ಹಡಗಲಿ ಶಾಸಕ ಪಿಟಿಪಿಗೆ ಬೆದರಿಕೆ ಕರೆ : ದೂರು

ಹರಪನಹಳ್ಳಿ, ಆ. 5 – ಕುರಿ ಕಳ್ಳತನದ ಹಿನ್ನೆಲೆಯಲ್ಲಿ ಅಕ್ರಮ ಚಟುವಟಿಕೆಗಳಿಗೆ ಅವಕಾಶ ನೀಡಬಾರದು ಎಂದು ಹೇಳಿರುವ ವಿಷಯಕ್ಕೆ ಸಂಬಂಧ ಪಟ್ಟಂತೆ ಇಬ್ಬರು ನನಗೆ ರಾತ್ರಿ ವೇಳೆ ದೂರವಾಣಿ ಕರೆ ಮಾಡಿ ಬೆದರಿಕೆ ಹಾಕಿದ್ದು, ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಹಡಗಲಿ ಶಾಸಕ ಪಿ.ಟಿ.ಪರಮೇಶ್ವರನಾಯ್ಕ ಅವರು ಪಟ್ಟಣದ ಪೋಲೀಸ್ ಠಾಣೆಗೆ ದೂರು ಸಲ್ಲಿಸಿದ್ದಾರೆ.

ಪರಮೇಶ್ವರನಾಯ್ಕ ಅವರು ಉಮೇಶನಾಯ್ಕ ಎಂಬುವವರ ಮೂಲಕ ದೂರು ಸಲ್ಲಿಸಿದ್ದು, ಮಾಚಿಹಳ್ಳಿ ಕೊರಚರಹಟ್ಟಿಯ ಸಚಿನ್, ದಾವಣಗೆರೆಯ ಕೊಟ್ರೇಶ ಎಂಬುವವರೇ ಬೆದರಿಕೆ ಕರೆ ಮಾಡಿದ ಆರೋಪಿಗಳು.

ಹಡಗಲಿ ತಾಲ್ಲೂಕು ಕುರುವತ್ತಿ ಗ್ರಾಮದ ಗುಡ್ಡದ ಹತ್ತಿರ ಕುರಿ ಕಳ್ಳತನ ನಡೆದಿರುವ ಬಗ್ಗೆ ದೂರವಾಣಿ ಮೂಲಕ ಮಾಹಿತಿ ಬಂದಿದ್ದರಿಂದ ಕಾನೂನು ಸುವ್ಯವಸ್ಥೆ ದೃಷ್ಠಿಯಿಂದ ಮತ್ತು ಹೆಚ್ಚಿನ ಅಹಿತಕರ ಘಟನೆಗಳು ನಡೆಯಬಾರದು ಎನ್ನುವ ಹಿನ್ನೆಲೆಯಲ್ಲಿ ಕಳೆದ 30 ರಂದು ಕುರುವತ್ತಿ ಗ್ರಾಮಕ್ಕೆ ಭೇಟಿ ನೀಡಿ ಕುರಿ ಕಳ್ಳರು ಹಾಗೂ ಕುರಿ ಮಾಲೀಕರ ನಡುವೆ ಘರ್ಷಣೆಯ ವಿಚಾರವಾಗಿ ಸ್ಥಳಿಯರೊಂದಿಗೆ ಚರ್ಚಿಸಿದೆ.

ಎಲ್ಲರನ್ನು ಸಮಾಧಾನ ಪಡಿಸಿ ತರಾತುರಿಯಲ್ಲಿ ಯಾವುದೇ ಗಲಾಟೆಗಳಿಗೆ ಆಸ್ಪದ ನೀಡದಂತೆ ಹಾಗೂ ಈ ಹಿಂದೆ ಹರಪನಹಳ್ಳಿಯಲ್ಲಿ ನಾನು ಶಾಸಕನಾಗಿದ್ದ ಅವಧಿಯಲ್ಲಿಯೂ ಇಂತಹ ಘಟನೆಗಳಲ್ಲಿ ಭಾಗಿಯಾದವರನ್ನು ಪೋಲೀಸರ ವಶಕ್ಕೆ ನೀಡಿರುವುದನ್ನು ತಿಳಿಸಿ ಸಾರ್ವಜನಿಕ ಹಿತ ದೃಷ್ಠಿಯಿಂದ ಅಕ್ರಮ ಚಟುವಟಿಕೆಗಳಿಗೆ ಅವಕಾಶ ನೀಡಬಾರದೆಂದು ಹೇಳಿರುವ ವಿಷಯ ಕುರಿತು ನನಗೆ ಆ.2 ರಂದು ರಾತ್ರಿ ವೇಳೆ ಹೆಸರಿಸಿದ ಇಬ್ಬರು ದೂರವಾಣಿ ಕರೆ ಮಾಡಿ ನಮ್ಮ ಸಮಾಜದವರ ಅಕ್ರಮಗಳನ್ನು ಬಯಲಿಗೆಳೆಯುತ್ತೀರಿ ಮತ್ತು ಸಮಾಜದ ಬಗ್ಗೆ ಮಾತನಾಡುತ್ತಿದ್ದೀರಿ ಮುಂಬರುವ ದಿನಗಳಲ್ಲಿ ನಿಮ್ಮನ್ನು ನೋಡಿಕೊಳ್ಳುತ್ತೇವೆ ಎನ್ನುವ ಬೆದರಿಕೆ ಮಾತುಗಳನ್ನು ಆಡಿರುತ್ತಾರೆ ಎಂದು ದೂರು ನೀಡಿದ್ದಾರೆ.

ನಾನು ಡಿವೈಎಸ್ಪಿ ಹರಪನಹಳ್ಳಿ ಅವರ ಗಮನಕ್ಕೆ ತಂದಿರುತ್ತೇನೆ. 8-10 ವರ್ಷಗಳಿಂದ ಹರಪನಹಳ್ಳಿ ಹಾಗೂ ಹರಪನಹಳ್ಳಿ ತಾಲ್ಲೂಕಿನ ಅಕ್ಕ ಪಕ್ಕದ  ಪ್ರದೇಶಗಳಲ್ಲಿ ನಕಲಿ ಚಿನ್ನವನ್ನು ಅಸಲಿ ಎಂದು ಮಾರಾಟ ಮಾಡಿ ಅನೇಕರಿಗೆ ಮೋಸ ಮಾಡಿರುವುದು ತಿಳಿದು ಬಂದಿರುತ್ತದೆ. ಆದ್ದರಿಂದ ಕೂಡಲೇ  ಆರೋಪಿತರ ಮೇಲೆ ಕ್ರಮ ಕೈಗೊಳ್ಳಬೇಕು ಎಂದು ಶಾಸಕ ಪರಮೇಶ್ವರನಾಯ್ಕ ದೂರು ನೀಡಿದ್ದಾರೆ.

Leave a Reply

Your email address will not be published.