ಮಳೆ, ಗಾಳಿ ಅಬ್ಬರಕ್ಕೆ ತೂರಿಕೊಂಡು ಹೋದ ಲಾಂಚ್

ಮಳೆ, ಗಾಳಿ ಅಬ್ಬರಕ್ಕೆ ತೂರಿಕೊಂಡು ಹೋದ ಲಾಂಚ್

ಕೆಲವೊತ್ತು ಆತಂಕ ಸೃಷ್ಟಿ : ಚಾಲಕನ ಸಮಯ ಪ್ರಜ್ಞೆಯಿಂದ ಪ್ರಯಾಣಿಕರು ಪಾರು

ಸಾಗರ, ಆ.6- ತಾಲ್ಲೂಕಿನ ಹರಿಸು ಮಕ್ಕಿ-ನಿಟ್ಟೂರು ನಡುವೆ ಶರಾವತಿ ಹಿನ್ನೀರಿನಲ್ಲಿ ಜನರು ಹಾಗೂ ವಾಹನಗಳನ್ನು ಸಾಗಿಸುವ ಲಾಂಚ್ ನಡು ನೀರಿನಲ್ಲಿ ಸಿಲುಕಿ ಕೆಲವು ಗಂಟೆಗಳ ಕಾಲ ಪ್ರಯಾಣಿಕರು ಆತಂಕಕ್ಕೊಳಗಾದ ಘಟನೆ ಗುರುವಾರ ಬೆಳಿಗ್ಗೆ ನಡೆದಿದೆ.

ಲಾಂಚ್‌ನಲ್ಲಿ 25ಕ್ಕೂ ಹೆಚ್ಚು ಪ್ರಯಾಣಿಕರು, 15ಕ್ಕೂ ಹೆಚ್ಚು ಕಾರು, ಬೈಕ್‌ಗಳು ಇದ್ದವು. ಗುರುವಾರ ಬೆಳಿಗ್ಗೆ ಹಸಿರು ಮಕ್ಕಿ ದಡದಿಂದ ನಿಟ್ಟೂರು ದಡಕ್ಕೆ ಹೋಗುತ್ತಿದ್ದ ಲಾಂಚ್ ಗಾಳಿ ಹಾಗೂ ಮಳೆಯ ಅಬ್ಬರಕ್ಕೆ ತೂರಿಕೊಂಡು ಹೋಗಿ ಸೇತುವೆ ನಿರ್ಮಾಣದ ಹಿನ್ನೆಲೆಯಲ್ಲಿ ನೀರಿನಾಳದಲ್ಲಿ ಹಾಕಲಾಗಿರುವ ಫಿಲ್ಲರ್‌ ನಡುವೆ ಸಿಕ್ಕಿಕೊಂಡಿತ್ತು.

ಇದಕ್ಕಿದಂತೆ ಲಾಂಚ್‌ ಗಾಳಿಗೆ ತೂರಿಕೊಂಡು ಹೋಗಿ ನಡುನೀರಿನಲ್ಲಿ ಸಿಲುಕಿಕೊಂಡಿದ್ದರಿಂದ ಚಾಲಕ ಹಾಗೂ ಸಿಬ್ಬಂದಿಗಳ ಜೊತೆ ಪ್ರಯಾಣಿಕರೂ ಸಹ ಆತಂಕಗೊಂಡು, ಲಾಂಚ್ ಹೊರಗೆ ತರಲು ಸಾಧ್ಯವೇ ಇಲ್ಲ ಎನ್ನುವ ಸ್ಥಿತಿ ನಿರ್ಮಾಣವಾಗಿತ್ತು.

ವಿಷಯ ತಿಳಿದ ಸಂಸದ ಬಿ.ವೈ.ರಾಘವೇಂದ್ರ, ಶಾಸಕ ಹಾಲಪ್ಪ ಸೇರಿದಂತೆ ಇನ್ನಿತರರು ಸ್ಥಳಕ್ಕೆ ಆಗಮಿಸಿ, ಒಳನಾಡು ಅಧಿಕಾರಿಗಳನ್ನು ಸಂಪರ್ಕಿಸಿ, ಲಾಂಚ್ ಸುರಕ್ಷಿತವಾಗಿ ದಡ ಸೇರಿಸುವ ಜೊತೆಗೆ ಪ್ರಯಾಣಿಕರ ರಕ್ಷಣೆಗೆ ಒತ್ತು ನೀಡುವಂತೆ ಸೂಚಿಸಿದರು.

ಉಪವಿಭಾಗಾಧಿಕಾರಿ ಡಾ. ನಾಗರಾಜ್ ಅವರು, ಪ್ರಯಾಣಿಕರನ್ನು ಸುರಕ್ಷಿತವಾಗಿ ಲಾಂಚ್‌ನಿಂದ ಕರೆ ತರಲು ಶಿವಮೊಗ್ಗ ಮತ್ತು ಸೊರಬದಿಂದ ಬೋಟ್‌ಗಳನ್ನು ತರಿಸಲು ಸೂಚನೆ ನೀಡಿದರು. ಆದರೆ, ಪ್ರಯತ್ನ ನಿಲ್ಲಿಸದ ಲಾಂಚ್ ಚಾಲಕ ರವಿ ಹಾಗೂ ಸಿಬ್ಬಂದಿಗಳ ಸಮಯ ಪ್ರಜ್ಞೆಯಿಂದ ಲಾಂಚ್ ನಿಧಾನವಾಗಿ ಫಿಲ್ಲರ್ ನಡುವಿನಿಂದ ಹೊರಗೆ ತರಲು ಯಶಸ್ವಿಯಾದರು. ಸಮಯ ಪ್ರಜ್ಞೆ ಮೆರೆದು ಪ್ರಯಾಣಿಕರನ್ನು ಸುರಕ್ಷಿತವಾಗಿ ದಡಕ್ಕೆ ತಂದ ಚಾಲಕ ರವಿ ಹಾಗೂ ಸಿಬ್ಬಂದಿಯನ್ನು ಅಭಿನಂದಿಸಿದ ಪ್ರಯಾಣಿಕರು ದೊಡ್ಡ ದುರಂತದಿಂದ ಪಾರಾದೆವೆಂದು ನಿಟ್ಟುಸಿರು ಬಿಟ್ಟರು.

ಬ್ರಹ್ಮಗಿರಿ ಬೆಟ್ಟ ಕುಸಿತ : ತಲಕಾವೇರಿಯ ಅರ್ಚಕ ಸೇರಿ ಐವರು ಕಣ್ಮರೆ

ಕೊಡಗು ಜಿಲ್ಲೆಯಲ್ಲಿ ರಣಭೀಕರ ಮಳೆ ಸುರಿಯುತ್ತಿದ್ದು, ಗುರುವಾರ ಬೆಳಗಿನ ಜಾವ ಬ್ರಹ್ಮಗಿರಿ ಬೆಟ್ಟದ ತಪ್ಪಲಿನಲ್ಲಿ ವಾಸವಾಗಿದ್ದ ತಲಕಾವೇರಿಯ ಪ್ರಧಾನ ಆರ್ಚಕ ನಾರಾಯಣ ಆಚಾರ್ ಸೇರಿ ಐವರು ಗುಡ್ಡ ಕುಸಿತದಲ್ಲಿ ಕಣ್ಮರೆಯಾಗಿದ್ದಾರೆ. ಸುಮಾರು 7 ಎಕರೆ ಪ್ರದೇಶದ ಬೆಟ್ಟ ಕುಸಿತ ಉಂಟಾಗಿದ್ದು, ಆರ್ಚಕರ 2 ಮನೆಗಳು ಮತ್ತು 30 ದನ – ಕರುಗಳು ಭೂ ಸಮಾಧಿಯಾಗಿವೆ ಎಂದು ಶಂಕೆ ವ್ಯಕ್ತಪಡಿಸಲಾಗಿದೆ.


ಜಿಗಳಿ ಪ್ರಕಾಶ್,
jigaliprakash@gmail.com

Leave a Reply

Your email address will not be published.