ಮೊದಲಿನಿಂದಲೂ ಇಷ್ಟವಾಗಿದ್ದು, ಸುಖ-ದುಃಖಗಳನ್ನು ಸಮ-ಭಾವದಿಂದ ನೋಡಲು ಶಕ್ತಿ ನೀಡಿರುವಂತಹದ್ದು ಎನ್ನುತ್ತಾರೆ. ಆಧ್ಯಾತ್ಮಿಕ ಸಾಧಕಿಯಾಗಿ ಈಶ್ವರಿ ವಿಶ್ವ ವಿದ್ಯಾನಿಲಯದೊಂದಿಗೆ ಅಪಾರ ಅಭಿಮಾನ ಹಾಗೂ ನಂಟನ್ನು ಹೊಂದಿರುವ ಇವರು ಧ್ಯಾನ-ಯೋಗ ಸಾಧಕಿಯಾಗಿ, ಇವುಗಳನ್ನು ಎಲ್ಲೆಡೆ ಪಸರಿಸಲು ಶಾಲಾ – ಕಾಲೇಜ್‌ಗಳಲ್ಲಿ ಯೋಗ ಶಿಬಿರಗಳನ್ನು ನಡೆಸಿ ಸಾವಿರಾರು ಮಕ್ಕಳಿಗೆ ಯೋಗ ತರಬೇತಿ ನೀಡಿದ್ದಾರೆ, ಶಿಕ್ಷಣವೆಂದರೆ ಅದು ಏಕರೀತಿಯ ಬೋಧನೆಯಲ್ಲ ಪುಸ್ತಕೀಯ ಜ್ಞಾನವೂ ಅಲ್ಲ ಬದಲಾಗಿ ಅದು ವ್ಯಕ್ತಿಯ ವ್ಯಕ್ತಿತ್ವ ನಿರ್ಮಾಣಕ್ಕೆ ಶೀಲ ಸಂವರ್ಧನೆಗೆ ಅನುವು ಮಾಡಿಕೊಟ್ಟು ಸರ್ವಕ್ಷೇತ್ರಗಳ ಜ್ಞಾನವನ್ನು ನೀಡುವಂತಿರಬೇಕು ಎನ್ನುವ ಇವರು ಶೈಕ್ಷಣಿಕ, ಧಾರ್ಮಿಕ, ಸಾಮಾಜಿಕ, ಆಧ್ಯಾತ್ಮಿಕ, ವಿಚಾರಗಳಲ್ಲಿರುವ ತಮ್ಮ ಅನುಭವವನ್ನು ಮಕ್ಕಳಿಗೆ ಧಾರೆಯೆರೆದು ಯೋಗ ಜೀವನ ಕುರಿತು ಮಕ್ಕಳನ್ನು ಪಾವನ ಜೀವಿಗಳನ್ನಾಗಿ ಮಾಡುತ್ತಿದ್ದಾರೆ.

ಇಂದಿನ ಸ್ಪರ್ಧಾ ಪ್ರಪಂಚದ ಬದುಕಿನಲ್ಲಿ ಯೋಗ ಜೀವನ ಮರೆತು ಭೋಗ ಜೀವನದೆಡೆಗೆ ದಾಪುಗಾಲು ಹಾಕುತ್ತಿರುವ ಈ ಸಂದರ್ಭದಲ್ಲಿ ಯೋಗ, ಪ್ರಾಣಯಾಮ, ಆಧ್ಯಾತ್ಮ ನಮಗೆ ಎಂದೆಂದಿಗಿಂತಲೂ ಇಂದು ಅತ್ಯವಶ್ಯಕ ಇದನ್ನು ಅರಿತು ನಾವು ಮುನ್ನಡೆಯಬೇಕಾಗಿದೆ. ಇಂತಹ ಅತ್ಯುತ್ತಮ ಯೋಗ ಜೀವನದ ಪಾಠ ಹೇಳಿಕೊಡುತ್ತಿರುವ ಜ್ಯೋತಿ ಜೆಂಬಿಗಿ ಅವರು ಸಲ್ಲಿಸುತ್ತಿರುವ ಸಾಮಾಜಿಕ ಸೇವೆ ಶ್ಲಾಘನೀಯವಾದುದು.

ಉತ್ತಮ ಆಚಾರ-ವಿಚಾರಗಳನ್ನು ಹೊಂದಿ ಆದರ್ಶ ಜೀವನ ನಡೆಸುತ್ತಿರುವ ಶ್ರೀಮತಿ ಜ್ಯೋತಿ ಜೆಂಬಿಗಿ ಅವರ ಹಸನಾದ ಬದುಕಿಗೆ ಪತಿ ಜಗದೀಶ್ ಜೆಂಬಿಗಿ ಅವರು ನೀಡುತ್ತಿರುವ ಸಹಕಾರ ಬೆಂಬಲ ಮೆಚ್ಚುವಂತದ್ದು, ಆದರ್ಶ ದಂಪತಿಗಳಾಗಿ ಮುನ್ನಡೆಯುತ್ತಿರುವ ಇವರ ಮುಂಬರುವ ಜೀವನ ತುಂಬಾ ಆಶಾದಾಯಕವಾಗಿ ಅರ್ಥಪೂರ್ಣವಾಗಿ ಸಮಾಜಕ್ಕೆ ಸ್ಪಂದಿಸಲಿ, ಬಾಳು ಬಂಗಾರವಾಗಲಿ.

ಹೂಮನದ ಹೂವಿನಂತಹ ಸಹೃದಯಿ ಜ್ಯೋತಿ ಜೆಂಬಿಗಿ ಅವರ ಸೇವಾ ಕಾರ್ಯ ಎಲ್ಲೆಡೆ ಪಲ್ಲವಿಸಿ ಹಬ್ಬಿ ಪರಿಮಳಿಸಲಿ.


ಜೆಂಬಿಗಿ ಮೃತ್ಯುಂಜಯ
ಕನ್ನಡ ಉಪನ್ಯಾಸಕರು, ದಾವಣಗೆರೆ.

 

Leave a Reply

Your email address will not be published.