ವಿಶ್ವ ಸ್ತನ್ಯಪಾನ ಸಪ್ತಾಹ 2020 : ಎದೆ ಹಾಲು ಪರಿಸರ ಪ್ರೇಮಿ

ಈ ವರ್ಷದ ವಿಶ್ವ ಸ್ತನ್ಯಪಾನ  ಸಪ್ತಾಹದ ಅಂಗವಾಗಿ `ವಾಬಾದ’ ಘೋಷಣೆ ಏನಂದರೆ `ಸ್ತನ್ಯಪಾನವನ್ನು ಬೆಂಬಲಿಸಿ ಪರಿಸರವನ್ನು ರಕ್ಷಿಸಿ’ ಎಂಬುದಾಗಿದೆ. ಈ ಸಪ್ತಾಹವು ಸ್ತನ್ಯಪಾನಕ್ಕೆ ಸಂಬಂಧಿಸಿದ ವಿಷಯಗಳ ಬಗ್ಗೆ ಜನ ಜಾಗೃತಿ ಮೂಡಿಸುವ ಹಾಗು ಕ್ರಮಬದ್ಧಗೊಳಿಸುವ ಜಾಗತಿಕ ಅಭಿಯಾನವಾಗಿದೆ.

1990 ಇನ್ನೊಸೆಂಟಿ ಘೋಷಣೆಯ ನೆನಪಿಗಾಗಿ ಪ್ರತಿ ಆಗಸ್ಟ್ 1-7ರಂದು ವಿಶ್ವ ಸ್ತನ್ಯಪಾನ  ಸಪ್ತಾಹ ಆಚರಿಸಲಾಗುತ್ತದೆ.ಸ್ತನ್ಯಪಾನವನ್ನು ಬೆಂಬಲಿಸಿ, ಪೋಷಿಸಿ ಹಾಗು ಪ್ರೋತ್ಸಾಹಿಸಿವುದು  ಎಲ್ಲಾ ವಿಶ್ವ ಆರೋಗ್ಯ ಸಂಘ ಸಂಸ್ಥೆಗಳು, ಯೂನಿಸೆಫ್‌, ನೀತಿ ನಿರೂಪಕರು ಇದಕ್ಕೆ ಬದ್ಧರಾಗಿದ್ದಾರೆ.  ಎದೆ ಹಾಲುಣಿಸುವಿಕೆಯು ಮಗುವಿಗೆ ಪರಿಪೂರ್ಣವಾದ ಆಹಾರ ಹಾಗು ಆಹಾರ ಭದ್ರತೆಯನ್ನೊದಗಿಸುತ್ತದೆ. ಆರು ತಿಂಗಳು ತುಂಬುವವರೆಗೂ ಎದೆ ಹಾಲನ್ನಲ್ಲದೇ ಬೇರೆ ಏನನ್ನು ಕೊಡಬಾರದು ಹಾಗು ಹುಟ್ಟಿದ ಅರ್ಧ ಗಂಟೆಯೊಳಗೆ ಎದೆ ಹಾಲನ್ನು ಕೊಡಬೇಕು ಎಂದು ವಿಶ್ವ ಸಂಸ್ಥೆ  ಹೇಳುತ್ತದೆ. ಪೌಷ್ಟಿಕವಾದ ಪೂರಕ ಆಹಾರವನ್ನು 7ನೇ ತಿಂಗಳಿನಲ್ಲಿ  ಶುರು ಮಾಡಿ, ಜೊತೆಗೆ ಎರಡು ವರ್ಷಗಳವರೆಗೆ  ಎದೆ ಹಾಲು ಕೊಡುವುದನ್ನು ಮುಂದುವರೆಸುವುದಾಗಿದೆ.

ಭೂತಾಯಿಯ ರಕ್ಷಣೆ ತಾಯಿಯ ಎದೆ ಹಾಲಿನಿಂದ, ಎಂತಹ ಅದ್ಭುತವಾದ ಮಾತು. ಎದೆ ಹಾಲುಣಿಸುವುದನ್ನು ಬೆಂಬಲಿಸುವುದು ಸಮಾಜದದಲ್ಲಿ ಒಂದು ಸಂಚಲನ ತರಲು ಮುಖ್ಯವಾದ ಕಾರ್ಯತಂತ್ರವಾಗಿದೆ.

ಯಾವುದೇ ಸುಸ್ಥಿರವಾದ ಬೆಳವಣಿಗೆಗೆ ಭದ್ರವಾದ ಬುನಾದಿಯ ಅಗತ್ಯವಿದೆ. ಹಾಗೆ ಮಗುವಿನ ಆರೋಗ್ಯಕ್ಕೆ ಭದ್ರವಾದ ಬುನಾದಿಯೆಂದರೆ ತಾಯಿಯ ಎದೆ ಹಾಲು. ಡಾ.ಮೈಕಲ್ ಬ್ಯಾರಿ, ಸ್ಟ್ಯಾನ್ಫೋರ್ಡ್ ಸ್ಕೂಲ್ ನ ಹಿರಿಯ ನಿರ್ದೇಶಕರು ಏನು ಹೇಳುತ್ತಾರೆಂದರೆ, ಅಪೌಷ್ಟಿಕತೆ ಹಾಗು ಬಡತನವೇ ಮುಖ್ಯವಾಗಿ ನೆಲೆಗೊಳ್ಳಲು ಕಾರಣ ಎದೆ ಹಾಲುಣಿಸದಿರುವುದು ಹಾಗು ಹಾಲು ತಯಾರಿಸಲು ಇಲ್ಲಿ ಸ್ವಚ್ಛವಾದ ನೀರು ಕೂಡ ಸಿಗದೇ ಇರುವುದು ಕಾರಣ. ಎದೆ ಹಾಲು ಕುಡಿಸದೇ ಇರುವುದು ತಾಯಿ ಗರ್ಭಿಣಿ ಇದ್ದಾಗ ಧೂಮಪಾನ ಮಾಡುವುದಕ್ಕೆ ಸಮಾನ ಎಂದು ಆರೋಗ್ಯ ವಿಭಾಗದ ಹಿರಿಯ ವಿಜ್ನ್ಯಾನಿ ಹೇಳುತ್ತಾರೆ. ಎದೆ ಹಾಲು ಆರ್ಥಿಕ ವ್ಯವಸ್ಥೆಯ ರಕ್ಷಕ ಹೇಗೆಂದರೆ, ಅಮೆರಿಕೆಯ ಶೇಕಡಾ 90% ತಾಯಿಂದಿರು 6 ತಿಂಗಳ ವರೆಗೆ ಎದೆಹಾಲುಣಿಸಿದರೆ ವಾರ್ಷಿಕವಾಗಿ  13 ಶತಕೋಟಿ ಡಾಲರ್ ನಷ್ಟು ಹಣವನ್ನು ಉಳಿಸಬಹುದಾಗಿದೆ. ಜಾಗತಿಕ ಮಟ್ಟದಲ್ಲಿ ಎದೆ ಹಾಲುಣಿಸುವುದನ್ನು ಹೆಚ್ಚಿಸುವುದರಿಂದ ವಾರ್ಷಿಕವಾಗಿ 20,000 ತಾಯಂದಿರ ಮರಣವನ್ನು, 823,000  ಮಕ್ಕಳ ಮರಣವನ್ನು ಹಾಗು 302 ಶತಕೋಟಿ ಡಾಲರ್ ನಷ್ಟು    ಹಣ ನಷ್ಟವಾಗುವುದನ್ನು ತಪ್ಪಿಸಬಹುದಾಗಿದೆ. ಸದೃಢವಾದ ಪೃಥ್ವಿಯನ್ನು ನಿರ್ಮಿಸಲು, ಎದೆ ಹಾಲುಣಿಸುವುದರಿಂದ ಸಾಧ್ಯವಾಗುತ್ತದೆ. ಅದು ಹೇಗೆ ಎಂಬುದನ್ನು ಅವಲೋಕಿಸೋಣ. 

 ಉದ್ಭವಿಸಿತ್ತಿರುವ ಜಾಗತಿಕ ಆರೋಗ್ಯ ಹಾಗು ಪೌಷ್ಠಿಕ ಆಹಾರದಲ್ಲಿನ  ಬದಲಾವಣೆ : ಇತ್ತೀಚಿನ ದಿನಗಳಲ್ಲಿ ಆರೋಗ್ಯಕ್ಕೆ ಸಂಬಂಧಿಸಿದಂತೆ ಅನೇಕ ಬದಲಾವಣೆಗಳು ಆಗಿದ್ದರೂ ಕೂಡ, ಪದೇ ಪದೇ ಹೊಸ ಸವಾಲುಗಳು, ರೋಗಗಳು ಹುಟ್ಟಿಕೊಳ್ಳುತ್ತಲೇ ಇವೆ. ಹೊಸ ಸಮಸ್ಯೆ ಎಂದರೆ ಈಗ ಎದುರಿಸುತ್ತಿರುವ ಕೋವಿಡ್-19 ಪಿಡುಗು, ನೈಸರ್ಗಿಕ ವಿಕೋಪಗಳು, ಆರೋಗ್ಯ ವ್ಯವಸ್ಥೆಯ ಕೊರತೆ  ಎಲ್ಲವನ್ನೂ   ಎದುರಿಸಬೇಕಾಗಿದೆ. ಜಾಗತಿಕ ಮಟ್ಟದಲ್ಲಿ ಇತ್ತೀಚಿನ  ಚರ್ಚೆಯಲ್ಲಿ, ಪ್ರಕೃತಿಯ ಅಸಮತೋಲನ ಹಾಗು ಎದೆ ಹಾಲುಣಿಸುವಿಕೆಯ ಸಮಸ್ಯೆಗಳ್ಳನ್ನು ಎತ್ತಿ ಹಿಡಿದು  ಹೆಚ್ಚಿನ ರೀತಿಯಲ್ಲಿ, ಈ ಸಮಸ್ಯಗೆ ಬದಲಾವಣೆ ತರಲು ತಾಯಂದಿರ  ಸಹಾಯ ಪಡೆಯುವುದಾಗಿದೆ. ನಿಸ್ಸಂಶಯವಾಗಿ ಎದೆ ಹಾಲುಣಿಸುವಿಕೆಯು  ಪೃಥ್ವಿಯ ಸಂರಕ್ಷಣೆಯಲ್ಲಿ  ಪ್ರಮುಖವಾದ ಪಾತ್ರ ವಹಿಸುವುದರಲ್ಲಿ ಯಾವುದೇ ಸಂದೇಹವಿಲ್ಲ, ಆದರೆ ಈ ಸಂದೇಶವನ್ನು ಯಶಸ್ವಿಯಾಗಿ ಜನರಿಗೆ ತಲುಪಿಸಿ. ಪರಿಸರ ಸಂರಕ್ಷಣೆಯಲ್ಲಿ ತೊಡಗಿರುವ ಗುಂಪುಗಳ ಸಹಕಾರದೊಂದಿಗೆ ಕೈಜೋಡಿಸಿ ಒಟ್ಟಾಗಿ ಕೆಲಸ ಮಾಡುವುದಲ್ಲದೆ ಹೇಗೆ ಪರಿಸರ ಸಂರಕ್ಷಣೆಯಲ್ಲಿ ಎದೆ ಹಾಲುಣಿಸುವಿಕೆಯು  ಪಾತ್ರ ವಹಿಸುತ್ತದೆ ಎಂಬುದನ್ನು ಸ್ಪಷ್ಟೀಕರಿಸಬೇಕಿದೆ. ತಾಯಂದರಿಗೆ ಎದೆ ಹಾಲುಣಿಸಿ, ಪ್ರ್ಯಥ್ವಿಯನ್ನು ಸಂರಕ್ಷಿಸಿ ಎಂದು ತಿಳಿಸಿದರೆ, ಅದರಲ್ಲೂ ಎದೆ ಹಾಲುಣಿಸದ ತಾಯಂದಿರಲ್ಲಿ, ಕೋಪ, ದುಃಖ, ಹತಾಶೆ, ತಮ್ಮಿಂದಾದ ಹಾನಿಯ ಬಗ್ಗೆ  ಬೇಜಾರು ಗೊಳ್ಳುತ್ತಾರೆ. ವಿಶ್ವದಲ್ಲಿ, ಕಡಿಮೆ ಪ್ರಮಾಣದ ಎದೆ ಹಾಲುಣಿಸುವಿಕೆಯನ್ನು ಬ್ರಿಟನ್  ದೇಶದಲ್ಲಿ  ಕಾಣಬಹುದಾಗಿದೆ, ಆದರೆ ತಾಯಂದರಿಗೆ ಎದೆ ಹಾಲುಣಿಸಬಾರದೆಂದೇನೂ ಇಲ್ಲ. ಎದೆ ಹಾಲುಣಿಸಬೇಕು ಎಂದು ಬಯಸುವ  ಹೆಚ್ಚಿನ ತಾಯಿಂದಿರಿಗೆ   ಆಗುತ್ತಿಲ್ಲ. ಅವರ ಕೈಮೀರಿ ಅನೇಕ ಕಾರಣಗಳಿಂದಾಗಿ ಅತ್ಯಂತ ನಿರಾಶರಾಗಿರುವಾಗ, ಪ್ರಯತ್ನ ಮಾಡಿ ಎಂದೊಡನೆ, ಕಿರಿಕಿರಿಗೊಳ್ಳುವರು. ಇವೆಲ್ಲಾ  ಅಡ್ಡಿ-ಆತಂಕಗಳನ್ನು ನಿವಾರಿಸುವತ್ತ ಗಮನವಿಡದೆ,  ಎದೆ ಹಾಲುಣಿಸಿ ಎಂದರೆ ಯಾವುದೇ ಬದಲಾವಣೆ ತರುವುದಿಲ್ಲ. ಇದೇ ತರಹದ ಹೋಲಿಕೆಯುಳ್ಳ, ಪರಿಸರದ ಕಾಳಜಿ ಹಾಗು ಶಿಶುಗಳ ಹಾಲುಣಿಸುವಿಕೆಯ ಸಮಸ್ಯೆಗಳಿಗೆ, ಸಮರ್ಪಕವಾಗಿ ಯಾವುದೇ ತರಹದ  ಯೋಜನೆ ಗಳನ್ನು   ಕಾರ್ಯರೂಪಕ್ಕೆ ತರುವಲ್ಲಿ ವಿಫಲವಾಗಿದೆ. ವೈಯಕ್ತಿಕವಾಗಿ ಎಲ್ಲರ ಪಾತ್ರವು ಮುಖ್ಯವಾಗಿದೆ. ಅಷ್ಟೇ ಅಲ್ಲ, ನಿಜವಾದ ಬದಲಾವಣೆ ಆಗಬೇಕಾದರೆ ಸಮಾಜದ ತೊಡಗುವಿಕೆಯೂ  ಕೂಡ ಮುಖ್ಯವಾಗುತ್ತದೆ.

ಹವಾಮಾನ ಬದಲಾವಣೆ : ಪ್ರಕೃತಿಯ ಶೋಷಣೆ ನಿರಂತರವಾಗಿ  ಮಾನವನಿಂದ ನಡೆಯುತ್ತಿದೆ.ಇಂದಿನ ಜನತೆ ಎದುರಿಸುತ್ತಿರುವ  ಅತ್ಯಂತ ಮುಖ್ಯವಾದ ಸಮಸ್ಯೆ ಎಂದರೆ ಪ್ರಕೃತಿಯ ಶೋಷಣೆಯಿಂದಾಗಿ ಜಾಗತಿಕ  ತಾಪಮಾನದಲ್ಲಿ  ಒಂದು ಡಿಗ್ರಿ ಸೆಂಟಿ ಗ್ರೇಡ್ ನಷ್ಟು ಏರಿಕೆಯಾಗಿದೆ. ಹಸಿರು ಮನೆ ಅನಿಲ ಹೊರಸೂಸುತ್ತಿರುವ ಇಂಗಾಲದ ಡೈಆಕ್ಸೈಡ್, ಮಿಥೇನ್, ನೈಟ್ರಸ್ ಆಕ್ಸೈಡ್ ಮತ್ತು ಮಾನವನ ಚಟುವಟಿಕೆ ಯಿಂದಾಗೆ  ಇನ್ನು ಅನೇಕ ವಿಷಾನಿಲಗಳು ಪರಿಸರಕ್ಕೆ ಹಾನಿ ಉಂಟು ಮಾಡುತ್ತಿವೆ. ಅತ್ಯಾಶ್ಚಕರ ಸಂಗತಿಯೆಂದರೆ ಕೋವಿಡ್-19  ಸಾಂಕ್ರಾಮಿಕ ದಿಂದಾಗಿ, ವಿಷಾನಿಲದ ಹೊರಸೂಸುಸಿವಿಕೆ ಇದ್ದಕ್ಕಿದ್ದ ಹಾಗೆ ಕಡಿಮೆಯಾಗಿದೆ. ಇದರಿಂದ ಮಾನವೇ ಅನೇಕ ಪಾಠಗಳನ್ನು ಕಲಿಯಬೇಕಾಗಿದೆ.ಪೃಥ್ವಿಯ ಸಂರಕ್ಷಣೆಯತ್ತ  ಗಮನಹರಿಸಬೇಕಾಗಿದೆ.ಸಂಪನ್ಮೂಲದ ಅವನತಿಯಿಂದಾಗಿ, ವಾಯು, ನೀರು, ಆಹಾರದ ಮಾಲಿನ್ಯತೆ, ಹೆಚ್ಚುವರಿ ಸಂಪನ್ಮೂಲದ ಬಳಕೆ, ಹೆಚ್ಚಾದ ತ್ಯಾಜ್ಯ ವಸ್ತುಗಳು , ಅನೇಕ ಪ್ರಾಣಿ ಸಂಕುಲಗಳ ನಾಶಕ್ಕೆ, ಮಾನವನ ಹೆಚ್ಚಿದ ಕಾರ್ಯ ಚಟುವಟಿಕಗಳೇ ಕಾರಣ. ನಮ್ಮ ಆಹಾರದ ವ್ಯವಸ್ಥೆ ಹಾಗೂ ಬಳಸುವ ವಿಧಾನ ಕೂಡ ಪ್ರಕೃತಿಯ ಅವನತಿಗೆ ಮತ್ತು ಹವಾಮಾನ ಬದಲಾವಣೆಗೆ ಮುಖ್ಯ ಕಾರಣ.  ವಿಶ್ವವ್ಯಾಪಿ  ಸಾಂಕ್ರಾಮಿಕ  ರೋಗವಾದ  ಕೋವಿಡ್-19 ನಮಗೆಲ್ಲಾ ಇದು ಒಂದು  ಎಚ್ಚರಿಕೆಯ ಘಂಟೆ, ಈಗಲೂ ಕೂಡ ನಾವುಗಳು ಸುಧಾರಿಸದಿದ್ದರೆ ಮುಂದೆ ಇನ್ನೂ ಕೆಟ್ಟ ರೀತಿಯ ಭೀಕರ ಪರಿಣಾಮವನ್ನು ಅನುಭವಿಸುವುದಲ್ಲದೇ, ಮುಂದಿನ ಪೀಳಿಗೆಗೆ ಏನೂ ಇರುವುದಿಲ್ಲ. ಪ್ರಕೃತಿಯ ವಿರುದ್ಧ, ಎಲೆ ಮಾನವ ನೀನು ನನ್ನನ್ನು ಗೆಲ್ಲಲಾರೆ ಎಂಬುದಾಗಿದೆ. ಅದಕ್ಕಾಗಿ ಪ್ರಕೃತಿಯೇ ತನ್ನನ್ನು ರಕ್ಷಿಸಿಕೊಳ್ಳುತ್ತಿದೆ. ಎಲ್ಲಾ  ಸಾಮಾಜಿಕ ಹೊಣೆಯನ್ನು ಹೊತ್ತಿರುವ ಮಾನವ ಎಚ್ಚೆತ್ತು ಕೊಳ್ಳಬೇಕಾಗಿದೆ .ಪೃಥ್ವಿಯನ್ನು ಸಂರಕ್ಷಿಸಲು ನಾವೆಲ್ಲಾ ಕೂಡಿ ಇಂಗಾಲದ ಹೆಜ್ಜೆ ಗುರುತು ಹಾಗು ಪರಿಸರ ವಿಜ್ಞಾನದ ಹೆಜ್ಜೆ ಗುರುತನ್ನು ಕಡಿಮೆ ಮಾಡುವತ್ತ, ಮುಂದಿನ ಪೀಳಿಗೆಗೆ ನಾವು ಕೊಡುವ ಕೊಡುಗುಗಳೇನು ಎಂಬುದನ್ನು ಚಿಂತಿಸಿ ಕಾರ್ಯೋನ್ಮುಖರಾಗಬೇಕಿದೆ. ಎಲ್ಲೆಡೆ ವ್ಯಾಪಿಸುತ್ತಿರುವ  ಕೋವಿಡ್-19 ಕೊಡ ಶಿಶುಗಳ ಆಹಾರದ ಮೇಲೆ ಬೀರುವ ಪರಿಣಾಮವನ್ನು ಎದುರಿಸ ಬೇಕಾಗಿದೆ. 

ಕೃತಕ ಹಾಲು  : ಸುಮಾರು 40ರಿಂದ 50 ಹಾಲು ಉತ್ಪಾದಿಸುವ ಘಟಕಗಳಿವೆ. ಹಾಲಿನ ಉತ್ಪಾದನೆಗಾಗಿ, ಹಸು ಸಾಕಾಣಿಕೆ, ಹುಲ್ಲು, ಮೇವು, ನೀರು, ವಿದ್ಯುತ್, ಸಂಪನ್ಮೂಲಗಳ ಬಳಕೆಯಾಗುವುದು, ಮುಂದೆ ಹಾಲಿನ ಪುಡಿಯನ್ನು ಶೇಖರಿಸಲು ಡಬ್ಬಿಗಳು ಪ್ಯಾಕೇಜಿಂಗ್, ವ್ಯವಸ್ಥೆ, ವಿತರಣೆ, ಗ್ರಾಹಕರಿಗೆ ತಲುಪಲು ಸಾರಿಗೆ ಎಲ್ಲಾ ಲೆಕ್ಕ ಹಾಕಿದರೆ, ನಾವು ಎಷ್ಟು ಪರಿಸರ ಹಾಳು ಮಾಡುತ್ತಲಿದ್ದೇವೆ ಎಂಬುದು ತಿಳಿಯುತ್ತದೆ.

ಪ್ರಕೃತಿಯ ಶೋಷಣೆ ಮತ್ತು ವೆಚ್ಚಗಳು /ಖರ್ಚುಗಳು   : ಎದೆ ಹಾಲುಣಿಸುವಿಕೆ ಹಾಗು ಪರಿಸರ ಬದಲಾವಣೆಯ ಸುತ್ತ ಇರುವ ವಿಜ್ಞಾನ ಏನು ಹೇಳುತ್ತದೆ.ಸ್ತನ್ಯಪಾನ ಮಾಡುವುದರಿಂದ ಕಡಿಮೆ ನೀರು ಹಾಗು ಭೂ ಸಂಪನ್ನ್ಮೂಲದ  ಬಳಕೆಯಾಗುವುದರಿಂದ, ಕಡಿಮೆ ಕಾರ್ಬನ್ ಉತ್ಪಾದನೆ. ಹಾಗಾಗಿ ಅತ್ಯಂತ ಕಡಿಮೆ ಅಥವಾ ಶೂನ್ಯ ತ್ಯಾಜ ಉತ್ಪಾದನೆ ಉಂಟಾಗುವುದು. ಇತ್ತೀಚಿನ ಅಧ್ಯಯನದ ಪ್ರಕಾರ ಒಂದು ಮಗುವಿಗೆ ಆರು ತಿಂಗಳವರೆಗೆ ಎದೆ ಹಾಲುಣಿಸುವುದರಿಂದ 95-153ಕೆಜಿ  ಕಾರ್ಬನ್ ಈ (Carbon e) ಉತ್ಪದಾನೆಯನ್ನು, ಕೃತಕ ಹಾಲಿಗೆ ಹೋಲಿಸಿದಾಗ ತಡೆಗಟ್ಟಬಹುದಾಗಿದೆ. ಎಲ್ಲಾ ಮಕ್ಕಳಿಗೂ ಆರು ತಿಂಗಳವರೆಗೆ, ಬ್ರಿಟನ್ ದೇಶದಲ್ಲಿ ಹಾಲುಣಿಸಿದರೆ ಕಾರ್ಬನ್ ಪರಿಸರಕ್ಕೆ ಹೊರ ಸೂಸುವುದನ್ನು ತಡೆಗಟ್ಟಬಹುದು. ಸುಮಾರು ಕುಟುಂಬಗಳು 54 ಶತಕೋಟಿ  ಡಾಲರ್ ನಷ್ಟು ಹಣವನ್ನು ಕೃತಕ ಹಾಲು ಕೊಳ್ಳಲು ವ್ಯಯಿಸುತ್ತಾರೆ. ವಾರ್ಷಿಕವಾಗಿ ಖಂಡಗಳಲ್ಲಿ ಸುಮಾರು 720 ಟನ್ ನಷ್ಟು ಕೃತಕ ಹಾಲು ಮಾರಾಟವಾಗುತ್ತದೆ. ಇದರಿಂದಾಗಿ ಸುಮಾರು 2-9ಮಿಲಿಯನ್ ಟನ್ ನ್ನಷ್ಟು ಹಸಿರು ಮನೆ ಅನಿಲ ಉತ್ಪಾದನೆಯಾಗುತ್ತದೆ.ಇದಕ್ಕೆ ಸಮನಾದ ಉದಾಹರಣೆ ಕೊಡಬೇಕೆಂದರೆ ,50,000-75,000 ವಾಹನಗಳು ಒಂದು ವರ್ಷದವರೆಗೆ ಓಡಾಡದೇ ಇದ್ದರೆ ಆಗುವ ಪರಿಣಾಮವನ್ನು ಕಲ್ಪಿಸಬಹುದು. 

ಒಂದು ಕೆಜಿ  ಕೃತಕ  ಹಾಲಿನ  ಪುಡಿಯನ್ನು ಉತ್ಪಾದಿಸಲು  ಸುಮಾರು 4700 ಲೀಟರ್‌ನಷ್ಟು ನೀರು ಬೇಕಾಗುತ್ತದೆ. ಅದೇ ಎದೆ ಹಾಲು ಕುಡಿಸುವುದರಿಂದ ಕಡಿಮೆ ಹಸಿರು ಮನೆ ಅನಿಲ ಉತ್ಪಾದನೆ ಹಾಗು ಪರಿಸರ ಮಾಲಿನ್ಯತೆಯನ್ನು ತಡೆಗಟ್ಟ ಬಹುದು. ಎದೆ ಹಾಲುಣಿಸುವುದರಿಂದ, ಸಂಪನ್ಮೂಲಗಳ ಬಳಕೆ, ವಿದ್ಯುತ್, ಪ್ರಕೃತಿಯ ಶೋಷಣೆ, ನೀರು, ಪ್ಯಾಕೇಜಿಂಗ್, ಸಾರಿಗೆಯ ವ್ಯವಸ್ಥೆ ಬೇಕಾಗುವುದಿಲ್ಲ, ಇದರಿಂದಾಗಿ, ಪರಿಸರಕ್ಕೆ ಇಂಗಾಲದ ಹೊರಸೂಸುವಿಕೆ ಹಾಗು ಹಸಿರು ಮನೆ ಅನಿಲದ ಉತ್ಪಾದನೆ ಕಡಿಮೆಯಾಗುವುದಲ್ಲದೆ, ಪರಿಸರ ಮಾಲಿನ್ಯ ತಡೆಗಟ್ಟುವಲ್ಲಿ ಸಹಾಯವಾಗುವುದು. ಹಾಗಾಗಿ  ಎದೆ ಹಾಲನ್ನು ‘ಹಸಿರು’ ಎಂದು ಪರಿಗಣಿಸಲಾಗಿದೆ ಎದೆಹಾಲು ಪರಿಸರ ಪ್ರೇಮಿ.

ಸುಸ್ಥಿರ ಅಭಿವೃದ್ದಿಯ ಬೆಳವಣಿಗೆ : ಮುಂದೆ  ಮಗುವಿನ ಭವಿಷ್ಯದಲ್ಲಿ ಸದೃಢ ಆರೋಗ್ಯವನ್ನು ಹೊಂದಲು  ಮೊಟ್ಟ   ಮೊದಲ ನಿರ್ಣಾಯಕ ಹೆಜ್ಜೆ  ಎಂದರೆ ಎದೆ ಹಾಲುಣಿಸುವಿಕೆ. ತಾಯಿ ಹಾಗು ಮಗುವಿನ ಉಳಿಯುವಿಕೆ ಮತ್ತು ಉತ್ತಮ ಆರೋಗ್ಯಕ್ಕೆ, ಸ್ತನ್ಯಪಾನವನ್ನು  ಸಂರಕ್ಷಿಸಿ, ಪ್ರೋತ್ಸಾಹಿಸಿವುದರಿಂದ ಒಂದು ಪ್ರಾಯೋಗಿಕ ಹೆಜ್ಜೆಯಾಗಿ, 2030ರ ಸುಸ್ಥಿರ ಬೆಳವಣಿಗೆಯ ಗುರಿಗಳೊಂದಿಗೆ ಬೆಸಿದಿದೆ. 

ಸಾಧಿಸಬೇಕಾದ 17 ಜಾಗತಿಕ ಸುಸ್ಥಿರ ಬೆಳವಣಿಗೆಯ ಗುರಿಗಳು: ಮುಖ್ಯವಾಗಿ ಗಮನಹರಿಸ ಬೇಕಾದ ವಿಷಯವೇ ನೆಂದರೆ 17 ಜಾಗತಿಕ ಸಮರ್ಥನೀಯ ಬೆಳವಣಿಗೆಗೆ ಅಭಿವೃದ್ಧಿಗೊಳಿಸುವ ಯೋಜನೆಗಳನ್ನು ಹೊಂದಿದೆ.  ಅದರಲ್ಲಿ ಸುಮಾರು ಗುರಿಗಳ್ಳನ್ನು ತಲಪಲು ಎದೆ ಹಾಲುಣಿಸುವಿಕೆಯ ಪಾತ್ರ ಅತ್ಯಂತ ವಿಶೇಷವುಳ್ಳದ್ದಾಗಿದೆ. 2020 ರೊಳಗೆ, ವಿಶ್ವದಾದ್ಯಂತ ಗುರಿ ಮುಟ್ಟವುದಾಗಿದೆ.  

1. ಗುರಿಗಳಾದ 1, 8 ಮತ್ತು 10 ರ ದ್ಯೇಯಗಳೆಂದರೆ, ಬಡತನದ ನಿರ್ಮೂಲನೆ, ಆರ್ಥಿಕ ಬೆಳವಣಿಗೆಗೆ ಪ್ರೋತ್ಸಾಹ,ಅಸಮತೋಲನ ತೊಲಗಿಸುವಿಕೆ. ಎದೆ ಹಾಲುಣಿಸುವುದರಿಂದಾಗಿ ಬಡತನದ ನಿರ್ಮೂಲನೆಗೆ ಅವಶ್ಯವಾಗಿದೆ.ಎದೆಹಾಲು ನೈಸರ್ಗಿಕವಾದದು, ಸ್ವಚ್ಛ, ಸುಲಭವಾಗಿ ದೊರಕುವುದು, ಯಾವುದೇ ರೀತಿಯ ಕುಟುಂಬಕ್ಕೆ ಹೆಚ್ಚಿನ ಆರ್ಥಿಕ ಹೊರೆಯಾಗದು. ಮಗುವಿಗೆ ಆರೋಗ್ಯಕರವಾದ ಬೆಳವಣಿಗೆಗೆ  ಬೇಕಾದ ಎಲ್ಲಾ ಪೌಷ್ಠಿಕತೆ ಒದಗಿಸುವದರಿಂದ, ಎದೆ ಹಾಲು ಆರ್ಥಿಕವಾಗಿ ಸಹಾಯ ಮಾಡುತ್ತದೆ. ಹೆಚ್ಚಿನ ರೀತಿಯಲ್ಲಿ ಎದೆ ಹಾಲುಣಿಸುವಿಕೆಯಿಂದಾಗಿ ವಾರ್ಷಿಕವಾಗಿ 320 ಬಿಲಿಯೆನ್ ಡಾಲರಿನಷ್ಟು ಹೆಚ್ಚಿನ ಆರ್ಥಿಕ ಆದಾಯವು ಜಗತ್ತಿನ ಆರ್ಥಿಕ ವ್ಯವಸ್ಥೆಗೆ  ಶೇಕಡ 0.5%ನಷ್ಟು ಸೇರ್ಪಡೆಯಾಗುತ್ತದೆ. 

ಹಾಲುಣಿಸುವುದರಿಂದ ಹಸಿವಿನ ಅಂತ್ಯ, ಆಹಾರದ ಭದ್ರತೆ ಹಾಗು ಉತ್ತಮವಾದ ಪೌಷ್ಠಿಕವಾದ ಆಹಾರ ಹಾಗು ಸುಸ್ಥಿರ ವ್ಯವಸಾಯಕ್ಕೆ ಪ್ರೋತ್ಸಾಹವನ್ನೂ ನೀಡುತ್ತದೆ. ಆರು ತಿಂಗಳವರೆಗೆ ಎದೆಹಾಲು ಹಾಗು ಪೂರಕವಾದ ಆಹಾರ ಆರು ತಿಂಗಳ ನಂತರ ಕೊಡುವುದರಿಂದ, ತಾಯಿ ಹಾಗು ಮಗುವಿನ ಆರೋಗ್ಯ ಸುಧಾರಿಸುವುದಲ್ಲದೇ, ಅಪೌಷ್ಠಿಕತೆಯನ್ನು ಹೋಗಲಾಡಿಸುತ್ತದೆ.  ಬೊಜ್ಜುತನವನ್ನು ತಡೆಗಟ್ಟುತ್ತದೆ, ಶಿಶುಗಳಿಗೆ ಆಹಾರ ಸುಭದ್ರತೆಯನ್ನು ಒದಗಿಸುತ್ತದೆ. ಎದೆ ಹಾಲುಣಿಸುವಿಕೆಯು ಅತ್ಯುತಮವಾದ ಒಂದು ಸಾಧನ, 5 ವರುಷದೊಳಗಿನ ಮಕ್ಕಳ ಸಾವನ್ನು ಕಡಿಮೆ ಮಾಡುತ್ತದೆ.  

ಗುರಿ 4-ಶಿಕ್ಷಣದ ಬಗ್ಗೆ, ಎದೆ ಹಾಲುಂಡು ಬೆಳದ ಮಕ್ಕಳಲ್ಲಿ ಬುದ್ಧಿಮತ್ತೆ ಹೆಚ್ಚಾಗಿರುವುದು ಕಂಡುಬಂದಿದೆ. ಜಾಗತಿಕ ಶಿಕ್ಷಣದ ಗುರಿ ತಲಪಲು ಸಹಾಯವಾಗುತ್ತದೆ. 

ಗುರಿ 5- ರಲ್ಲಿ ಲಿಂಗ ಭೇದ ಆಸಮಾನತೆಗೆ ಒತ್ತು  ನೀಡಲಾಗಿದೆ.  ಎದೆ ಹಾಲುಣಿಸುವಿಕೆ ಯಿಂದಾಗಿ, ತಾಯಿಗೆ ಸಹಜವಾದ ಗರ್ಭ ನಿರೋಧಕವಾಗಿ ಕೆಲಸ ಮಾಡುವುದು ಹಾಗು ಕೆಲಸ ಮಾಡುವ ಜಾಗಗಳಲ್ಲಿ ಆಕೆಗೂ ಸಮಾನವಾದ ಹಕ್ಕುಗಳಿಗೆ ಭಾದ್ಯಳಾಗಿದ್ದಾಳೆ.

ಗುರಿ 12 ರಲ್ಲಿ ಸ್ತನ್ಯಪಾನ ಮಾಡಿಸಲು ಯಾವುದೇ ಕಾರ್ಖಾನೆಗಳ ಅವಶ್ಯವಿರುವುದಿಲ್ಲ, ಇದು  ನಿಸರ್ಗದತ್ತವಾದದ್ದು. ಹಾಗಾಗಿ ಸಂಪನ್ಮೂಲ ಗಳ ಅವಶ್ಯವಿರದೆ ಇರುವುದರಿಂದ, ಪ್ರಕೃತಿಯ ರಕ್ಷಣೆಗೆ ಮುಖ್ಯ ಕಾರಣ.

ಎದೆಹಾಲುಣಿಸುವಿಕೆಯು,ಪೌಷ್ಟಿಕತೆ,ಆರೋಗ್ಯ ಹಾಗು ಉತ್ತಮ ಜೀವನವನ್ನು ಮಕ್ಕಳಿಗೆ ಹಾಗು ತಾಯಂದರಿಗೆ ಒದಗಿಸುವುದಕ್ಕೆ, 2020 ಸುಸ್ಥಿರ ಅಭಿರುದ್ದಿಗೆ ಕಾರಣವಾದ ಗುರಿಗಳನ್ನು ತಲುಪಲು ಇದು ಒಂದು ಕೇಂದ್ರ ಬಿಂದುವಾಗಿದೆ.ಸ್ತನ್ಯಪಾನ ವನ್ನು ಹೆಚ್ಚಿಸುವುದರಿಂದ, 820,000 ಕ್ಕೂ ಹೆಚ್ಚು 5 ವರ್ಷದೊಳಗಿನ ಮಕ್ಕಳ ಜೀವವನ್ನು ಉಳಿಸಬಹವುದಾಗಿದೆ. 

ಕಡಿಮೆ ಎದೆ ಹಾಲು ಕುಡಿದು ಅಥವಾ ಎದೆ ಹಾಲು ಕುಡಿಯದೆ ಬೆಳದ ಮಕ್ಕಳಿಗೆ  ಹೋಲಿಸದರೆ  ಎದೆ ಹಾಲನ್ನು ಹೆಚ್ಚು, ಕನಿಷ್ಠ ಎರಡು ವರ್ಷಗಳವರೆಗೆ  ಕುಡಿದು ಬೆಳದ, ಮಕ್ಕಳು ಅನೇಕ ಸೋಂಕುಗಳಿಂದ ರಕ್ಷಿಸಲ್ಪಡುವರು. ಹಾಗಾಗಿ ಇವರಲ್ಲಿ ಮರಣ ಸಂಖ್ಯೆ ಕಡಿಮೆ ಪ್ರಮಾಣದಲ್ಲಿ  ಇರುವುದು.

ಎದೆ ಹಾಲುಣಿಸುವಿಕೆಯಿಂದ, ಕ್ಯಾನ್ಸರಿನಿಂದಾಗಿ 20,000 ತಾಯಿಂದಿರ ಮರಣ ಹೊಂದುವದನ್ನು ತಪ್ಪಿಸಬಹುದು. ಅಷ್ಟೇ ಅಲ್ಲ ಸಕ್ಕರೆ ಕಾಯಿಲೆ ಕೂಡ ಕಡಿಮೆ ಪ್ರಮಾಣದಲ್ಲಿ ಇರುವುದಲ್ಲದೆ, ಅಂಡಾಣುವಿನ ಕ್ಯಾನ್ಸರ್ ಆಗುವುದು ಕೂಡ ಕಡಿಮೆ.

ಗುರಿ 5 -ದುಡಿಯುವ ಮಹಿಳೆ. ವಿಶ್ವದಲ್ಲಿ 40.6% ದುಡಿಯುವ ಮಹಿಳೆಗೆ ಮಾತ್ರ ಕಾಯಿದೆ ಪ್ರಕಾರ ಹೆರಿಗೆ ರಜ ಪಡೆಯುವದಕ್ಕೆ  ಭಾದ್ಯರಾಗಿದ್ದರೆ. ದುಡಿಯುವ ಮಹಿಳೆಗೆ, ಎದೆ ಹಾಲುಣಿಸಲು ಆಕೆಯ ಕೆಲಸವೇ, ಆಕೆಗೆ ದೊಡ್ಡ ಅಡ್ಡಿ. ಹಾಗಾಗಿ ಆಕೆ ಎದೆ ಹಾಲು ಬೇಗನೆ ನಿಲ್ಲಿಸಲು ಇದು  ಒಂದು ಕಾರಣ. ತಾಯಂದರಿಗೆ ಹೆರಿಗೆ ಭತ್ಯೆ, ದುಡಿಯುವ ಜಾಗಗಳಲ್ಲಿ ಆಕೆಗೆ ಬೆಂಬಲ ಹಾಗು ಸಹಾಯದಿಂದಾಗಿ, ಶೇಕಡಾ 30%ರಷ್ಟು ಎದೆ ಹಾಲುಣಿಸುವ ಪ್ರಮಾಣವನ್ನು ಹೆಚ್ಚಿಸಿದೆ. 

ಎದುರಿಸಬೇಕಾದ ಸವಾಲುಗಳು : ಮಾನವನ   ಸತತ ಪರಿಸರದ ಶೋಷಣೆ ಹಾಗು ,ಅಖಂಡ ನೈಸರ್ಗಿಕ ಸಂಪನ್ಮೂಲಗಳ ಸವಕಳಿ ಹಾಗು ಹಾನಿಯಿಂದಾಗಿ ಜನ ಜೀವನ ಅಸ್ತ್ಯವ್ಯಸ್ತವಾಗಿದೆ.ಹಸಿರು ಮನೆ ಅನಿಲದ ಹೊರಸೂಸುವಿಕೆ  ಕೊಡ  ಹೆಚ್ಚಾಗಿದೆ. ನಾವು ಈಗ ನಮ್ಮ ಭೂಸಂಪತ್ತನ್ನು  ಕಾಪಾಡುವುದಲ್ಲದೇ, ನಮ್ಮ ಆರೋಗ್ಯವನ್ನು  ಕೊಡ ರಕ್ಷಿಸಿಕೊಳ್ಳಬೇಕಾಗಿದೆ. ಅದಕ್ಕಾಗಿ ಭೂಮಿ, ಜಲ, ನೈಸರ್ಗಿಕ ಶಕ್ತಿಯನ್ನು ಯಥೇಚ್ಛವಾಗಿ ಬಳಸದೆ ಇತಿಮಿತಿಯಲ್ಲಿ ಉಪಯೋಗಿಸಿ, ಸಂಪನ್ಮೂಲ ಗಳನ್ನು ರಕ್ಷಣೆ ಮಾಡುವುದಾಗಿದೆ.ಸುಸ್ಥಿರ ಬೆಳವಣಿಗೆಯಡಿ, ನಿರ್ದಿಷ್ಟ ಮಾರ್ಗಸೂಚಿಗಳನ್ನು ಕೊಡಲಾಗಿದೆ.ಎದೆ ಹಾಲುಣಿಸುವಿಕೆಯು ಕೊಡ ಇದಕ್ಕೆ ಮುಖ್ಯ  ಸಂಪರ್ಕ ಕೊಂಡಿಯಾಗಿದೆ.

ಸುಸ್ಥಿರ  ಅಭಿವೃದ್ದಿಯ ಬೆಳೆವಣಿಗೆಗೆ   ಪರಿಹಾರ: ಮೊತ್ತ ಮೊದಲ ಆದ್ಯತೆ ಪ್ರಕೃತಿಯ ಸಂರಕ್ಷಣೆ. ಪ್ಯಾರಿಸ್ ನಲ್ಲಿ ನಡೆದ ಒಪ್ಪಂದದ ಮೇರೆಗೆ 20015-2030 ರ  ಗುರಿಗಳನ್ನು ಮುಟ್ಟಲು ತೀವ್ರವಾಗಿ ಕೆಲಸ ಮಾಡಬೇಕಿದೆ.ಅದರಲ್ಲೂ 2025 ರ  ಗುರಿ ಎದೆ ಹಾಲುಣಿಸುವುದಾಗಿದೆ. ಸುಸ್ಥಿರ ಉತ್ಪಾದನೆ ಹಾಗು ಬಳಕೆಯಲ್ಲಿನ  ರೀತಿಗಳು ನಮ್ಮ ಪ್ರಕೃತಿಯನ್ನು ಕಾಪಾಡುವಲ್ಲಿ, ನೈಸರ್ಗಿಕ ಸಂಪನ್ಮೂಲವನ್ನು ರಕ್ಷಿಸುವಲ್ಲಿ ಸ್ತನ್ಯಪಾನವು ಪಾತ್ರವು  ಕೊಡ ಮುಖ್ಯ.ಇತ್ತೀಚಿನ ಜಾಗತಿಕ  ಸನ್ನೀವೇಶದಲ್ಲಿ, ಮಂದಗತಿಯಲ್ಲಿ ಏರುತ್ತಿರುವ ಎದೆ ಹಾಲುಣಿಸುವಿಕೆ. ಏರುತ್ತಿರುವ ಕೃತಕ ಹಾಲು ಉತ್ಪಾದಿಸುವ ಕಾರ್ಖಾನೆಗಳು, ಈಗ   ಪ್ರಪಂಚವೇ ಏದುರಿಸಿತ್ತಿರುವ  ತುರ್ತು ಪರಿಸ್ಥಿತಿಗಳು (ಕೋವಿಡ್-19), ತುಂಬ ಕಳವಳಕಾರಿಯಾಗಿದೆ.ಹಾಗಾಗಿ ಎಲ್ಲ ಹಂತದಲ್ಲೂ, ಪ್ರಕೃತಿಯ ಸಂರಕ್ಷಣೆಯಲ್ಲಿ ಎದೆ ಹಾಲಿನ ಮಹತ್ವವನ್ನು ಅರಿತು ಅದನ್ನು ಪೋಷಿಸಿ, ಬೆಂಬಲಿಸಿ ಹಾಗು ಸಮರಕ್ಷಿಸಿ, ’ಸಧೃಡ ಜಗತ್ತು ನಿರ್ಮಿಸಿ’. ಈ ಒಳ್ಳೆಯ ಕಾರ್ಯಕ್ಕೆ ಎಲ್ಲರು ಕೈಗೂಡಿಸಿ. 

ಈ ವರ್ಷ ಸ್ತನ್ಯಪಾನ ಸಾಪ್ತಾಹದ  ಅಂಗವಾಗಿ 17 ಸಮರ್ಥನೀಯ ಬೆಳವಣಿಗೆಯ ಗುರಿಯನ್ನು ಹೊಂದಿದೆ. 2030ರ ವೇಳೆಗೆ ವಿಶ್ವದಾದ್ಯಂತ ಎಲ್ಲ ದೇಶಗಳು ಗುರಿ ತಲುಪಲು ಕಾರ್ಯ ನಿರ್ವಹಿಸ ಬೇಕಾಗಿದೆ. ಸತ್ಯಾಸತ್ಯತೆ ಏನೆಂದರೆ ಜಗತ್ತಿನಾದ್ಯಂತ ಎದೆ ಹಾಲುಣಿಸುವ ಪ್ರಮಾಣದಲ್ಲಿ  ಯಾವುದೇ ಏರಿಕೆ ಇಲ್ಲ, ಎರಡು ದಶಕಗಳಿಂದಲೂ ಅಷ್ಟೇ ಇದೆ, ಶೇ. 40ಕ್ಕಿಂತಲೂ ಕಡಿಮೆ ತಾಯಂದಿರು ಎದೆ ಹಾಲು ಉಣಿಸುತ್ತಾರೆ.

ಡಾ. ನ್ಯೆಜೆಲ್ ರೋಲಿನ್ಸ್ (2020)   : ಆರೋಗ್ಯಕರವಾದ ಪರಿಸರ ಹಾಗೂ ಮನುಷ್ಯನ ಆರೋಗ್ಯಕ್ಕೆ ಕಾರಣವಾದ ಎದೆ ಹಾಲುಣಿಸುವಿಕೆಯಲ್ಲಿ ಕಡಿಮೆ ಪ್ರಮಾಣ ಉಂಟಾಗುವುದಕ್ಕೆ ನಮ್ಮ  ಸುತ್ತಲಿನ ಜವಾಬ್ದಾರಿಯುತ  ಸಮಾಜದ  ಪ್ರತಿಯೊಬ್ಬರು  ಕಾರಣಕರ್ತರು  ಎಂದು ಹೇಳುತ್ತಾರೆ.  ಇದಕ್ಕಾಗಿ ನಾವು, ನೀವುಗಳು ಎಲ್ಲಾ ಹಂತಗಳಲ್ಲಿಯೂ ಹೇಗೆ ಕೆಲಸ ಮಾಡಬಹುದು ಎಂಬುದನ್ನು ಯೋಚಿಸಿ ಕಾರ್ಯ ನಿರ್ವಹಿಸಬೇಕಾಗಿದೆ. ಪ್ರತಿಯೊಬ್ಬರೂ ಜವಾಬ್ಧಾರಿಯನ್ನರಿತು ತಾವು ಕೊಡ  ಪೃಥ್ವಿಯ ಸಂರಕ್ಷಣೆಯಲ್ಲಿ  ಪಾಲ್ಗೊಳ್ಳುವುದು   ಕರ್ತವ್ಯವೆಂದು  ತಿಳಿದು ಸಕ್ರಿಯವಾಗಿ ಪಾಲ್ಗೊಂಡು ತಮ್ಮ ಮಹತ್ವದ ಪಾತ್ರವನ್ನು  ಅರಿಯಬೇಕಿದೆ.

೧. ಮೊಟ್ಟ ಮೊದಲನೆಯದಾಗಿ, ತಾಯಂದರಿಗೆ, ಸಮರ್ಪಕವಾಗಿ ಎದೆ ಹಾಲುಣಿಸುವುದರ ಬಗ್ಗೆ ಸರಿಯಾದ ಮಾಹಿತಿ ಸಿಗದೇ ಇರುವುದೇ  ಕಾರಣ, ತಾಯಿ ತನ್ನ ಗರ್ಭವಾಸ್ಥೆಯಲ್ಲೇ ಇರುವಾಗ, ಎದೆ ಹಾಲಿನ  ಮಹತ್ವ ತಿಳಿಸುವುದು, ಆಕೆಯ ಸ್ತನ ಪರೀಕ್ಷೆ ಮಾಡಿ, ಸಣ್ಣ ಪುಟ್ಟ ತೊಂದರೆಗಳು ಇದ್ದಲ್ಲಿ ಸರಿಪಡಿಸುವುದು.ಸೂಕ್ತವಾದ ಸಮಯವೆಂದರೆ, ಆಕೆ ತನ್ನ ಪ್ರಸವಪೂರ್ವ ಪರೀಕ್ಷೆಗೆ ಬಂದಾಗ,ಮಹಿಳಾ ಡಾಕ್ಟರುಗಳು, ದಾದಿಯರು, ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕೆಲಸಗಾರರು, ಎದೆ ಹಾಲಿನ ಮಾಹಿತಿ ಒದಗಿಸುವುದು.

2. ಎದೆ ಹಾಲುಣಿಸುವಿಕೆಯ ಬಗ್ಗೆ ಕೌಶಲ್ಯಭರಿತ ನುರಿತ ತರಬೇತುದಾರರಿಂದ  ಸಮುದಾಯದಲ್ಲಿ ಸರಿಯಾದ   ಮಾಹಿತಿ ದೊರಕುವಂತೆ ಮಾಡುವುದು. ಹಾಗಾಗಿ ಎಲ್ಲಾ ಆರೋಗ್ಯಕಾರ್ಯಕರ್ತರನ್ನು ಹಾಗು ಸಮುದಾಯದಲ್ಲಿ ಸಮರ್ಥವಾಗಿ ಎದೆ ಹಾಲುಣಿಸಿ ಮಕ್ಕಳನ್ನು ಪೋಷಿಸಿ ಬೆಳೆಸಿದ ಮಹಿಳೆಯರನ್ನು ಗುರುತಿಸಿ, ಅವರಿಗೂ ಕೊಡ ತರಬೇತಿ ಕೊಟ್ಟು, ಎದೆ ಹಾಲುಣಿಸುವಿಕೆಯಲ್ಲಿ ತಾಯಂದರಿಗೆ ಸಹಾಯ ಮಾಡುವುದಾಗಿದೆ.

3.ಕೃತಕಹಾಲಿನ ಮಾಹಿತಿ ಬಗ್ಗೆ ಅತಿಯಾದ ಜಾಹೀರಾತಿನ ಹಾವಳಿಯನ್ನು ತಪ್ಪಿಸಲು ಐ.ಎಂ.ಯಸ್. ಕಾನೂನಿನ ಸಮರ್ಪಕವಾದ ಬಳಕೆ, ಕಡ್ಡಾಯವಾಗಿ ಇನ್ನೂ ಹೆಚ್ಚಿನ  ರೀತಿಯಲ್ಲಿ ಉಪಯೋಗಿಸಿ,ಕೃತಕ ಹಾಲಿನ ಬಳಕೆಯನ್ನು ನಿಲ್ಲಿಸುವುದು.

4. ರಾಷ್ಟ್ರೀಯ ಆರೋಗ್ಯ ನಿಯಮದಡಿ ಎಲ್ಲಾ ಹೆರಿಗೆ ಆಸ್ಪತ್ರೆಗಳಲ್ಲಿ ಹಾಗು ಹೆರಿಗೆ ಕೊಠಡಿಗಳಲ್ಲಿ, ಶಿಶು ಸ್ನೇಹಪರ ಹತ್ತು ಸೂತ್ರಗಳನ್ನು ಅಳವಡಿಸಿ, ಸಮರ್ಥವಾಗಿ ಎದೆ ಹಾಲಿಣಿಸಲು ಅನಕೂಲವಾಗುವಂತೆ ಕ್ರಮಗಳನ್ನು ಪಾಲಿಸುವುದು.   

5. ಉದ್ಯೋಗಸ್ಥ ಮಹಿಳೆಯರಲ್ಲಿ ಎದೆ ಹಾಲುಣಿಸುವಿಕೆ ಕಡಿಮೆಯಾಗಿದೆ. ಯಾಕೆಂದರೆ ಆಕೆಗೆ ಮರಳಿ ಕೆಲಸ ಸೇರುವ ಒತ್ತಡ ದುಡಿಯುವ ಮಹಿಳೆಗೆ, ಬೇಕಾದ ಹೆರಿಗೆ ಭತ್ಯೆ, ಹೆರಿಗೆ ರಜಾ, ಉದ್ಯೋಗ ಮಾಡುವ ಕಡೆ ಎದೆ ಹಾಲುಣಿಸಲು ಪ್ರತ್ಯೇಕವಾದ ಕೊಠಡಿ ಹಾಗು ವೇತನ ಸಹಿತ  ಬಿಡುವು ಕೊಡುವುದರಿಂದ, ಆರು ತಿಂಗಳವರೆಗೆ ಎದೆ ಹಾಲುಣಿಸಲು ಸಹಕಾರಿಯಾಗುವುದು ಎಲ್ಲಾ  ಅನುಕೂಲತೆಗಳ ಬಗ್ಗೆ  ಉದ್ಯಮಿಗಳು ಕಲ್ಪಿಸಿ ಕೊಡಲು ಮನವಿ ಮಾಡುವುದು. 

6. ವೇತನ ಸಹಿತ ಪೋಷಕರ ಸಂರಕ್ಷಣೆಗಾಗಿ ಇರುವ ಕಾರ್ಯನೀತಿಗಳನ್ನು ಅನುಸರಿಸಿ, ಲಿಂಗ ಸಮಾನತೆಯಯನ್ನು ಎತ್ತಿ ಹಿಡಿಯಬೇಕಾಗಿದೆ.

7. ಸ್ಥಳೀಯ ಉದ್ಯಮಿಗಳೊಂದಿಗೆ ಚರ್ಚಿಸಿ, ಅವರು ಹೇಗೆ ತಮ್ಮ ಉದ್ಯೋಗ  ಸ್ಥಳಗಳಲ್ಲಿ ಎದೆ ಹಾಲುಣಿಸುವಿಕೆಯನ್ನು ಬೆಂಬಲಿಸುತ್ತಿದ್ದಾರೆ ಎಂಬುದನ್ನು ತಿಳಿದುಕೊಂಡು ಉದ್ಯೋಗ  ಸ್ಥಳಗಳನ್ನು ‘ಕುಟುಂಬ ಸ್ನೇಹಪರ’ವನ್ನಾಗಿ  ಪರಿವರ್ತಿಸುವುದು. 8.ಸರ್ಕಾರದ ಮುಖಾಂತರ ಸ್ವಲ್ಪ ಬಜೆಟನ್ನು, ಸ್ತನ್ಯಪಾನದ ಆಚರಣೆಗಾಗಿ  ವ್ಯಯಸುವುದಲ್ಲದೆ, ಇದರೊಟ್ಟಿಗೆ ಮಾಲಿನ್ಯತೆ    ತಡೆಯುವಲ್ಲಿ ಪ್ರಯತ್ನಿಸಬೇಕು.

ಇಂಗಾಲ ಹಾಗು ನೀರಿನ ಹಾನಿಯುಂಟಾಗು ವುದನ್ನು ತಡೆಯುವತ್ತ ಎಲ್ಲ ಕಾರ್ಯಕ್ರಮಗಳಲ್ಲಿ ಎದೆ ಹಾಲಿನ ಮಹತ್ವದ ಬಗ್ಗೆ ತಿಳಿಸುವುದಲ್ಲದೆ, ಪರಿಸರದ ಸಂರಕ್ಷಣೆಯ ಬಗ್ಗೆ ತಿಳಿಯಪಡಿಸುವುದು.

9. ರಾಜಕೀಯ ವ್ಯಕ್ತಿಗಳಿಗೆ ಹಾಗು ನಗರದ ಮುಖಂಡರುಗಳಿಗೆ ಎದೆಹಾಲಿನ ಮಹತ್ವದ ಬಗ್ಗೆ ತಿಳಿಸಿ ಸಮರ್ಥನೀಯ  ಅಭಿವೃದ್ಧಿಯ ಬೆಳವಣಿಗೆಗೆ ಸಹಕಾರ ಕೋರುವುದು. 

10. ತರಬೇತಿಯ ಹಂತದಲ್ಲಿಯೇ ಎಲ್ಲಾ ಡಾಕ್ಟರಗಳಿಗೆ ಹಾಗು ಆರೋಗ್ಯ ಸಿಬ್ಬಂದಿಯವರಿಗೆ ಪಠ್ಯಕ್ರಮದಲ್ಲಿ ಸ್ತನ್ಯಪಾನದ  ಮಹತ್ವದ ಬಗ್ಗೆ ಅಳವಡಿಸುವುದು.


ಡಾ.ಲತಾ ಜಿ.ಎಸ್.
ಪ್ರಾಧ್ಯಾಪಕರು
ಮಕ್ಕಳ ವಿಭಾಗ, ಎಸ್.ಎಸ್. ವೈದ್ಯಕೀಯ ಮಹಾವಿದ್ಯಾಲಯ ಮತ್ತು ಸಂಶೋಧನಾ ಕೇಂದ್ರ, ದಾವಣಗೆರೆ.

Leave a Reply

Your email address will not be published.