ಮಾಡಿದ್ದುಣ್ಣೇ ಮಾರಾಯ್ತಿ…!

ಮಾಡಿದ್ದುಣ್ಣೇ ಮಾರಾಯ್ತಿ…!

‘ಅಲ್ಲಲೇ ರುದ್ರಿ, ಈ ಕ್ವರಾನ ಬಂದೇಟ್ಗೆ ಪ್ರೀತಿ ವಿಸ್ವಾಸ ಸಂಬಂದುಕ್ಕೆಲ್ಲ  ಬೆಲಿನೇ ಇಲ್ದಂಗಾಗೇತಿ’ ಎಂದ ಚಂಬಸ್ಯ.

‘ಅದ್ಯಾಕೆ ಅಂಗಂತಿಯಲೇ?’ ರುದ್ರೇಶಿ ಕೇಳಿದ

‘ಮತ್ತಿನ್ನೇನು?  ವೋದ್ತಿಂಗ್ಳು ನಮ್ಮಣ್ಣುನ್ ಮನಿಗೋಗಿದ್ದೆ. ನನ್ ನೋಡ್ತುದ್ದಂಗೆ ನಮ್ಮತಿಗಿ ಮುಕ ಸಿಂಡರ್ಸಿಕ್ಯಂಡ್ಳು’

‘ಮದಲೇ ನಿಮ್ಮತಿಗೀಗಿ ನಿನ್ ಕಂಡ್ರೆ ಆಗಲ್ಲ. ನೀನ್ಯಾಕ್ ಅಲ್ಗೋಗಿದ್ಯಲೇ?’

‘ನಮ್ ಹಸ ಈದುತ್ತು. ಗಿಣ್ಣುದ್ಹಾಲು ಕೊಡಣಾಂತ ಓಗಿದ್ನಪ್ಪ. ಓಗ್ತಿದ್ದಂಗೆ ಅತ್ತಿಗಿ ಅಲರ್ಟ್ ಆಗಿ ನಾನ್ ಪಾರಿನ್ನಿಂದ ಬಂದ್ನೇನೋ ಅನ್ನೋ ಥರ ನೋಡದಾ? ಬಚ್ಚಲಮನಿಗೆ ಒಡೇಓದ ಅಣ್ಣ ಒಂದ್ ಬಕಿಟ್ ನೀರ್ ತಂದು ವರಗಡೆ ದೂರ ಸೋಪಾಕಿ ಮಕ ಕೈಕಾಲು ಎಲ್ಲ ತಿಕ್ಯಂಡು ತೊಳ್ಕ್ಯಂಡ್ ಬಾ. ಬಕಿಟ ಅಲ್ಲೆ ಬಿಡು. ಒಳಗ್ ತರಬ್ಯಾಡಂದ’

‘ಆಮೇಲೆ…?’

‘ಆಮ್ಯಾಗೇನು? ಅತಿಗಿ, ಅಣ್ಣ, ಅಣ್ಣುನ್‍ಮಕ್ಳು ಎಲ್ರು ಕುಂಡ್ರಕ್ಕೆ   ಕುರ್ಚಿನೂ ಕೊಡದೆ, ನಿಂದ್ರುಸ್ಕ್ಯಂಡೇ ಮಾತಾಡ್ಸುದ್ರು. ಗಿಣ್ಣದ್ಹಾಲು ತಗೊಳ್ರಿ ಅಂದ್ರೆ ಅಲ್ಲೇ ಟೇಬಲ್ ಮ್ಯಾಗಿಟ್ಬಿಡು ಅಂದ್ರು. ಕೊನಿಗ್ ಅತಿಗಿನೇ ಕ್ವರಾನ ಮುಗಿಯಾ ತಂಕ ನಮ್ಮನಿ ಕಡೆ ಬರಬ್ಯಾಡಂತ ಅಂದೇಬಿಟ್ಳು’

‘ಅಯ್ಯೋ ಸಿವ್ನೇ, ನಿನಿಗೆ ಬಾಳ ಇನ್ಸಲ್ಟ ಆಗೇತಿ ಬಸ್ಸಿ!  ಸ್ವಂತ ಮೈದ್ನ ನೀನು. ನಿನ್ ಮ್ಯಾಗೇ ನಿಮ್ಮತಿಗಿ ಯಾಕ್ಹಂಗಾಡತಾಳೋ ಏನೋ?’

‘ನನ್ನಿಂದ ಅಕಿ ಮನಿಯಾಗ್ ಕ್ವರಾನ ಅಂಟ್ತತಿ ಅಂತ ಆಕಿಗ್ ಯೆದರಿಕಿ! ಅದ್ಕೆ ಆಕಿ ಅಂಗಾಡುದ್ದು. ನಾನು ಮನಿಮನಿಗಿ ಹಾಲ್ ಕೊಡ್ತನಿ, ಹುಲ್ಲು-ಬೂಸಾಂತ ಊರೆಲ್ಲ ತಿರುಗತನಿ ಅಂತ ಅಕಿದು ಆರೋಪ’

‘ಅದ್ಸರಿ,  ವೋದ ತಿಂಗ್ಳು ನಡೆದುದ್ ಈ ಇಚಾರನ ಈಗ್ಯಾಕ್ ಯೇಳ್ತದಿಯಪ್ಪಜ್ಜಿ?’

‘ಅಲ್ಲೇ ಐತಿ ನೋಡ್ ಪಾಯಿಂಟು!  ಕ್ವರಾನ ಅಂತ ಅಷ್ಟೆಲ್ಲ ಪಿಸುಣಿ ಮಾಡ್ತುದ್ ನಮ್ಮತ್ಗಿಗೇ ಕ್ವರೋನ ಪಾಸಿಟಿವ್ ಬಂದೈತಿ. ನಿನ್ನಿ ಆಂಬುಲೆನ್ಸಿನ್ಯಾಗ್ ಅಕಿನ್ ಕಕ್ರ್ಯಂದ್ ವೋದ್ರು!’


ಬಿ.ಆರ್.ಸುಬ್ರಹ್ಮಣ್ಯ
sriranga4@rediffmail.com

Leave a Reply

Your email address will not be published.