ದೇಶಾತೀತ, ಕಾಲಾತೀತ ರಾಮ

ದೇಶಾತೀತ, ಕಾಲಾತೀತ ರಾಮ

ಪ್ರೇಮ, ಸಹೋದರತ್ವದಿಂದ ರಾಮ ಮಂದಿರದ ಶಿಲೆಗಳ ಜೋಡಿಸೋಣ:  ಪ್ರಧಾನಿ ಮೋದಿ ಕರೆ

ಅಯೋಧ್ಯೆ, ಆ. 5 – ಪ್ರೇಮ ಹಾಗೂ ಸಹೋದರತ್ವದಿಂದ ರಾಮ ಮಂದಿರದ ಶಿಲೆಗಳನ್ನು ಜೋಡಿಸುವಂತೆ ಕರೆ ನೀಡಿರುವ ಪ್ರಧಾನ ಮಂತ್ರಿ ನರೇಂದ್ರ ಮೋದಿ, ಮರ್ಯಾದಾ ಪುರುಷೋತ್ತಮನ ದಿವ್ಯ – ಭವ್ಯ ಮಂದಿರ ಮುಂದಿನ ಪೀಳಿಗೆಯ ಆಸ್ಥೆ, ಶ್ರದ್ಧೆ ಹಾಗೂ ಸಂಕಲ್ಪದ ಪ್ರೇರಣೆಯಾಗಲಿ ಎಂದು ಕರೆ ನೀಡಿದ್ದಾರೆ.

ರಾಮ ಮಂದಿರಕ್ಕಾಗಿ ಶಿಲಾನ್ಯಾಸ ನೆರವೇರಿಸಿದ ನಂತರ ಆಯೋಜಿಸಲಾಗಿದ್ದ ಸಮಾರಂಭದಲ್ಲಿ ಮಾತನಾಡಿದ ಪ್ರಧಾನಿ, ವರ್ಷಗಳಿಂದ ಟೆಂಟ್ ಕೆಳಗೆ ಇದ್ದ ರಾಮ ಲಲ್ಲಾಗೆ (ಬಾಲಕ ರಾಮ ದೇವರು) ಭವ್ಯ ಮಂದಿರದ ನಿರ್ಮಾಣವಾಗಲಿದೆ. ಶತಮಾನದಿಂದ ನಡೆದು ಬರುತ್ತಿದ್ದ ಕುಸಿಯುವುದು ಮತ್ತೆ ಎದ್ದು ನಿಲ್ಲುವ ಪ್ರಕ್ರಿಯೆಯಿಂದ ರಾಮ ಜನ್ಮಭೂಮಿ ಈಗ ಮುಕ್ತವಾಗಿದೆ ಎಂದಿದ್ದಾರೆ.

ಇಲ್ಲಿನ ಕಟ್ಟಡಗಳು ನಾಶವಾದವು, ಏನೆಲ್ಲಾ ಆಯಿತು. ಅಸ್ತಿತ್ವ ನಾಶಗೊಳಿಸುವ ಎಲ್ಲ ಪ್ರಯತ್ನ ನಡೆದವು. ಆದರೂ, ರಾಮ ನಮ್ಮ ಮನಸ್ಸಿನಲ್ಲಿದ್ದಾನೆ, ನಮ್ಮ ಸಂಸ್ಕೃತಿಯ ಆಧಾರವಾಗಿದ್ದಾನೆ. ಭಗವಾನ್ ರಾಮನ ಶಕ್ತಿ ಅದ್ಭುತ. ರಾಮ ನಮ್ಮ ಮನದಲ್ಲಿ ನಮ್ಮೊಳಗೆ ಬೆರೆತಿದ್ದಾನೆ  ಎಂದು ಪ್ರಧಾನಿ ಹೇಳಿದರು.

ಯಾವುದೇ ಕೆಲಸ ಇದ್ದರೂ ಪ್ರೇರಣೆಗೆ ಭಗವಾನ್ ರಾಮನ ಕಡೆಗೆ ನೋಡುತ್ತೇವೆ. ಶ್ರೀ ರಾಮ ಭಾರತದ ಮರ್ಯಾದೆ, ಶ್ರೀರಾಮ ಮರ್ಯಾದಾ ಪುರುಷೋತ್ತಮ. ಇದೇ ಆಲೋಚನೆಯಿಂದ ಅಯೋಧ್ಯೆಯಲ್ಲಿ ರಾಮ ಜನ್ಮಭೂಮಿಯಲ್ಲಿ ಶ್ರೀ ರಾಮನ ಭವ್ಯ ದಿವ್ಯ ಮಂದಿರಕ್ಕಾಗಿ ಇಂದು ಶಿಲಾನ್ಯಾಸವಾಗಿದೆ ಎಂದವರು ಹೇಳಿದರು.

ಮಾನವತೆಯು ರಾಮನನ್ನು ಸ್ವೀಕರಿಸಿದಾಗ ವಿಕಾಸವಾಗಿದೆ. ರಾಮನಿಂದ ದೂರವಾದಾಗ ವಿನಾಶದ ಮಾರ್ಗ ತೆರೆದಿವೆ ಎಂದು ವ್ಯಾಖ್ಯಾನಿಸಿದ ಮೋದಿ, ಎಲ್ಲರ ಭಾವನೆಗಳನ್ನು ಗೌರವಿಸಬೇಕು. ಎಲ್ಲರೊಂದಿಗೆ ಎಲ್ಲರ ವಿಶ್ವಾಸದೊಂದಿಗೆ ಎಲ್ಲರ ವಿಕಾಸ ಆಗಬೇಕಿದೆ. ನಮ್ಮ ಪರಿಶ್ರಮ, ಸಂಕಲ್ಪ ಶಕ್ತಿಯಿಂದ ಆತ್ಮವಿಶ್ವಾಸಿ ಹಾಗೂ ಆತ್ಮನಿರ್ಭರ್ ಭಾರತದ ನಿರ್ಮಾಣ ಮಾಡಬೇಕಿದೆ ಎಂದು ತಿಳಿಸಿದರು.

ರಾಮ ಮಂದಿರ ನಿರ್ಮಾಣ ಪ್ರಕ್ರಿಯೆಯು ರಾಷ್ಟ್ರವನ್ನು ಜೋಡಿಸುವ ಪ್ರಕ್ರಿಯೆಯೂ ಆಗಿದೆ ಎಂದು ಹೇಳಿರುವ ಮೋದಿ, ಈ ಶಿಲಾನ್ಯಾಸವು ಮನುಷ್ಯನನ್ನು ದೈವತ್ಯದ ಜೊತೆ, ಸಮಾಜವನ್ನು ಶ್ರದ್ಧೆಯ ಜೊತೆ, ವರ್ತಮಾನವನ್ನು ಇತಿಹಾಸದ ಜೊತೆ, ನಮ್ಮನ್ನು ಸಂಸ್ಕಾರಕ್ಕೆ ಜೋಡಿಸುವ ಸಮಾರಂಭ ಎಂದು ಹೇಳಿದರು. ಈ ಐತಿಹಾಸಿಕ ಕ್ಷಣ ಯುಗ ಯುಗಗಳ ವರೆಗೆ ದಿಗ್ ದಿಗಂತವರೆಗೆ ಭಾರತದ ಕೀರ್ತಿಪತಾಕೆ ಹಾರಿಸುತ್ತಿರಲಿದೆ. ಈ ದಿನ ಕೋಟಿ ಕೋಟಿ ರಾಮ ಭಕ್ತರ ಸಂಕಲ್ಪದ ಸತ್ಯದ ಪ್ರಮಾಣವಾಗಿದೆ. ಈ ದಿನ ಸತ್ಯ ಅಹಿಂಸೆ, ಆಸ್ಥಾನ ಹಾಗೂ ಬಲಿದಾನಕ್ಕೆ ನ್ಯಾಯಪ್ರಿಯ ಭಾರತದ ಒಂದು ಅನುಪಮ ಕೊಡುಗೆಯಾಗಿದೆ ಎಂದು ಮೋದಿ ತಿಳಿಸಿದರು.

§ರಾಮ್ ಕಾಜ್ ಕಿನ್ಹೆ ಬಿನು ಮೋಹಿ ಕಹಾ ಬಿಶ್ರಾಮ್‌’ (ಶ್ರೀರಾಮನ ಕೆಲಸ ಮಾಡುವವರೆಗೆ ನನಗೆ ವಿಶ್ರಾಂತಿ ಇಲ್ಲ) ಎಂದು ಹನುಮಂತ ದೇವರು ಆಡಿದ ಮಾತುಗಳನ್ನು ಸ್ಮರಿಸಿದ ಮೋದಿ, ಶಿಲಾನ್ಯಾಸ ಕಾರ್ಯಕ್ರಮಕ್ಕೆ ತಾವು ಆಗಮಿಸಲೇಬೇಕಿತ್ತು ಎಂದು ಹೇಳುವ ಮೂಲಕ ಮಂದಿರ ಹೋರಾಟದಲ್ಲಿ ತಾವು ಗುರುತಿಸಿಕೊಡಿದ್ದನ್ನು ಸೂಚ್ಯವಾಗಿ ತಿಳಿಸಿದರು.

ಕಲ್ಲಿನ ಮೇಲೆ ಶ್ರೀ ರಾಮ ಹೆಸರು ಬರೆದಿದ್ದರಿಂದ ರಾಮ ಸೇತುವೆ ಆಯಿತು. ಅದೇ ರೀತಿ ಮನೆ ಮನೆಯಿಂದ, ಹಳ್ಳಿ ಹಳ್ಳಿಗಳಿಂದ ಶ್ರದ್ಧೆಯಿಂದ ಪೂಜಿಸಲ್ಪಟ್ಟ ಇಟ್ಟಿಗೆಗಳು, ದೇವಾಲಯಗಳಿಂದ ತಂದ ಮಣ್ಣು, ನದಿಯಿಂದ ತಂದ ನೀರನ್ನು ಮಂದಿರ ನಿರ್ಮಾಣಕ್ಕೆ ಬಳಸಲಾಗುತ್ತಿದೆ. ಅಲ್ಲಿನ ಸಂಸ್ಕೃತಿ – ಭಾವನೆ, ಅಯೋಧ್ಯೆಯ ಅಮೋಘ ಶಕ್ತಿಯಾಗಿದೆ. ಇದು ನಿಜವಾಗಿಯೂ ನಭೂತೋ ನಭವಿಷ್ಯತಿ ಎಂಬಂತಹ ಘಟನೆ ಎಂದು ಹೇಳಿದರು.

ತಮಿಳು ರಾಮಾಯಣದಲ್ಲಿ ಬರುವ ‍§ಕಾಲಂತಾಣ್, ಇನ್ನ ಅನುಮ್ ಅರಿತು ಪೋಲಾಮ್’ ಅಂದರೆ ತಡ ಮಾಡಬಾರದು, ಮುನ್ನಡೆಯಬೇಕು ಎಂದು ಹೇಳಲಾಗಿದೆ. ಭಾರತಕ್ಕೆ ಹಾಗೂ ನಮ್ಮೆಲ್ಲರಿಗೂ ಭಗವಾನ್ ರಾಮನ ಸಂದೇಶ ಇದೇ ಆಗಿದೆ. ನಾವೆಲ್ಲರೂ ಮುನ್ನಡೆಯುತ್ತೇವೆ, ದೇಶ ಮುನ್ನಡೆಯುತ್ತದೆ. ರಾಮ ಯುಗ ಯುಗಕ್ಕೆ ಮಾನವರಿಗೆ ಪ್ರೇರಣೆ, ಮಾರ್ಗದರ್ಶನವಾಗಲಿ ಎಂದು ಪ್ರಧಾನಿ ಆಶಿಸಿದರು.

ವೇದಿಕೆಯ ಮೇಲೆ ಉತ್ತರ ಪ್ರದೇಶದ ರಾಜ್ಯಪಾಲೆ ಆನಂದಿಬೆನ್ ಪಟೇಲ್, ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ಆರ್.ಎಸ್.ಎಸ್. ಮುಖ್ಯಸ್ಥ ಮೋಹನ್ ಭಾಗವತ್, ರಾಮ ಜನ್ಮಭೂಮಿ ನ್ಯಾಸದ ಮುಖ್ಯಸ್ಥ ಮಹಾಂತ ನೃತ್ಯ ಗೋಪಾಲ್ ದಾಸ್ ಉಪಸ್ಥಿತರಿದ್ದರು.

Leave a Reply

Your email address will not be published.